ಕುಶಾಲನಗರ, ಆ. ೧೭: ಒಂದು ಪಕ್ಷದಲ್ಲಿ ಇದ್ದುಕೊಂಡು ಇತರ ಪಕ್ಷಗಳಿಗೆ ಪರೋಕ್ಷ ಬೆಂಬಲ ವ್ಯಕ್ತ ಪಡಿಸುವುದು ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ. ಈ ರೀತಿಯ ಚಟುವಟಿಕೆಯಿಂದ ಪಕ್ಷದ ಅಭಿವೃದ್ಧಿ ಅಸಾಧ್ಯ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಜೀವಿಜಯ ಹೇಳಿದರು. ಅವರು ಕುಶಾಲನಗರ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪಕ್ಷದ ನಡುವೆ ಅಸಮಾಧಾನಗೊಂಡವರು ತಮ್ಮ ನಿಲುವನ್ನು ವೇದಿಕೆಯಲ್ಲಿ ಪ್ರಕಟಿಸ ಬೇಕೇ ಹೊರತು ಸಾರ್ವಜನಿಕವಾಗಿ ಪ್ರಕಟಿಸಿದಲ್ಲಿ ಗುಂಪುಗಾರಿಕೆ ಹುಟ್ಟಲು ಅವಕಾಶ ಕಲ್ಪಿಸುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾರ್ಯಕರ್ತರು ಮತ್ತು ಪ್ರಮುಖರು ತಾಳ್ಮೆಯಿಂದ ಇರಬೇಕು, ಆ ಮೂಲಕ ಪಕ್ಷದಲ್ಲಿ ಹಂತ ಹಂತವಾಗಿ ಸ್ಥಾನ ಗಳಿಸಲು ಸಾಧ್ಯ ಎಂದರು.
ಡಿಸಿಸಿ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಸಣ್ಣಪುಟ್ಟ ಅಸಮಾಧಾನಗಳು ಸಾಮಾನ್ಯವಾಗಿದ್ದು, ಮುಂಬರುವ ಚುನಾವಣೆಯನ್ನು ಎದುರಿಸಲು ಕಾರ್ಯಪ್ರವೃತರಾಗಬೇಕಿದೆ. ಪಕ್ಷದಲ್ಲಿ ಎಲ್ಲಾ ಹಂತಗಳಲ್ಲಿ ಒಗ್ಗಟ್ಟು ಮೂಡಿದಲ್ಲಿ ಗುರಿಮುಟ್ಟಲು ಸಾಧ್ಯ ಎಂದರು. ಯಾವುದೇ ಸಂದರ್ಭ ಪಕ್ಷವನ್ನು ತೊರೆಯುವುದು ಉತ್ತಮ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಂತ್ ಕುಮಾರ್ ಮಾತನಾಡಿ, ಬೂತ್ ಮಟ್ಟದಲ್ಲಿ ವಲಯ ಸಮಿತಿ ಗಳನ್ನು ರಚಿಸುವುದು, ಕಾರ್ಯಕರ್ತರ ಸೇರ್ಪಡೆ ಕಾರ್ಯರೂಪದಲ್ಲಿದೆ, ಕಾರ್ಯಕರ್ತರು ಪಕ್ಷದ ಬೆನ್ನೆಲು ಬಾಗಿದ್ದು, ಮುಂಬರುವ ಚುನಾವಣೆಗೆ ಪಕ್ಷವನ್ನು ಸದೃಢವಾಗಿ ಕಟ್ಟಲು ಪಣ ತೊಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ವಿವಿಧ ಬ್ಲಾಕ್ ಅಧ್ಯಕ್ಷರುಗಳಿಗೆ ಕಾರ್ಯಪ್ರವೃತ್ತರಾಗು ವಂತೆ ಪಕ್ಷದ ಧ್ವಜ ನೀಡಿ ಪಕ್ಷ ಸಂಘಟಿಸಲು ಪ್ರಮುಖರು ಸೂಚಿಸಿದರು.
ಸಭೆಯಲ್ಲಿ ಡಿಸಿಸಿ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಕುಮುದಾ ಧರ್ಮಪ್ಪ, ಸುನಿತಾ, ಬಾನಂಡ ಪ್ರಥ್ಯು, ಎಸ್.ಎನ್. ರಾಜಾರಾವ್, ಕೆ.ಎಂ. ಲೋಕೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಉಸ್ಮಾನ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಪಿ.ಸಿ. ಹಸೈನಾರ್, ವಕ್ತಾರ ಸುರೇಶ್ ಸೇರಿದಂತೆ ವಲಯ, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.