ಮಡಿಕೇರಿ,ಆ. ೧೭: ೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ನೋವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ, ಅದು ಸಣ್ಣ ನೋವೇನೂ ಅಲ್ಲ, ಹೆತ್ತ ತಾಯಿಯ ಎದುರು ಮಗ ಸಾವನ್ನಪ್ಪುವ ರೀತಿಯಲ್ಲಿ ಕಟ್ಟಿದ ಮನೆ, ಬೆಳೆಸಿದ ಕೃಷಿ ತೋಟಗಳು ನಾಶವಾಗಿವೆ: ರೈತಾಪಿ ವರ್ಗದ ಸಂಕಷ್ಟ ಹೇಳಲಾಗದು ಎಂದು ಹಿರಿಯ ಸಾಹಿತಿ ನಾಗೇಶ್ ಕಾಲೂರು ಅಭಿಪ್ರಾಯಪಟ್ಟರು.

ಇಲ್ಲಿನ ಹೊಟೇಲ್ ಲೀ ಕೂರ್ಗ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರದ ಯುವ ಬರಹಗಾರ, ನಮ್ಮ ಕೊಡಗು ತಂಡದ ನೌಷಾದ್ ಜನ್ನತ್ತ್ ಬರೆದ ಜಲಪ್ರಳಯ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಕೊಡಗಿನವರಿಗೆ ಮಳೆಗಾಲ ಹೊಸತಲ್ಲ, ಮಳೆಗೆ ಸಂಭ್ರಮಿಸುವವರು, ಹಿಂದೆ ಆರು ತಿಂಗಳ ಕಾಲ ಮಳೆ ಇದ್ದರೂ ಹೆದರುತ್ತಿರಲಿಲ್ಲ, ಆದರೆ, ೨೦೧೮ರ ಆಶ್ಲೇಷ ಮಳೆಯ ಅವಾಂತರ ವಿಪರೀತವಾಗಿತ್ತು ಎಂದು ಹೇಳಿದರು. ಪ್ರಕೃತಿ ವಿಕೋಪಕ್ಕೆ ಪ್ರಾಕೃತಿಕ ಅಸಮತೋಲನ ಹಾಗೂ ಮಾನವ ನಿರ್ಮಿತ ಕಾಮಗಾರಿಗಳೇ ಕಾರಣವೆಂದು ಹೇಳಿದ ಅವರು, ಪ್ರಾಕೃತಿಕ ಸಮತೋಲನ ನೋಡಿ ಕೊಂಡು ಪರಿಸರಕ್ಕೆ ಪೂರಕವಾದ ಪ್ರಗತಿಯಾಗಬೇಕೆಂದು ಹೇಳಿದರು. ಸಂಕಷ್ಟದ ಸಮಯದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದ ಸಂದರ್ಭ ಕೆಲವರು ತೇಜೋವಧೆ ಮಾಡಿದರು. ಯಾರೂ ಸಹಾಯ ಮಾಡುವವರನ್ನು ತೇಜೋವಧೆ ಮಾಡದೆ ಸಾಧ್ಯವಾದರೆ ಕೈಯ್ಯಲ್ಲಾದಷ್ಟು ಪರೋಪಕಾರ ಮಾಡುವಂತೆ ಮನವಿ ಮಾಡಿದರು. ಕೊಡಗಿನಲ್ಲಾದ ಪ್ರಕೃತಿ ವಿಕೋಪ ಸಂದರ್ಭದ ವಿದ್ಯಮಾನಗಳನ್ನು ಲೇಖಕ ನೌಷಾದ್ ಜಲಪ್ರಳಯದಲ್ಲಿ ಚಿತ್ರಿಸಿರುವದಾಗಿ ಅವರು ಹೇಳಿದರು.

ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವದರ ಮೂಲಕ ಉದ್ಘಾಟಿಸಿದ ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರು ಮಾತನಾಡಿ ಪ್ರಕೃತಿ ವಿಕೋಪ ಸಂದರ್ಭ ಅನುಭವಿಸಿದ ನೋವು ಗಳನ್ನು ನೌಷಾದ್ ಜಲಪ್ರಳಯದಲ್ಲಿ ತೋಡಿಕೊಂಡಿದ್ದಾರೆ. ಪ್ರಕೃತಿಯಲ್ಲಿ ದುರಂತಗಳು ಸಂಭವಿಸುತ್ತಲೇ ಇರುತ್ತವೆ. ಈಗಾಗಲೇ ಮಡಿಕೇರಿಯ ಎರಡು ಭಾಗ ಕುಸಿದಿವೆ, ಇನ್ನೊಂದು ಭಾಗ ಕುಸಿದರೆ ಮಡಿಕೇರಿ ಇರುವದಿಲ್ಲವೆಂದು ಆತಂಕ ವ್ಯಕ್ತಪಡಿಸಿದರು.

ಅತಿಥಿಯಾಗಿದ್ದ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪ್ರಕೃತಿ ವಿಕೋಪವನ್ನು ನಾವೆಲ್ಲರೂ ಹತ್ತಿರದಿಂದ ನೋಡಿದ್ದು, ಇನ್ನೂ ಕೂಡ ಬದುಕು ಹಸನಾಗಲಿಲ್ಲ, ಪ್ರಳಯ, ಕೊರೊನಾದಿಂದಾಗಿ ಮುಖ ಮುಚ್ಚಿಕೊಂಡು ಹೋಗುವ ಪ

ರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು. ಮನಸ್ಸಿಗೆ ಹತ್ತಿರವಾಗುವ ಸರಳ ಭಾಷೆಯಲ್ಲಿ ಬರೆಯುವದು ಕತೆಗಾರನಿಗಿರಬೇಕಾದ ಶೈಲಿ, ನೌಷಾದ್‌ರ ಬರಹಗಳು ಸರಳವಾಗಿ ಮನ ಮುಟ್ಟುವಂತಿದೆ ಎಂದು ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲೊಕೇಶ್ ಸಾಗರ್ ಮಾತನಾಡಿ, ಹೋರಾಟಗಾರನಾಗಿ ರುವ ನೌಷಾದ್‌ನನ್ನು ಕೊಡಗಿನ ಸನ್ನಿವೇಶ ಸಾಹಿತಿಯನ್ನಾಗಿ ಮಾಡಿದೆ. ಪರಿಷತ್ತು ವತಿಯಿಂದ ಪ್ರತಿ ಕಾರ್ಯಕ್ರಮಗಳಲ್ಲಿ ಪುಸ್ತಕ ಸಂತೆ ತೆರೆಯುವ ಮೂಲಕ ಲೇಖಕರುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪುಸ್ತಕ ಮಳಿಗೆ ತೆರೆದು ಸಾಹಿತ್ಯಾಸಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇರುವದಾಗಿ ಹೇಳಿದರು. ಲೇಖಕ ನೌಷಾದ್ ಮಾತನಾಡಿ, ಜಲ ಪ್ರಳಯವಾದ ಈ ದಿನದಂದೇ ಪುಸ್ತಕ ಬಿಡುಗಡೆ ಮಾಡಬೇಕೆಂಬ ಇರಾದೆಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದಾರೆ. ಬರಹಗಾರನ ಬರಹಗಳಿಗೆ ಬೆಂಬಲ ಸಿಗದೇ ಹೋದರೆ ಸಹಜವಾಗಿ ಬರಹಗಾರರು ಹತಾಶರಾಗುತ್ತಾರೆ, ವಸ್ತು ಕರಾರುವಕ್ಕಾಗಿದ್ದು, ಪ್ರಾಮಾಣಿಕವಾಗಿ ಉದ್ದೇಶ ಸರಿಯಾಗಿದ್ದರೆ ಬರಹಗಳು ಜನರಿಗೆ ತಲಪಲಿದೆ ಎಂದು ಹೇಳಿದರು. ಮಲೆನಾಡು ಗಲ್ಫ್ ಶಿಕ್ಷಣ ಮತ್ತು ಸೇವಾ ಟ್ರಸ್ಟ್ನ ಸಂಚಾಲಕ ಅಬ್ದುಲ್ ಸತ್ತಾರ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು, ಸಾಹಿತ್ಯಾಸಕ್ತರು, ನಮ್ಮ ಕೊಡಗು ತಂಡದ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಮ್ಮ ಕೊಡಗು ತಂಡದ ನಜ್ಮಾ ನಜೀರ್ ಕಾರ್ಯಕ್ರಮ ನಿರೂಪಿಸಿದರು. ನಮ್ಮ ಕೊಡಗು ತಂಡದ ಸದಸ್ಯರಾಗಿದ್ದ, ಇತ್ತೀಚೆಗೆ ಅಕಾಲಿಕ ದುರ್ಮರಣ ಹೊಂದಿದ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಕಾರ್ಯಕ್ರಮದಲ್ಲಿ ಸಂತಾಪ ಸೂಚಿಸಲಾಯಿತು.