ಮಡಿಕೇರಿ, ಆ. ೧೨: ಭಾರತ ಮಹಿಳಾ ಹಾಕಿ ತಂಡದ ಭವಿಷ್ಯದ ಸಾಧನೆಗೆ ತನ್ನಿಂದಾಗುವ ಎಲ್ಲಾ ರೀತಿಯ ನೆರವು ನೀಡಲು ಸಿದ್ದಳಿದ್ದು, ಭಾರತ ಮಹಿಳಾ ತಂಡವನ್ನು ವಿಶ್ವದಲ್ಲಿಯೇ ಪ್ರಬಲ ತಂಡವಾಗಿ ರೂಪಿಸುವ ಕನಸು ಹೊಂದಿರುವುದಾಗಿ ಟೋಕಿಯೋ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ ಹಂತ ತಲುಪಿದ್ದ ಭಾರತೀಯ ಮಹಿಳಾ ಹಾಕಿ ತಂಡದ ಸಹಾಯಕ ತರಬೇತುದಾರರಾದ ಅಂಕಿತಾ ಸುರೇಶ್ ಭರವಸೆ ನೀಡಿದ್ದಾರೆ.

ಕಂಬಿಬಾಣೆಯ ಸ್ವಗೃಹದಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂಕಿತಾ ಸುರೇಶ್, ಸಾಕಷ್ಟು ನಿರೀಕ್ಷೆಗಳನ್ನು ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತ ಮಹಿಳಾ ಹಾಕಿ ತಂಡ ಹೊಂದಿತ್ತು. ಕೊನೇ ಕ್ಷಣದಲ್ಲಿಯೂ ಗೆಲುವು ಸಾಧಿಸುವ ಅಪಾರ ನಿರೀಕ್ಷೆಯಿತ್ತು. ಆದರೆ ಅದೃಷ್ಟ ಕೈಕೊಟ್ಟಿತ್ತು. ಹೀಗಿದ್ದರೂ ದೃತಿಗೆಡದೆ ಮಹಿಳಾ ಹಾಕಿ ತಂಡವನ್ನು ಮುಂದಿನ ಪಂದ್ಯಾಟಗಳಿಗೆ ಮತ್ತಷ್ಟು ಚೈತನ್ಯಪೂರ್ಣವಾಗಿ ರೂಪಿಸುವ ಹೊಣೆ ತರಬೇತುದಾರರಾದ ತಮ್ಮ ಮೇಲಿದೆ.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಭಾರತ ಮಹಿಳೆಯರ ಹಾಕಿ ತಂಡದ ತರಬೇತುದಾರರಾಗಿ ಕೊಡಗಿಗೂ ಹೆಮ್ಮೆ ತಂದಿರುವ ಅಂಕಿತಾ ಶ್ರಮಕ್ಕೆ ಕೊನೆಗೂ ಜಗತ್ತೇ ಗಮನಿಸುವಂತ ಪ್ರತಿಫಲ ದೊರಕಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಹಾಗೂ ಕೊಡಗಿನ ಮಹಿಳಾ ಹಾಕಿ ಪಟುಗಳನ್ನು ರೂಪಿಸುವ ಹೊಣೆಗಾರಿಕೆಯೂ ಅಂಕಿತಾ ಸುರೇಶ್ ಮೇಲಿದೆ. ಮಹಿಳೆಯರ ಸಾಧನೆಯ ಪ್ರತೀಕವಾಗಿ ಅಂಕಿತಾ ಕಂಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ರೋಟರಿ ವಲಯ ಉಪರಾಜ್ಯಪಾಲ ಅನಿಲ್ ಎಚ್.ಟಿ ಅವರು ಅಂಕಿತಾ ಮತ್ತು ಸುರೇಶ್ ಅವರನ್ನು ಸನ್ಮಾನಿಸಿ ಮಾತನಾಡಿ, ಅಂರ‍್ರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಮೂಲಕ ಅಂಕಿತಾ ಅವರಂಥ ಪ್ರತಿಭಾವಂತ ಕ್ರೀಡಾತಾರೆಗೆ ಗೌರವ ದೊರಕುತ್ತಿರುವುದು ಅವರ ಸಾಧನೆಗೆ ಸಂದ ಫಲವಾಗಿದೆ ಎಂದರು. ಹಾಕಿ ತರಬೇತುದಾರರಿಗೂ ಕ್ರೀಡಾಪಟುಗಳಿಗೆ ದೊರಕಿದಷ್ಟೇ ಗೌರವ ಮತ್ತು ಆರ್ಥಿಕ ನೆರವು ಸರ್ಕಾರದಿಂದ ದೊರಕುವಂತಾಗಬೇಕೆAದೂ ಅನಿಲ್ ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಂ. ಧನಂಜಯ್, ಮಹಿಳಾ ಹಾಕಿ ಕ್ಷೇತ್ರವನ್ನು ಸಾಧನೆಯ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಅಂಕಿತಾರAತ ತರಬೇತುದಾರರ ಪಾತ್ರ ಮಹತ್ವದ್ದು ಎಂದು ಶ್ಲಾಘಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್, ಕ್ರೀಡಾ ನಿರ್ದೇಶಕ ಪೊನ್ನಚ್ಚನ ಮಧುಸೂದನ್, ನಿರ್ದೇಶಕರಾದ ಕ್ಯಾರಿ ಕಾರ್ಯಪ್ಪ, ಫ್ರಾನ್ಸಿಸ್ ಹಾಜರಿದ್ದರು.