ಸಿದ್ದಾಪುರ, ಆ. ೧೪: ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಅಬ್ಬೂರು ತಾರೀಕಟ್ಟೆ ಭಾಗದಲ್ಲಿ ಒಂಟಿ ಸಲಗವೊಂದರ ಉಪಟಳ ತೀವ್ರವಾಗಿದ್ದು, ಅದನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ತಾರೀಕಟ್ಟೆ ನಿವಾಸಿಗಳು ಒತ್ತಾಯಿಸಿದ್ದಾರೆ.

ತಾರೀಕಟ್ಟೆ ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಒಂಟಿ ಸಲಗವೊಂದು ಕಳೆದ ಕೆಲವು ತಿಂಗಳುಗಳಿAದ ಆಗಿಂದಾಗ್ಗೆ ಗ್ರಾಮಸ್ಥರ ಮೇಲೆ ದಾಳಿ ನಡೆಸಲು ಮುಂದಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಆತಂಕ ಆರಂಭವಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬೆನ್ನಟ್ಟಿದ ಸಲಗ

ತಾರೀಕಟ್ಟೆಯ ನಿವಾಸಿಯಾಗಿರುವ ಮುಸ್ತಫಾ ಎಂಬವರು ಶುಕ್ರವಾರದಂದು ತನ್ನ ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಕಾಫಿ ತೋಟಗೊಳಗಿದ್ದ ಒಂಟಿ ಸಲಗವು ಏಕಾಏಕಿ ರಸ್ತೆಗೆ ಬಂದು ಸ್ಕೂಟಿಯಲ್ಲಿ ತೆರಳುತ್ತಿದ್ದವರ ಮೇಲೆ ದಾಳಿಗೆ ಮುಂದಾಗಿದೆ. ಈ ಸಂದರ್ಭ ಸಲಗದ ದಾಳಿಯನ್ನು ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿ ಸ್ಕೂಟಿ ಸವಾರ ಮುಸ್ತಫಾ ರಸ್ತೆಯಲ್ಲಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಕೂಡಲೇ ಸಲಗವನ್ನು ಸೆರೆಹಿಡಿದು ಸ್ಥಳಾಂತರ ಮಾಡಬೇಕೆಂದು ತಾರೀಕಟ್ಟೆಯ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

-ವಾಸು