ಸುಂಟಿಕೊಪ್ಪ, ಆ. ೧೭: ಸುಂಟಿಕೊಪ್ಪ,- ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಇತ್ತೀಚೆಗೆ ಸಚಿವರನ್ನು ನೇಮಕ ಮಾಡಿದ ಸಂದರ್ಭ ಕೊಡಗಿನಲ್ಲಿ ಪ್ರತಿ ಬಾರಿಯೂ ಗೆದ್ದು ಬಂದAತಹ ಶಾಸಕರಿಗೆ ಸಚಿವ ಸ್ಥಾನ ನೀಡದೆ ಕಡೆಗಣಿಸಿರುವುದು ಇಡೀ ಕೊಡಗಿನ ಜನತೆಗೆ ಬೇಸರದ ವಿಷಯವಾಗಿದೆ. ಐದು ಬಾರಿ ಗೆಲುವು ಸಾಧಿಸಿರುವ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರಿಗೆ ಸಚಿವ ಸ್ಥಾನ ನೀಡದೆ ಕೊಡಗಿನ ಬಗ್ಗೆ ಅರಿವಿಲ್ಲದವರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದು ಸಮಂಜಸವಲ್ಲ. ಬಿಜೆಪಿ ಪಕ್ಷ ಪ್ರತಿ ಬಾರಿ ಸರ್ಕಾರ ರಚಿಸುವಾಗಲೂ ಕೊಡಗಿನ ಶಾಸಕರ ಬೆಂಬಲವನ್ನು ಪಡೆದೇ ಸರ್ಕಾರ ರಚಿಸುತ್ತದೆ. ಆದರೆ ಅಂತಹ ಶಾಸಕರಿಗೆ ಸಚಿವ ಸ್ಥಾನ ನೀಡದೆ ವಂಚಿಸಿರುವುದು ಎಷ್ಟು ಸರಿ. ಶಾಸಕ ಅಪ್ಪಚ್ಚು ರಂಜನ್ ಅವರು ಅಧಿಕಾರಕ್ಕಾಗಲಿ ಹಣದ ಮೋಹಕ್ಕಾಗಲಿ ಒಳಗಾಗದೆ ಪಕ್ಷಕ್ಕೆ ದ್ರೋಹ ಬಗೆಯದೆ ತಮಗೆ ವಹಿಸಿದ ಕೆಲಸ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಾ ಬಂದಿರುತ್ತಾರೆ. ಅದಕ್ಕೆ ಜನರು ಅವರನ್ನು ಜನಪ್ರಿಯ ನಾಯಕ ಶಾಸಕ ಎಂದು ಗುರುತಿಸಿ ಕೊಂಡಿರುತ್ತಾರೆ. ಜಲಪ್ರಳಯ, ಅತಿವೃಷ್ಟಿ, ಕೊರೊನಾದಿಂದ ಹಾನಿಗೊಳಗಾದ ಪುಟ್ಟ ಜಿಲ್ಲೆ ಕೊಡಗು. ಆದರೆ ಇಂತಹ ಜಿಲ್ಲೆಗೆ ಬಿಜಿಪಿ ಸರಕಾರ ಸರ್ಕಾರ ರಚಿಸಿದಾಗಲೂ ಕೊಡಗಿಗೆ ಮಲತಾಯಿ ಧೋರಣೆಯನ್ನು ಮಾಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿಗಳು ಕೊಡಗನ್ನು ಪರಿಗಣನೆಗೆ ತೆಗೆದುಕೊಂಡು ಕೊಡಗನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಶಾಸಕ ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯನವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳನ್ನು ಸರಕಾರ ಎದುರಿಸ ಬೇಕಾಗುತ್ತದೆ. ಹಲವಾರು ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಪ್ರತಿಭಟನೆಗೆ ಮುಂದಾಗಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹೋಬಳಿ ಘಟಕದ ಅಧ್ಯಕ್ಷ ನಾಗೇಶ್ ಪೂಜಾರಿ, ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ, ಮನು, ಮಂಜು, ಗೌರವ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ, ಕಾರ್ಯದರ್ಶಿ ಬಿ.ಆರ್. ಸಂತೋಷ್, ಸಹಕಾರ್ಯದರ್ಶಿ ಸಿಖಂದರ್, ಸದಸ್ಯರಾದ ಥೋಮಸ್, ಕ್ಲೆಮೆಂಟ್ ಡಿಸೋಜ, ಹಮೀದ್, ಮಣಿ, ಹಾಜರಿದ್ದರು.