ಮಡಿಕೇರಿ, ಆ. ೧೨: ಮಡಿಕೇರಿಯ ಮುಖ್ಯ ರಸ್ತೆ ಬದಿಯ ಪಾರ್ಕಿಂಗ್ ಭಾಗದಲ್ಲಿ ಕಾರೊಂದು ನಿಂತಿತ್ತು., ಅಕ್ಕ - ಪಕ್ಕದಲ್ಲಿ ಬೇರೆ ವಾಹನಗಳಿದ್ದವು., ಜನರ ಓಡಾಟ ಕೂಡ ಇತ್ತು. ಇದ್ದಕ್ಕಿದ್ದಂತೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿತು. ನೋಡ-ನೋಡುತ್ತಿದ್ದಂತೆ ಹೊಗೆ ಕಾರಿನೊಳಗೆ ಆವರಿಸಿಕೊಂಡಿತು. ಜನ ಸೇರಿದರು, ಸ್ಥಳದಲ್ಲಿ ಸಂಚಾರಿ ಪೊಲೀಸರು ಬಂದರು. ಆದರೂ ಏನೂ ಮಾಡು ವಂತಿಲ್ಲ. ಅಷ್ಟರಲ್ಲೇ ಬೆಂಕಿ ಕಿಡಿ ಕಾರಿನ ಕೆಳಗಡೆ ಬೀಳಲಾರಂಭಿಸಿತು. ಎಲ್ಲಿಯೋ ಇದ್ದ ಕಾರಿನ ಮಾಲೀಕ ಓಡಿ ಬಂದು ಕಾರಿನ ಬಾಗಿಲು ತೆರೆದ ಬಳಿಕ ಕಾರಿನ ವಯರ್‌ಗಳನ್ನು ತುಂಡರಿಸಿದ ನಂತರ ಬೆಂಕಿ ನಂದಿತು. ಇಲ್ಲವಾದಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.!

ಇಂದು ಸಂಜೆ ವೇಳೆ ನಗರದ ಕಾಲೇಜು ರಸ್ತೆಯ ಪೇಟೆ ಶ್ರೀ ರಾಮಮಂದಿರ ದೇವಾಲಯ ಬಳಿ ಇರುವ ಇಂಡಿಯನ್ ಬ್ಯಾಂಕ್ ಎದುರು ಕಾರೊಂದನ್ನು (ಕೆ.ಎ. ೧೪ ಎಂ.ಸಿ. ೬೬೬೬) ನಿಲ್ಲಿಸಿದ್ದ ಮಾಲೀಕ ಅನ್ಯ ಕೆಲಸ ನಿಮಿತ್ತ ತೆರಳಿದ್ದ. ಇದ್ದಕ್ಕಿದ್ದಂತೆ ಕಾರಿನ ಹೆಡ್‌ಲೈಟ್ ಉರಿಯಲಾರಂಭಿಸಿತ್ತಲ್ಲದೆ, ಬೀಪ್ ಶಬ್ಧ ಕೇಳಲಾರಂಭಿಸಿತು. ನೋಡ ನೋಡುತ್ತಿದ್ದಂತೆಯೇ ಕಾರಿನ ಬಾನೆಟ್ ನಿಂದ ಹೊಗೆ ಕಾಣಿಸಿಕೊಂಡಿತು. ಸ್ವಲ್ಪ ಸಮಯದ ಬಳಿಕ ಕೆಳಭಾಗದಲ್ಲಿ ಬೆಂಕಿ ಕಿಡಿ ಬೀಳಲಾರಂಭಿಸಿತು. ಗಾಬರಿ ಯಿಂದ ನೆರೆದಿದ್ದ ಜನರಿಗೆ ಏನೂ ಮಾಡುವದೆಂದು ತೋಚಲಿಲ್ಲ.

ಅಷ್ಟರಲ್ಲಿ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸ್ ಸಿಬ್ಬಂದಿ ಅಗ್ನಿಶಾಮಕ ದಳದವರಿಗೆ ಪೋನಾಯಿಸಿ, ಪೊಲೀಸ್ ಠಾಣೆಗೆ ಕರೆ ಮಾಡಿ ವಾಹನದ ಮಾಲೀಕರ ಪತ್ತೆ ಹಚ್ಚುವಂತೆ ಮಾಹಿತಿ ನೀಡಿದರು. ಅಲ್ಲೇ ಇದ್ದ ಕಾರ್ ಮೆಕ್ಯಾನಿಕ್ ಓರ್ವರು ಕಾರಿನ ಗಾಜು ಒಡೆದು ರಕ್ಷಿಸಲು ಮುಂದಾದರೂ ಪೊಲೀಸಪ್ಪ ಗಾಜನ್ನು ಒಡೆಯಲು ಬಿಡಲಿಲ್ಲ. ಏನು ಮಾಡುವದೆಂದು ಎಲ್ಲರೂ ನಿಬ್ಬೆರಗಾಗಿ ನೋಡುತ್ತಿದ್ದಂತೆ ಅಲ್ಲೇ ಇದ್ದ ಇಂಡಿಯನ್ ಬ್ಯಾಂಕ್‌ನ ಸಿಬ್ಬಂದಿ ಬ್ಯಾಂಕ್‌ನಿAದ ನೀರನ್ನು ತಂದು ಬಾನೆಟ್‌ಗೆ ಸುರಿದರು. ಆದರೂ ಹೊಗೆ ಕಡಿಮೆಯಾಗದ್ದ ರಿಂದ ಬ್ಯಾಂಕಿನೊಳಗಿದ್ದ ತುರ್ತು ಅಗ್ನಿ ನಂದಿಸುವ ಗ್ಯಾಸ್ ಅನ್ನು ತಂದು ಕಾರಿನ ಕೆಳಭಾಗಕ್ಕೆ ಹಾಯಿಸಿ ದರು. ಇದರಿಂದ ಬೆಂಕಿ -ಹೊಗೆಯ ತೀವ್ರತೆ ಕೊಂಚ ಶಮನವಾಯಿತು.

ಅಷ್ಟರಲ್ಲಿ ಮಾಹಿತಿ ತಿಳಿದು ಅಲ್ಲೆಲ್ಲೊ ಇದ್ದ ಕಾರಿನ ಮಾಲೀಕ ಓಡಿ ಬಂದು ಕಾರಿನ ಬಾಗಿಲು ತೆರೆದ ಬಳಿಕ ಅಲ್ಲೇ ಇದ್ದ ಮೆಕ್ಯಾನಿಕ್ ಕಾರಿನ ವಯರ್‌ಗಳನ್ನು ತುಂಡರಿಸಿದ ನಂತರ ಎಲ್ಲವೂ ತಹಬದಿಗೆ ಬಂದಿತು. ಇಲ್ಲವಾದಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಂಡು, ಸನಿಹದಲ್ಲಿದ್ದ ಇತರ ವಾಹನ, ಜನರು, ಅಂಗಡಿ - ಮಳಿಗೆಗಳಿಗೂ ಅಪಾಯ ಸಂಭವಿಸುವ ಸಾಧ್ಯತೆಯಿತ್ತು.

ಮುಕ್ಕಾಲು ಗಂಟೆಗಳ ಕಾಲ ಈ ಪ್ರಹಸನ ನಡೆದಿದ್ದು, ಸ್ಥಳಕ್ಕೆ ಬಂದ ‘ಕಾರಿನ ಮಾಲೀಕ ಕಾರಿನ ಗಾಜನ್ನು ಒಡೆದಿದ್ದರೂ ಪರವಾಗಿರಲಿಲ್ಲ, ನನ್ನ ಕಾರೇ ಹೋಗಿಬಿಡುತ್ತಿತ್ತಲ್ಲ?’ ಎಂದು ಹೇಳಿದಾಗ ಪೊಲೀಸಪ್ಪ ನಕ್ಕು ಸುಮ್ಮನಾದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ‘ಸುಮ್ಮನೆ ನಮ್ಮನ್ನು ಕರೆಸಿದರಲ್ಲ’ ಎಂದು ಗೊಣಗುತ್ತಾ ವಾಪಾಸ್ಸಾದರು.

- ಗಿರೀಶ್