ಹಸಿವಾಡದೆ ಊರೊಳಗೆ ಭಿಕ್ಷಾನ್ನಗಳು ಉಂಟು

ತೃಷೆಯಾದಡೆ ಕೆರೆ ಹಳ್ಳ ಬಾವಿಗಳು ಉಂಟು

ಅAಗ ಶೀತಕ್ಕೆ ಬೀಸಾಟ ಅರಿವೆಗಳು ಉಂಟು

ಶಯನಕ್ಕೆ ಹಾಳು ದೇಗುಲಗಳು ಉಂಟು....ಶರಣೆ ಅಕ್ಕಮಹಾದೇವಿಯ ಮಾತುಗಳೇ ಭರವಸೆ ಎಂಬAತೆ ಸುಮಾರು ೧೨,೦೦೦ ಮೈಲಿಗಳನ್ನು ಪಾದಯಾತ್ರೆಯ ಮೂಲಕ ಪೂರೈಸಿ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳನ್ನು ಕ್ರಮಿಸುವ ಯೋಚನೆ -ಯೋಜನೆಗಳೊಂದಿಗೆ ೨೦೨೦ ರ ನವೆಂಬರ್ ೧ ರಂದು ಬೀದರ್ ಜಿಲ್ಲೆಯ ವನಮಾರ್ಪಳ್ಳಿಗೆ ಕಾಲಿಟ್ಟ ಚಿಂತಕ, ಲೇಖಕ, ನಿರೂಪಕ ತಾ. ೧೮ ರಂದು (ಇಂದು) ಮಡಿಕೇರಿ ತಲುಪಲಿದ್ದಾರೆ. ಜನರ ಬದುಕಿನ ಹೆಜ್ಜೆಗಳನ್ನು, ಚಿಂತನೆಗಳನ್ನು ಸದ್ದಿಲ್ಲದೇ ಬದಲಿಸಹೊರಟ ಈ ಚಿಂತಕನ ಹೆಸರು ವಿವೇಕಾನಂದ. ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಇವರ ವಿಚಾರಧಾರೆಗೆ ಒಳಪಡದ ಅಂಶಗಳೇ ಇಲ್ಲ. ಇವರ ಬರಹಗಳನ್ನು ಓದಿದವರಿಗೆ ಅದರ ಅರಿವಿದೆ. ಇತಿಹಾಸದಲ್ಲಿ ಎಂ ಎ., ಪತ್ರಿಕೋದ್ಯಮದಲ್ಲಿ ಡಿಪ್ಲೋಮೊ ಪಡೆದಿದ್ದಾರೆ.

ಒಬ್ಬ ಶಿಕ್ಷಕನ ಮಗನಾಗಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಇವರ ಚಿಂತನೆಯೇ ಮಾನವ ಪ್ರೀತಿಗೆ ಇವರ ಮೊದಲ ಕೊಡುಗೆ. ಆ ಸಮಯದಲ್ಲಿ ಅವರಿಗೆ ಹೊಳೆದ ದಾರಿಗಳು ಎರಡು. ಒಂದು, ತಮ್ಮ ಬರಹಗಳನ್ನು ಇನ್ನೂ ತೀವ್ರಗತಿಯಲ್ಲಿ ಮುಂದುವರಿಸುವುದು. ಎರಡು, ಮನುಷ್ಯರನ್ನು, ಅವರ ಸಮಸ್ಯೆಗಳನ್ನು ಅರಿಯಲು ಪ್ರಯತ್ನಿಸುವುದು. ಈ ಎರಡನೇ ದಾರಿಗೆ ಅವರು ಆಯ್ಕೆ ಮಾಡಿಕೊಂಡಿರುವ ವಿಧಾನವೇ ಜ್ಞಾನ ಭಿಕ್ಷಾ ಪಾದಯಾತ್ರೆ. ಜಾತಿ ಮತ -ಧರ್ಮಗಳೆನ್ನುವ ಸಿನಿಕತನದಿಂದ ದೂರಾಗಿ ಮಾನವೀಯ ಮೌಲ್ಯಗಳ ಹುಡುಕಾಟದಲ್ಲಿ ಸಾಗಿದೆ ಪಯಣ... ಅವರೇ ಹೇಳುವ ಹಾಗೆ ನಾವು ವಿಜ್ಞಾನ ತಂತ್ರಜ್ಞಾನ ಎಲ್ಲದರಲ್ಲೂ ಬೆಳೆಯುತ್ತಾ ಇದ್ದೇವೆ.

ಆದರೆ ಕುಸಿಯುತ್ತ ಹೋಗುತ್ತಿರುವುದು ಏನು? ಅದೇ ಮಾನವೀಯ ಮೌಲ್ಯ. ಮಠ -ಮಠದ ಅದೀಶರು, ಪತ್ರಕರ್ತರು. ರಾಜಕಾರಣಿಗಳು, ವೈದ್ಯರು, ಶಿಕ್ಷಕರು, ಪೋಲೀಸರು, ಮಾಧ್ಯಮದವರು ಹೀಗೆ ಸಮಾಜದ ಬೆಳವಣಿಗೆಗೆ ಪ್ರಧಾನ ಪಾತ್ರ ವಹಿಸುವವರು ಎಂದು ಯಾರನ್ನು ನಾವು ಹೇಳುತ್ತೇವೆಯೋ, ಅವರ ಮನದಲ್ಲಿ ಹೆಚ್ಚು ಹೆಚ್ಚು ಮೌಲ್ವಿಕ ಚಿಂತನೆಗಳನ್ನು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಅಂಥ ಜನರೊಂದಿಗೆ ೧,೦೦೦ ಕ್ಕೂ ಅಧಿಕ ಸಂವಾದಗಳನ್ನು ಇವರು ನಡೆಸಿದ್ದಾರೆ. ಶಾಲೆ -ಕಾಲೇಜು, ಆಸ್ಪತ್ರೆ, ಅನುಭವ ಮಂಟಪ, ತೆರೆದ ಮೈದಾನ ಹೀಗೆ ಎಲ್ಲೆಲ್ಲಿ ಮನುಷ್ಯರ ಒಡನಾಟ ಸಾಧ್ಯವೋ ಅಲ್ಲೆಲ್ಲ ಜನರೊಂದಿಗೆ ಬೆರೆತಿದ್ದಾರೆ.

ಯೋಚಿಸಿ, ತಾನು -ತನ್ನದು ಎನ್ನುವ ಲೋಕದಲ್ಲಿ ನಾವೆಲ್ಲ ಬದುಕುವ ಹೆಣಗಾಟದಲ್ಲಿ ಮಗ್ನರಾಗಿರುವಾಗ, ಯಾವುದೇ ಸಂಘಟನೆಗಳ ಸಹಕಾರವಿಲ್ಲದೆ, ಯಾರಿಂದಲೂ ಧನ ಸಹಾಯ ಪಡೆಯದೆ, ಯಾರ ಪ್ರಭಾವಕ್ಕೂ ಒಳಗಾಗದೆ ಮಲಿನಗೊಳ್ಳುತ್ತಿರುವ ಸ್ನೇಹ ಸಂಬAಧಗಳ ಆರೋಗ್ಯಕರ ರಕ್ಷಣೆಗಾಗಿ ಸಾಗಿದೆ ಈ ಪಾದಯಾತ್ರೆ. ಯಾವ ಅಡೆತಡೆಗಳು ಬಂದರೂ ಅವುಗಳನ್ನು ಎದುರಿಸಿ ನಡೆಯಬಲ್ಲೆನೆಂಬ ದೃಢತೆಯಾಗಲಿ, ಮಳೆ ಚಳಿಎನ್ನದೆ ಪಾದಯಾತ್ರೆಯ ಮೂಲಕ ೧೨,೦೦೦ ಮೈಲಿಗಳನ್ನು ಕ್ರಮಿಸುತ್ತೇನೆ ಎನ್ನುವ ನಿಲುವಾಗಲಿ ಎಲ್ಲ ಪರಿಸರಕ್ಕೂ ದೇಹವನ್ನು ಒಗ್ಗಿಸಿಕೊಳ್ಳಬಲ್ಲೆ ಎನ್ನುವ ಧೈರ್ಯವಾಗಲಿ, ಸಾಮಾನ್ಯವೇನಲ್ಲ. ಈ ದಿಟ್ಟತನವೇ ಶ್ಲಾಘನಾರ್ಹ. ಪ್ರಕೃತಿಯನ್ನು ಆಸ್ವಾದಿಸುತ್ತಾ, ಸರಳ ಜೀವನದ ಸಂದೇಶವನ್ನು ಸಾರುತ್ತಾ ಬರುತ್ತಿರುವ ಈ ಚಿಂತಕನ ಗುರಿ ಒಂದೇ... ಮನುಷ್ಯರ ಹುಡುಕಾಟ. ಈಗಾಗಲೇ ಹತ್ತು ಸಾವಿರಕ್ಕೂ ಅಧಿಕ ಜನರೊಂದಿಗೆ ಬೆರೆತ ಧನ್ಯತಾ ಭಾವ ಇವರ ಮಾತು -ಬರಹಗಳಲ್ಲಿ ವ್ಯಕ್ತ.

ಮಾನವೀಯ ಸಂಬAಧಗಳೆಲ್ಲ ವಾಣಿಜ್ಯೀಕರಣಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಚಿಂತಕನೊಬ್ಬನ ಈ ಪಾದಯಾತ್ರೆಯಿಂದ ಸ್ನೇಹ ಸಂಬAಧಗಳು ಬೆಸೆದು ಇಡೀ ಮನುಕುಲ ಸದ್ಗುಣ ಸಂಪನ್ನವಾಗುತ್ತದೆ ಎನ್ನುವ ಹುಂಬ ನಂಬಿಕೆ ಅವರಲ್ಲಿ ಇಲ್ಲ. ಮೌಲ್ಯಗಳ ಬೆಳವಣಿಗೆಗೆ ಕಿಂಚಿತ್ತು ಜನಮನ ಮಿಡಿದರೂ ಸಾಕು, ಅದೇ ತೃಪ್ತಿ ಅವರಿಗೆ.

ಏನೇ ಇರಲಿ, ಮನುಜ ಪ್ರೀತಿಯ ಇವರ ಅಂತಃಕರಣಕ್ಕೆ, ನಿಸ್ವಾರ್ಥ ಮನದ ಈ ಒಲವಿಗೆ ಒಳಿತಾಗಲಿ ಎಂದು ಬಯಸೋಣ, ಅಲ್ಲವೇ.. ಎಸ್. ವಿ. ಪರಮೇಶ್ವರ ಭಟ್ಟರ ಸಾಲುಗಳು ಹಾಗೆ ನೆನಪಿಗೆ ಬಂತು....

ನಾನೊಬ್ಬ ನಿದ್ದೆಯ ಮಾಡಿದೆನಾದರೆ

ಅದು ನನ್ನ ಒಬ್ಬನ ಹಿತಕೆ

ನಾನೊಬ್ಬ ಎಚ್ಚೆತ್ತು ದುಡಿಯುವುದಾದರೆ

ಅದು ಲೋಕದೆಲ್ಲರ ಹಿತಕೆ....

-ಜಯಲಕ್ಷಿö್ಮ ಕೆ., ಮಡಿಕೇರಿ.