ಸೋಮವಾರಪೇಟೆ, ಆ. ೧೩: ಕೋಳಿ ಸಾಗಾಟಗೊಳಿಸುತ್ತಿದ್ದ ಅಶೋಕ ಲೈಲ್ಯಾಂಡ್ ವಾಹನ ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಡಿಕ್ಕಿಯಾಗಿ, ಯುವಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಆಲೂರು-ಸಿದ್ದಾಪುರ ಸಮೀಪದ ಬಡುಬನಹಳ್ಳಿಯಲ್ಲಿ ನಡೆದಿದೆ.

ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲುಬಾಣೆ ನಿವಾಸಿ ಮಂಜುಳಾ ಬಾಬು ಅವರ ಪುತ್ರ ಅನಿಲ್ (೨೫) ಎಂಬಾತನೇ ಮೃತ ದುರ್ದೈವಿ. ಘಟನೆಗೆ ಕಾರಣವಾದ ಅಶೋಕ್ ಲೈ ಲ್ಯಾಂಡ್ ವಾಹನದ ಚಾಲಕ (ಕೆ.ಎ. ೧೩ ಸಿ.೩೪೬೧) ನವೀನ್ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

(ಮೊದಲ ಪುಟದಿಂದ) ಕಳೆದ ಒಂದು ವಾರದ ಹಿಂದೆ ಬಡುಬನಹಳ್ಳಿ ಗ್ರಾಮದ ಸಂಬAಧಿಕರಾದ ಹೂವಮ್ಮ ಅವರ ಮನೆಗೆ ತೆರಳಿದ್ದ ಅನಿಲ್, ಅಲ್ಲೇ ನೆಲೆಸಿದ್ದನು. ಹೂವಮ್ಮ ಅವರ ಪುತ್ರಿ ಅಂಜಲಿ ಇಂದು ಬೆಳಿಗ್ಗೆ ವಿಷ ಸೇವಿಸಿದ್ದು, ಆಕೆಯನ್ನು ತನ್ನ ಸಂಬAಧಿ ರಮೇಶ್ ಅವರಿಗೆ ಸೇರಿದ ಬೈಕ್‌ನಲ್ಲಿ ಶನಿವಾರಸಂತೆ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಅವಘಡ ಸಂಭವಿಸಿದೆ.

ಬಡುಬನಹಳ್ಳಿ ಸಮೀಪ ತೆರಳುತ್ತಿದ್ದ ಸಂದರ್ಭ ಅಂಕನಳ್ಳಿ ಮಾರ್ಗವಾಗಿ ಆಗಮಿಸಿದ ಅಶೋಕ್ ಲೈ ಲ್ಯಾಂಡ್ ವಾಹನ ಡಿಕ್ಕಿಯಾಗಿದ್ದು, ಅನಿಲ್‌ನ ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ನಂತರ ಸ್ಥಳದಲ್ಲಿ ವಾಹನ ನಿಲ್ಲಿಸದೇ ಚಾಲಕ ಪರಾರಿಯಾಗಿದ್ದಾನೆ.

ಹಿಂಬದಿ ಕುಳಿತಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸಿಂಧು ರಮೇಶ್ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಾಹನ ಚಾಲಕ ನವೀನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಅವರು ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ವಿಷ ಸೇವಿಸಿದ್ದ ಯುವತಿ ಅಂಜಲಿಯನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವಿವಾಹಿತನಾಗಿದ್ದ ಮೃತ ಅನಿಲ್, ತಾಯಿ ಸೇರಿದಂತೆ ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾನೆ.