ಕರಿಕೆ, ಆ. ೧೨: ಜಿಲ್ಲೆಯ ಗಡಿ ಕರಿಕೆ-ಚೆಂಬೇರಿ ಬಳಿ ಹಾಲಿ ಅರಣ್ಯ ತನಿಖಾ ಠಾಣೆ ಬಳಿ ಕಾರ್ಯನಿರ್ವಹಿಸುವ ಕೋವಿಡ್ ೧೯ ತಪಾಸಣೆ ಕೇಂದ್ರವನ್ನು ರಾಜ್ಯದ ಗಡಿಯಲ್ಲಿ ನಿರ್ಮಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈಗಿರುವ ತಪಾಸಣೆ ಕೇಂದ್ರವು ಶಾಮಿಯಾನದಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಮಳೆ ಸಂದರ್ಭದಲ್ಲಿ ಸಿಬ್ಬಂದಿ ಕರ್ತವ್ಯ ಕಷ್ಟಕರವಾಗಿದೆ. ಗಡಿಯಲ್ಲಿ ನಿರ್ಮಿಸಲು ಸಾರ್ವಜನಿಕರು ಕಳೆದ ವರ್ಷದಿಂದಲೇ ಮನವಿ ಸಲ್ಲಿಸುತ್ತಿದ್ದು ‘ಶಕ್ತಿ’ ಕೂಡ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ಬಿಸಿಲು, ಮಳೆಯ ರಕ್ಷಣೆಗೆ ಮರದ ಆಶ್ರಯ ಪಡೆಯುತ್ತಿರುವ ಬಗ್ಗೆ ಬೆಳಕು ಚೆಲ್ಲಿತ್ತು.

ಇದೀಗ ಜಿಲ್ಲಾಡಳಿತದ ವತಿಯಿಂದ ನಿರ್ಮಿತಿ ಕೇಂದ್ರದ ಮೂಲಕ ಗ್ರಾಮ ಪಂಚಾಯಿತಿ ಬಸ್ ತಂಗುದಾಣಕ್ಕೆ ಕಾಯ್ದಿರಿಸಿರುವ ಜಾಗದಲ್ಲಿ ಕಾಮಗಾರಿ ನಡೆಯುತ್ತಿದೆ. ಮಡಿಕೇರಿ ತಹಶೀಲ್ದಾರ್ ಮಹೇಶ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಲ್ಲದೆ ಗಡಿಯಲ್ಲಿ ಭದ್ರತೆಯ ವ್ಯವಸ್ಥೆ ಪರಿಶೀಲನೆ ನಡೆಸಲು ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಗಡಿಯಲ್ಲಿ ಅಗತ್ಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಕ್ರಮ ವಹಿಸುವುದಾಗಿ ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಲಚಂದ್ರ ನಾಯರ್ ಇದ್ದರು.