ಸೋಮವಾರಪೇಟೆ, ಆ. ೧೩: ಕೃಷಿಕರಿಗೆ ಆರ್ಥಿಕವಾಗಿ ಬಲ ತುಂಬುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಎಲ್ಲಾ ಕೃಷಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ಕರೆ ನೀಡಿದರು.

ಇಲ್ಲಿನ ಕೃಷಿ ಇಲಾಖಾ ಆವರಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ೨೬ ಸಾವಿರಕ್ಕೂ ಅಧಿಕ ಕೃಷಿಕರಿದ್ದು, ಕೇವಲ ೧೬ ಸಾವಿರ ಮಂದಿ ಮಾತ್ರ ಇದರ ಪ್ರಯೋಜನ ಪಡೆಯುತ್ತಿದ್ದಾರೆ. ವಾರ್ಷಿಕ ರೂ.೧೦ ಸಾವಿರ ಹಣವನ್ನು ನೇರವಾಗಿ ಖಾತೆಗೆ ವರ್ಗಾಯಿಸುವ ಈ ಯೋಜನೆಯ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ಸಲಹೆ ನೀಡಿದರು.

ಕೃಷಿಕ ಸಮಾಜದ ಸಭೆಗಳಿಗೆ ಹೆಚ್ಚಿನ ಸದಸ್ಯರು ಆಗಮಿಸು ವಂತಾಗಬೇಕು. ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಸೌಲಭ್ಯಗಳು ಸಿಗದಿದ್ದರೆ ಸರ್ಕಾರಿ ಇಲಾಖೆಗಳೂ ಇದ್ದೂ ಇಲ್ಲದಂತಾ ಗುತ್ತವೆ. ಕೇಂದ್ರ ಸರ್ಕಾರದಿಂದ ಕೃಷಿ ಇಲಾಖೆ ಮೂಲಕ ಹೆಚ್ಚಿನ ಕಾರ್ಯ ಕ್ರಮಗಳು ಕಾರ್ಯಗತಗೊಳ್ಳುತ್ತಿವೆ. ಇದರ ಮಾಹಿತಿ ಪಡೆಯಬೇಕು. ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಗಳ ಹೆಸರನ್ನು ಆಯಾ ಗ್ರಾಮ ಪಂಚಾಯಿತಿಗಳ ಫಲಕದಲ್ಲಿ ಅಳವಡಿಸಬೇಕು. ಇದರಿಂದಾಗಿ ಯೋಜನೆಯ ದುರುಪಯೋಗವನ್ನು ತಡೆಗಟ್ಟಬಹುದಾಗಿದೆ ಎಂದು ಅಭಿಪ್ರಾಯಿಸಿದರು.

ಸಭೆಯ ಅಧ್ಯಕ್ಷತೆಯನ್ನು ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ವಹಿಸಿ ಮಾತನಾಡಿ, ಸಭೆಗಳಿಗೆ ಎಲ್ಲಾ ಇಲಾಖಾಧಿಕಾರಿಗಳೂ ಆಗಮಿಸಿ ಕೃಷಿಕರಿಗೆ ಮಾಹಿತಿ ನೀಡುವಂತಾಗ ಬೇಕು. ನಿರಂತರ ಗೈರಾಗುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳು ವಂತಾಗಬೇಕು ಎಂದರು.

ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಶೆಟ್ಟಿ ಮಾತನಾಡಿ, ಇಲಾಖೆ ಮೂಲಕ ಕಿತ್ತಳೆ ಹಾಗೂ ಕಾಳುಮೆಣಸು ಬಳ್ಳಿ, ಜೈವಿಕ ಗೊಬ್ಬರಗಳನ್ನು ತಾ. ೧೬ ರಿಂದ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾಫಿ ಮಂಡಳಿಯ ಕಿರಿಯ ಸಂಪರ್ಕಾಧಿಕಾರಿ ವಿಶ್ವನಾಥ್ ಮಾತನಾಡಿ, ಕಾಫಿ ಗಿಡಗಳ ಮರು ನಾಟಿಗೆ ಮಂಡಳಿಯಿAದ ಸಹಾಯಧನ ಲಭ್ಯವಿದ್ದು, ಸ್ಥಳೀಯ ಗ್ರಾ.ಪಂ.ಗಳು ಫಲಾನುಭವಿಗಳ ಪಟ್ಟಿ ಕಳುಹಿಸಬಹುದು ಎಂದು ಮಾಹಿತಿ ನೀಡಿದರು.

ಸಂಬಾರ ಮಂಡಳಿಯ ವಿನೋದ್ ಅವರು ತನ್ನ ಇಲಾಖಾ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿಯಿತ್ತರು. ಸಭೆಯಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಗೋವಿಂದರಾಜು, ಜಿಲ್ಲಾ ಪ್ರತಿನಿಧಿ ಹೆಚ್.ಕೆ. ಮಾದಪ್ಪ, ಸದಸ್ಯರಾದ ಜೋಯಪ್ಪ, ಕಾಳಪ್ಪ, ರಘು, ಪರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.