ಮಡಿಕೇರಿ, ಆ. ೧೨: ಕಳೆದ ಕೆಲವು ದಿನಗಳಿಂದ ಚರ್ಚೆಗೆ ಕಾರಣವಾಗಿರುವ ಕಾವೇರಿ ಮಹಲ್ ಕಟ್ಟಡ ನವೀಕರಣ ವಿಚಾರ ಇದೀಗ ಮತ್ತೊಮ್ಮೆ ಸದ್ದು ಮಾಡಿದೆ. ವಿವಾದಗಳ ನಡುವೆ ನಗರಸಭೆ ಕಟ್ಟಡದ ಮಳಿಗೆಗಳಿಗೆ ಉದ್ದಿಮೆ ಪರವಾನಿಗೆ ಪತ್ರ (ಟ್ರೇಡ್ ಲೈಸನ್ಸ್) ನೀಡಲಾಗಿದೆ ಎಂದು ನಗರಸಭೆಯ ಬಿ.ಜೆ.ಪಿ. ಸದಸ್ಯರು ಹಾಗೂ ನಗರ ಬಿ.ಜೆ.ಪಿ. ಪ್ರಮುಖರು ಗಂಭೀರ ಆರೋಪ ಮಾಡಿದ್ದು, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಇಂದು ನಗರಸಭೆಯ ಕಚೇರಿಯಲ್ಲಿ, ನಿಯಮ ಉಲ್ಲಂಘನೆ ಹೊತ್ತ ಕಟ್ಟಡದ ಮಳಿಗೆಗಳಿಗೆ ಯಾವ ರೀತಿ ಪರವಾನಿಗೆ ನೀಡಿದ್ದೀರ.? ಎಂದು ಬಿ.ಜೆ.ಪಿ. ಸದಸ್ಯರು ಹಾಗೂ ನಗರ ಬಿ.ಜೆ.ಪಿ. ಮುಖಂಡರು ಪೌರಾಯುಕ್ತ ರಾಮದಾಸ್ ಸೇರಿದಂತೆ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜನವರಿ ತಿಂಗಳಿನಲ್ಲಿ ನಗರದ ಕಾವೇರಿ ಮಹಲ್ ಕಟ್ಟಡ ನವೀಕರಣ ಸಂಬAಧ ನಗರಸಭೆಗೆ ಕಾವೇರಿ ಗ್ರೂಪ್ಸ್ನಿಂದ ಪತ್ರ ಬಂದಿದೆ. ಮೇ ೫ಕ್ಕೆ ಯಾವುದೇ ಪೂರಕ ದಾಖಲಾತಿ ಇಲ್ಲ ಎಂಬ ಕಾರಣದಿಂದ ನಗರಸಭೆ ಅನುಮತಿ ನಿರಾಕರಿಸಿದೆ. ಕಟ್ಟಡವನ್ನು ಹಾಶಿಂ ಎಂಬ ಗುತ್ತಿಗೆದಾರ ವಹಿಸಿಕೊಂಡಿದ್ದು, ನಿಯಮ ಉಲ್ಲಂಘಿಸಿ ಕಟ್ಟಡ ನವೀಕರಣಕ್ಕೆ ಮುಂದಾಗಿದ್ದಾರೆ. ಅದರೊಂದಿಗೆ ರೋಡ್ ಮಾರ್ಜಿನ್ನಲ್ಲಿ ಹೆಚ್ಚುವರಿ ಕಟ್ಟಡವನ್ನು ನಿರ್ಮಾಣ ಮಾಡಿ ಅಲ್ಲಿ ಮಳಿಗೆ ತೆರೆಯಲು ಮುಂದಾಗಿದ್ದಾರೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ನಗರಸಭೆ ಪೌರಾಯುಕ್ತರು ಟ್ರೇಡ್ ಲೈಸನ್ಸ್ ನೀಡಿರುವುದನ್ನು ಖಂಡಿಸಿದರು.
ಕಟ್ಟಡವು ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಜೂನ್ ೧೦ಕ್ಕೆ ನೆಲಸಮ ಮಾಡಲು ಎಚ್ಚರಿಕೆ ನೀಡಿ ನಗರಸಭೆ ನೋಟೀಸ್ ನೀಡಿದೆ. ಜೂನ್ ೨೩ಕ್ಕೆ ಟ್ರೇಡ್ ಲೈಸನ್ಸ್ ನೀಡಲಾಗಿದೆ. ಲೈಸನ್ಸ್ನಲ್ಲಿ ಯಾವ ವಿಳಾಸ ಎಂದು ಕೂಡ ನಮೂದಿಸಿಲ್ಲ. ಅಧಿಕಾರಿಗಳು ಕಾನೂನು ಬಾಹಿರ ಕೃತ್ಯವೆಸಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಬಿಜೆಪಿ ನಗರ ಉಪಾಧ್ಯಕ್ಷ ಕವನ್ ಕಾವೇರಪ್ಪ ಗಂಭೀರ ಆರೋಪ ಮಾಡಿದರು. ಇದೇ ಟ್ರೇಡ್ ಲೈಸನ್ಸ್ ಆಧಾರದಲ್ಲಿ ಅಂಗಡಿ ತೆರೆಯಲು ಮಾಲೀಕ ಮುಂದಾಗಿದ್ದಾರೆ. ರೋಡ್ ಮಾರ್ಜಿನ್ನಲ್ಲಿರುವ ಕಟ್ಟಡ ಕೆಡವಬೇಕು ಎಂದು ಆಗ್ರಹಿಸಿದರು.
ನಗರಸಭೆ ಸದಸ್ಯ ಉಮೇಶ್ ಸುಬ್ರಮಣಿ ಮಾತನಾಡಿ, ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣ ಹಾಗೂ ನವೀಕರಣವನ್ನು ಪ್ರಶ್ನಿಸಿದ್ದಕ್ಕೆ ತನ್ನ ವಿರುದ್ಧ ಆಧಾರ ರಹಿತ ಲಂಚ ಬೇಡಿಕೆಯ ಆರೋಪವನ್ನು ಗುತ್ತಿಗೆದಾರ ಹೊರಿಸಿದ್ದಾರೆ. ಇದರ ವಿರುದ್ಧ ತಾನು ಕಾನೂನು ಹೋರಾಟ ಮಾಡುತ್ತೇನೆ ಎಂದರು. ಅನಧಿಕೃತ ಕಟ್ಟಡ ತಲೆ ಎತ್ತದಂತೆ ನೋಡಿಕೊಳ್ಳುವುದು ನಗರಸಭೆ ಸದಸ್ಯರ ಗುರಿಯಾಗಿದೆ. ಆದರೆ, ಸದಸ್ಯರ ಗಮನಕ್ಕೆ ಬಾರದೆ, ವಿವಾದದ ಸ್ಥಳಕ್ಕೆ ಪೌರಾಯುಕ್ತರು ಪರವಾನಿಗೆ ನೀಡಿದ್ದಾರೆ. ಅದಲ್ಲದೆ ಕಾಮಗಾರಿ ಮುಕ್ತಾಯ ದೃಢೀಕರಣ ಇಲ್ಲದೆ ಯಾವ ರೀತಿ ಲೈಸನ್ಸ್ ನೀಡಲಾಗಿದೆ. ಇದು ನಿಯಮ ಉಲ್ಲಂಘನೆ ಎಂದು ಹೇಳಿದ ಅವರು, ಲೈಸನ್ಸ್ ರದ್ದತಿಗೆ ಆಗ್ರಹಿಸಿದರು.
ಈ ಸಂದರ್ಭ ಎಸ್.ಸಿ. ಸತೀಶ್, ಅರುಣ್ ಶೆಟ್ಟಿ, ಕಾಳಚಂಡ ಅಪ್ಪಣ್ಣ, ಶ್ವೇತಾ ಪ್ರಶಾಂತ್, ಸಬಿತಾ, ಶಾರದಾ ನಾಗರಾಜ್, ಸವಿತಾ ರಾಕೇಶ್, ಕೆ.ಎಸ್.ರಮೇಶ್, ಚಿತ್ರಾವತಿ, ಬಿಜೆಪಿ ಮಡಿಕೇರಿ ನಗರಾಧ್ಯಕ್ಷ ಮನುಮುತ್ತಪ್ಪ ಸೇರಿದಂತೆ ಬಿ.ಜೆ.ಪಿ. ಪ್ರಮುಖರು ಹಾಜರಿದ್ದರು.