ಸಿದ್ದಾಪುರ, ಆ. ೧೩: ಸಿದ್ದಾಪುರ ಗ್ರಾ.ಪಂ. ಕರಡಿಗೋಡು ಕಂದಾಯ ಗ್ರಾಮದ ಮೊದಲ ಗ್ರಾಮಸಭೆ ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ತುಳಸಿ ಅಧ್ಯಕ್ಷತೆಯಲ್ಲಿ ನಡೆಯಿತು.

ಇತ್ತೀಚೆಗೆ ಸಿದ್ದಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಲಸಿಕೆಯನ್ನು ನೀಡುತ್ತಿದ್ದು, ಲಸಿಕೆ ನೀಡುವ ಸಂದರ್ಭ ಪಂಚಾಯಿತಿಯ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ತಮಗೆ ಬೇಕಾದವರಿಗೆ ಟೋಕನ್ ನೀಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಅಧ್ಯಕ್ಷರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

ಗ್ರಾಮಸ್ಥರು ಬೆಳಗ್ಗಿನ ಜಾವ ಬಂದು ಸರತಿ ಸಾಲಿನಲ್ಲಿ ನಿಂತಿದ್ದರೂ ಕೂಡ ಲಸಿಕೆ ಸಿಗದೇ ಜನ ಪರದಾಡುವಂತಹ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಪಂಚಾಯಿತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಾಮಾಜಿಕ ಕಾರ್ಯಕರ್ತ ಸಮ್ಮದ್ ಮಾತನಾಡಿ, ಕರಡಿಗೋಡು ಗ್ರಾಮದ ಪ್ರತಿಷ್ಠಿತ ಖಾಸಗಿ ರೆಸಾರ್ಟ್ ಅವರು ಬಸ್ ನಿಲ್ದಾಣದಲ್ಲಿರುವ ಹೈಮಾಸ್ಟ್ ದೀಪವನ್ನು ಉಚಿತವಾಗಿ ನೀಡಿದ್ದು, ಈ ಬೆಳಕಿನ ದೀಪಗಳು ನಿಷ್ಪçಯೋಜಕವಾಗಿದೆ ಎಂದು ಪಂಚಾಯಿತಿಯ ಗಮನ ಸೆಳೆದರು. ಅಲ್ಲದೇ ಬಸ್ ನಿಲ್ದಾಣದ ಸುತ್ತಮುತ್ತಲಿನಲ್ಲಿ ಸೋಲಾರ್ ದೀಪಗಳನ್ನು ಈ ಹಿಂದೆ ಅಳವಡಿಸಲಾಗಿತ್ತು. ಆದರೆ ಇದೀಗ ಈ ದೀಪಗಳು ಮಾಯವಾಗಿವೆ ಎಂದರು.

ಆಟೋ ಚಾಲಕರು ಮಾತನಾಡಿ, ಪಂಚಾಯಿತಿ ಮುಂಭಾಗದಲ್ಲಿರುವ ಆಟೋ ನಿಲ್ದಾಣದಲ್ಲಿ ಸಮರ್ಪಕವಾಗಿ ಆಟೋ ನಿಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕೆಂದರು. ನಂತರ ವಿವಿಧ ವಿಚಾರಗಳ ಬಗ್ಗೆ ಹಾಗೂ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಪಿ.ಡಿ.ಓ. ವಿಶ್ವನಾಥ್ ಮತ್ತು ಗ್ರಾ.ಪಂ. ಸದಸ್ಯರುಗಳು, ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದರು.