ಗೋಣಿಕೊಪ್ಪ ವರದಿ, ಆ. ೧೭ ; ಶಿಷ್ಯ ವೇತನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ ಹೇಳಿದರು. ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಿಷ್ಯವೇತನ ಯೋಜನೆಯಿಂದ ವೀರಾಜಪೇಟೆ ತಾಲೂಕಿನ ಸಾವಿರಾರು ರೈತರ ಮಕ್ಕಳಿಗೆ ಲಾಭವಾಗಲಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೃತ್ತಿಪರ ಶಿಕ್ಷಣ ಹೊರತು ಪಡಿಸಿ ಪಿಯುಸಿ, ಐಟಿಐ, ಡಿಪ್ಲೊಮಾ, ಬಿಎ, ಬಿಎಸ್ಸಿ, ಬಿ.ಕಾಂ, ಎಲ್ಎಲ್ಬಿ, ಪ್ಯಾರಾ ಮೆಡಿಕಲ್, ಬಿ. ಫಾರ್ಮ್, ನರ್ಸಿಂಗ್, ಎಂಬಿಬಿಎಸ್, ಬಿಇ, ಬಿ.ಟೆಕ್ ಸ್ನಾತಕೋತ್ತರ ಶಿಕ್ಷಣ ಪಡೆಯುವವರಿಗೆ ಆರ್ಥಿಕ ಪ್ರೋತ್ಸಾಹವಿದೆ. ೩ ಸಾವಿರದಿಂದ ೧೧ ಸಾವಿರದವರೆಗೂ ಶಿಷ್ಯ ವೇತನ ಪಡೆಯಲು ಅವಕಾಶವಿದೆ. ಹೆಣ್ಣು ಮಕ್ಕಳಿಗೆ ರೂ. ೫೦೦ ಹೆಚ್ಚು ಪ್ರೋತ್ಸಾಹ ಧನ ದೊರೆಯಲಿದೆ. ರಾಜ್ಯದ ಯಾವುದೇ ಭಾಗದಲ್ಲಿ ಉಳುಮೆ ಮಾಡುವಂತಹ ರೈತನ ಹೆಸರಿನಲ್ಲಿ ಜಮೀನು ಇರುವವರಿಗೆ ಮಕ್ಕಳ ಶಿಕ್ಷಣ ಪಡೆಯಲು ಹೆಚ್ಚು ಅನುಕೂಲವಾಗಲಿದೆ. ಇದರ ಪ್ರಯೋಜನ ಪಡೆಯಲು ಪಾಲಕರು ಮುಂದೆ ಬರಬೇಕು. ಮಕ್ಕಳನ್ನು ಪಾಲನೆ ಮಾಡುವವರು ಪ್ರಯೋಜನ ಪಡೆಯಬಹುದು. ಶಿಕ್ಷಣ ಸಂಸ್ಥೆಗಳಲ್ಲಿ ಇದರ ಅರ್ಜಿ ಸ್ವೀಕಾರ ಚಟುವಟಿಕೆ ನಡೆಯಲಿದೆ ಎಂದರು. ಗೋಷ್ಠಿಯಲ್ಲಿ ಪ್ರ. ಕಾರ್ಯದರ್ಶಿ ತೋರೀರ ವಿನು, ಕಾರ್ಯದರ್ಶಿ ಮಂದಣ್ಣ ಇದ್ದರು.