ಮಡಿಕೇರಿ, ಆ. ೧೭: ಕೋವಿಡ್ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕೊಡಗು ಜಿಲ್ಲೆಯಲ್ಲಿ ಜಾರಿಗೆ ತರಲಾಗಿರುವ ವೀಕೆಂಡ್ ಕರ್ಫ್ಯೂ ಹಾಸ್ಯಾಸ್ಪದವಾಗಿದ್ದು, ಇದರಿಂದ ಶ್ರಮಿಕ ವರ್ಗಕ್ಕೆ ನಷ್ಟವಾಗುತ್ತಿದೆ. ಪ್ರಭಾವಿಗಳು ಹಿಂಬಾಗಿಲಿನಿAದ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆ, ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಈ ನಿಯಮವನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊರವೇ ಅಧ್ಯಕ್ಷ ಪವನ್ ಪೆಮ್ಮಯ್ಯ ಕಾನೂನಿನ ಚೌಕಟ್ಟಿನಡಿ ಕರ್ಫ್ಯೂ ಎನ್ನುವ ಉಲ್ಲೇಖವನ್ನೇ ಲಘುವಾಗಿ ಪರಿಗಣಿಸುವ ಪರಿಸ್ಥಿತಿಯನ್ನು ಸೃಷ್ಟಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ಮತ್ತು ಭಾನುವಾರ ಅಗತ್ಯ ವಸ್ತುಗಳ ಖರೀದಿಗೆಂದು ಬೆಳಗ್ಗೆ ೫ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಈ ವೇಳೆಯಲ್ಲಿ ಜನಜಾತ್ರೆಯೇ ನಡೆಯುತ್ತದೆ, ಅಲ್ಲದೆ ಅಗತ್ಯ, ಅನಗತ್ಯ ವಸ್ತುಗಳೆಲ್ಲವೂ ಮಾರಾಟವಾಗುತ್ತದೆ. ಮಧ್ಯಾಹ್ನದ ನಂತರ ಕರ್ಫ್ಯೂ ಕಾರಣ ಬಂದ್ ಎಂದು ಹೇಳಲಾಗುತ್ತದೆ. ಆದರೆ ರಾಜಾರೋಷವಾಗಿ ವಾಹನಗಳ ಸಂಚಾರವಿರುತ್ತದೆ, ಪ್ರಭಾವಿಗಳು ವ್ಯಾಪಾರದಲ್ಲಿ ತೊಡಗಿರುತ್ತಾರೆ. ಪ್ರಾಮಾಣಿಕರಾಗಿರುವ ಶ್ರಮಿಕ ಜೀವಿಗಳು ಮಾತ್ರ ಸರ್ಕಾರದ ನಿಯಮಾನುಸಾರ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲಿ ಕುಳಿತಿರುತ್ತಾರೆ. ಬಹುತೇಕ ಹಳೆಯ ವರ್ತಕರು ಅರ್ಧದಿನದ ಕಿರಿಕಿರಿಯೇ ಬೇಡವೆಂದು ವಾರದ ಕೊನೆಯ ಎರಡು ದಿನವೂ ಬಂದ್ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ.
ಕೊಡಗಿನಲ್ಲಿ ಶುಕ್ರವಾರ ರಾತ್ರಿ ೯ ಗಂಟೆಯಿAದ ಸೋಮವಾರ ಬೆಳಗ್ಗೆ ೫ ಗಂಟೆಯವರೆಗೆ ನಾಮಕಾವಸ್ತೆಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶುಕ್ರವಾರ ೯ ಗಂಟೆಯೊಳಗೆಯೇ ಪ್ರವಾಸಿಗರು ಬಂದು ತಂಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಸೋಮವಾರದವರೆಗೂ ಪ್ರವಾಸಿಗರು ಇಲ್ಲೇ ಉಳಿಯುತ್ತಿದ್ದಾರೆ, ಇದು ಯಾವ ರೀತಿಯ ವೀಕೆಂಡ್ ಕರ್ಫ್ಯೂ ಎಂದು ಪವನ್ ಪೆಮ್ಮಯ್ಯ ಪ್ರಶ್ನಿಸಿದ್ದಾರೆ.