ಮಡಿಕೇರಿ, ಆ. ೧೭: ಕ್ರೀಡೆಗೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯಲ್ಲಿ ಕೋವಿಡ್ ಕಾರಣದಿಂದಾಗಿ ಕ್ರೀಡಾಕೂಟಗಳು ನಡೆಯದೆ, ಸ್ಪೋರ್ಟ್ಸ್ ಅಂಗಡಿ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕ್ರೀಡಾ ಹಬ್ಬವೇ ನಡೆಯುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್‌ನಿಂದ ಹೇರಲಾಗಿದ್ದ ಲಾಕ್ ಡೌನ್‌ನಿಂದ ಯಾವುದೇ ಕ್ರೀಡಾಕೂಟಗಳು ನಡೆಯಲಿಲ್ಲ.

ಜೂನ್ ತಿಂಗಳಿನಿAದ ಸೆಪ್ಟೆಂಬರ್ ತಿಂಗಳವರೆಗೆ ಜಿಲ್ಲೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಹೊರತುಪಡಿಸಿ ಯಾವುದೇ ಕ್ರೀಡಾಕೂಟಗಳು ಮಳೆಯ ಕಾರಣದಿಂದ ನಡೆಯುವುದಿಲ್ಲ.

ಕಳೆದ ಎರಡು ವರ್ಷಗಳಿಂದ ಕೆಸರುಗದ್ದೆ ಕ್ರೀಡಾಕೂಟಗಳಿಗೂ ಕೋವಿಡ್ ಕಾರಣದಿಂದ ಬ್ರೇಕ್ ಬಿದ್ದಿದೆ. ವರ್ಷದಲ್ಲಿ ಮೂರು ತಿಂಗಳು ಮಾತ್ರ ಸ್ಪೋರ್ಟ್ಸ್ ಅಂಗಡಿ ಮಾಲೀಕರಿಗೆ ಹಬ್ಬ ಎಂದೇ ಹೇಳಬಹುದು.

ಮಾರ್ಚ್ ತಿಂಗಳಿನಿAದ ಮೇ ವರೆಗೆ ವಿವಿಧ, ಜಾತಿ, ಧರ್ಮ, ಜನಾಂಗ ಹಾಗೂ ಸಂಘಸAಸ್ಥೆಗಳ ಕ್ರೀಡಾಕೂಟಗಳು ನಡೆಯುತ್ತವೆ.

ಗ್ರಾಮೀಣ ಭಾಗದಲ್ಲಿ ಫುಟ್ಬಾಲ್, ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಹಾಕಿ, ಕ್ಲಬ್‌ಗಳು ಕ್ರೀಡಾಪಟುಗಳಿಗೆ ಬೇಕಾದ ಜರ್ಸಿ ಕೂಡ ಮುಂಗಡವಾಗಿ ಬುಕ್ ಮಾಡಿದ್ದರು.

ಎಲ್ಲಾ ಕ್ರೀಡಾಕೂಟಗಳು ರದ್ದಾದ ಕಾರಣ ಬುಕ್ ಮಾಡಿದ್ದ ಜರ್ಸಿಗಳು ಬೇಡವೆಂದು ಕ್ಲಬ್‌ಗಳು ಹೇಳಿರುವ ಕಾರಣದಿಂದ ಬಹುದೊಡ್ಡ ನಷ್ಟ ಸಂಭವಿಸಿದೆ ಎಂದು ಜಿಲ್ಲೆಯ ಸ್ಪೋರ್ಟ್ಸ್ ಅಂಗಡಿ ಮಾಲೀಕರು ಹೇಳುತ್ತಾರೆ.

ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಲಯ, ತಾಲೂಕು, ಹಾಗೂ ಜಿಲ್ಲಾಮಟ್ಟದ ಕ್ರೀಡಾಕೂಟಗಳು ಕೂಡ ನಡೆದಿಲ್ಲ. ಹಾಗೂ ಶಾಲಾ- ಕಾಲೇಜುಗಳಲ್ಲಿ ಕ್ರೀಡೋತ್ಸವ ಕೂಡ ನಡೆಯದೆ, ಕ್ರೀಡಾಪರಿಕರಗಳ ಖರೀದಿಯಾಗದೆ, ಸಂಕಷ್ಟಕ್ಕೆ ಸಿಲುಕುವಂತಾಗಿದೆ ಜಿಲ್ಲೆಯ ಸ್ಪೋರ್ಟ್ಸ್ ಅಂಗಡಿ ಮಾಲೀಕರು.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಕ್ರೀಡಾ ಸಂಸ್ಥೆಗಳು, ಹಾಗೂ ವಿವಿಧ ಸ್ಪೋರ್ಟ್ಸ್ ಕ್ಲಬ್‌ಗಳು ಕ್ರೀಡಾಕೂಟಗಳನ್ನು ಆಯೋಜಿಸಲು ಹಿಂದೇಟು ಹಾಕುತ್ತಿವೆ.

ಕೋವಿಡ್ ಕರಿನೆರಳು ಮಾಯವಾಗಿ ಕ್ರೀಡಾ ಜಿಲ್ಲೆಯ ಕ್ರೀಡಾ ಸಂಭ್ರಮ ಮತ್ತೆ ಮರುಕಳಿಸು ವಂತಾಗಲಿ ಎಂಬುದೇ ಕ್ರೀಡಾಪಟುಗಳು ಹಾಗೂ ಕ್ರೀಡಾ ಪ್ರೇಮಿಗಳ ಆಶಯ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ