*ಗೋಣಿಕೊಪ್ಪ, ಆ. ೧೨: ವಿಶ್ವ ಆನೆ ದಿನಾಚರಣೆಯನ್ನು ತಿತಿಮತಿ ಕಂಠಾಪುರ ಹಾಗೂ ದುಬಾರೆ ಆನೆ ಶಿಬಿರದಲ್ಲಿ ಆನೆಗಳಿಗೆ ಹಣ್ಣು, ತರಕಾರಿಗಳನ್ನು ತಿನಿಸುವ ಮೂಲಕ ಆನೆಗಳ ಆರೋಗ್ಯದ ಬಗ್ಗೆ ಕಾಳಜಿ ತೋರುವ ಮೂಲಕ ಸಂಭ್ರಮಿಸಲಾಯಿತು.

ಕAಠಾಪುರ ಮತ್ತಿಗೋಡು ಆನೆ ಶಿಬಿರದಲ್ಲಿನ ಆನೆಗಳ ದಿನಾಚರಣೆಯ ಸಂಭ್ರಮಕ್ಕಾಗಿ ವಿಶೇಷ ರೀತಿಯಲ್ಲಿ ಶೃಂಗರಿಸಿ ಆರೈಕೆ ಮಾಡಲಾಯಿತು. ಆನೆಗಳ ಮಜ್ಜಣ ಮಾಡಿ, ಬಣ್ಣದ ಚಿತ್ತಾರಗಳೊಂದಿಗೆ ವೈಯ್ಯಾರದ ಸೊಗಡಿನಲ್ಲಿ ವಿಶೇಷ ರೀತಿಯಲ್ಲಿ ಗಮನ ಸೆಳೆದವು. ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹಣ್ಣು, ತರಕಾರಿಗಳನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಾಂದೂ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಾಗರಹೊಳೆ ವನ್ಯಜೀವಿ ವಲಯದ ನಿರ್ದೇಶಕ ಮಹೇಶ್ ಹಾಗೂ ಇತರ ಅತಿಥಿಗಳು ಆನೆಯ ಬಾಯಿಗೆ ಕಬ್ಬು, ಕಲ್ಲಂಗಡಿ, ಬಾಳೆಹಣ್ಣು, ಸೌತೆಕಾಯಿಗಳನ್ನು ನೀಡಿದರು.

ಶಿಬಿರದ ಆಕರ್ಷಕ ಮತ್ತು ಹೆಮ್ಮೆಯ ಆನೆಯಾದ ಅಭಿಮನ್ಯು, ಪುಣಾಣಿ ಆನೆಗಳಾದ ಸೂರ್ಯ, ವರಲಕ್ಷಿ, ಭುವನೇಶ್ವರಿ ಜತೆಗೆ ಚಾಮುಂಡೇಶ್ವರಿ, ಭೀಮ, ಗೋಪಾಲಸ್ವಾಮಿ, ಸರಳ, ಮಹೇಂದ್ರ, ಶ್ರೀರಂಗ, ಮಹಾರಾಷ್ಟçದ ಭೀಮ್, ರಾಮಯ್ಯ, ಮಣಿಕಂಠ, ಶ್ರೀಕಂಠ, ಕೃಷ್ಣ, ಸೋಮಶೇಖರ್, ಮಸ್ತಿ, ಧ್ರುವ, ರವಿ, ಕ್ಯಾತ, ಗಣೇಶ, ಬಲರಾಮ, ಅಶೋಕ ಸೇರಿದಂತೆ ಇತರ ಆನೆಗಳು ವಿಶ್ವ ಆನೆ ದಿನಾಚರಣೆಯ ಸಂಭ್ರಮದ ಆತಿಥ್ಯವನ್ನು ಸವಿದು ನಲಿದವು.

ಆನೆಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಅರಣ್ಯಾಧಿಕಾರಿಗಳು ನಿಯಂತ್ರಿಸುವ ಕಾರ್ಯದಲ್ಲಿ ನಿಷ್ಠೆಯ ಕರ್ತವ್ಯವನ್ನು ಪಾಲಿಸುತ್ತಿದ್ದಾರೆ. ಮಾನವನಂತೆ ಪ್ರಾಣಿಗಳು ಬದುಕುವ ಹಕ್ಕು ಹೊಂದಿದೆ. ಪ್ರಾಣಿಗಳ ಸಂಕಷ್ಟವನ್ನು ಅರಿತುಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಪಾತ್ರ ಬಹುಮುಖ್ಯ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯಿಸಿದರು.

ನಾಗರಹೊಳೆ ವನ್ಯಜೀವಿ ವಲಯ ನಿರ್ದೇಶಕ ಮಹೇಶ್‌ಕುಮಾರ್ ಮಾತನಾಡಿ, ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾದ ಕಾರಣ ಪ್ರಾಣಿಗಳ ಸಂಘರ್ಷ ಅಧಿಕವಾಗುತ್ತಿದೆ. ಭಾರತ ದೇಶದಲ್ಲಿ ಕರ್ನಾಟಕ ರಾಜ್ಯ ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದು, ೬೧೦೦ ಆನೆಗಳನ್ನು ಹೊಂದಿದೆ. ೧.೫ ಚದರ ಕಿ.ಮೀಗೆ ಒಂದರAತೆ ಆನೆಗಳು ಅರಣ್ಯದಲ್ಲಿ ವಾಸಿಸುತ್ತಿವೆ. ಆನೆಗಳ ಸಂಘರ್ಷವನ್ನು ತಡೆಯಲು ಸರ್ಕಾರದ ಯೋಜನೆಗಳಾದ ರೈಲ್ವೇ ಕಂಬಿ ಬ್ಯಾರಿಕೇಡ್, ಆನೆ ತಡೆ ಕಂದಕ, ಸೋಲಾರ್ ಬೇಲಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಆದರೂ, ಪ್ರಾಣಿಗಳ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆನೆ, ಹುಲಿ, ಕರಡಿಗಳಂತಹ ಪ್ರಾಣಿಗಳಿಂದ ಪ್ರಾಣಿ ಮಾನವ ಸಂಘರ್ಷ ಉದ್ಭವಿಸುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಲ್ಲಿ ನಾಗರಹೊಳೆ ವನ್ಯಜೀವಿ ವಲಯ ಮುಂಚೂಣಿ ಕಾರ್ಯ ನಿರ್ವಹಿಸುತ್ತಿದೆ. ಮತ್ತಿಗೋಡು ಆನೆ ಶಿಬಿರದಲ್ಲಿರುವ ಆನೆಗಳು ದಸರಾ ಹಾಗೂ ಹುಲಿ ಕಾರ್ಯಾಚರಣೆ ಇತರ ಅರಣ್ಯ ಚಟುವಟಿಕೆಗಳಿಗೆ ಸಹಕಾರವಾಗುತ್ತಿದ್ದು, ರಾಜ್ಯದಲ್ಲಿಯೇ ಹೆಸರು ಪಡೆದುಕೊಂಡಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮತ್ತಿಗೋಡು, ಬಳ್ಳೆ, ಕಾಕನಕೋಟೆ ಆನೆ ಶಿಬಿರಗಳಲ್ಲಿನ ಕಾವಾಡಿ ಹಾಗೂ ಮಾವುತರ ಮಕ್ಕಳಿಗೆ ಮಣ್ಣಿನ

(ಮೊದಲ ಪುಟದಿಂದ) ಆನೆಗಳ ಕಲಾಕೃತಿ, ಚಿತ್ರಕಲಾ ಸ್ಪರ್ಧೆ, ಅರಣ್ಯ ಸಿಬ್ಬಂದಿಗಳಿಗೆ ವಾಲಿಬಾಲ್ ಕ್ರೀಡಾಕೂಟವನ್ನು ಆಯೋಜಿಸಿ ಬಹುಮಾನ ವಿತರಣೆ ಕಾರ್ಯ ನಡೆಯಿತು. ಆನೆ ಮಾವುತ ಜೆ.ಕೆ. ರವಿ, ಕಾವಾಡಿ ಗಣೇಶ್ ಅವರ ಸೇವೆಯನ್ನು ಪರಿಗಣಿಸಿ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ನಾಗರಹೊಳೆ ಹುಣಸೂರು ವಲಯ ಸಂರಕ್ಷಣಾಧಿಕಾರಿ ಸತೀಶ್, ನಾಗರಹೊಳೆ ವಲಯ ಸಂರಕ್ಷಣಾಧಿಕಾರಿ ಗೋಪಾಲ್, ಮತ್ತಿಗೋಡು ವಲಯ ಅರಣ್ಯಾಧಿಕಾರಿ ಕಿರಣ್ ವೈ.ಕೆ., ಉಪವಲಯ ಅರಣ್ಯಾಧಿಕಾರಿ ಸತೀಶ್, ಯೋಗೇಶ್ವರಿ, ಡಿ.ವೈ.ಎಸ್.ಪಿ. ಜಯಕುಮಾರ್, ವೃತ್ತ ನಿರೀಕ್ಷಕ ಜಯರಾಮ್, ಇಲಾಖೆ ಸಿಬ್ಬಂದಿಗಳು, ಮಾವುತರು ಹಾಗೂ ಕಾವಾಡಿಗಳು ಹಾಜರಿದ್ದರು.

ದುಬಾರೆಯಲ್ಲಿ ಆಚರಣೆ

ಕುಶಾಲನಗರ: ವಿಶ್ವ ಆನೆ ದಿನಾಚರಣೆ ಅಂಗವಾಗಿ ದುಬಾರೆ ಸಾಕಾನೆ ಶಿಬಿರದಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿರುವ ದಸರಾ ಆನೆಗಳಾದ ಕಾವೇರಿ ವಿಜಯ ಗೋಪಿ ವಿಕ್ರಮ ಸೇರಿದಂತೆ ಒಟ್ಟು ಮೂವತ್ತೊಂದು ಸಾಕಾನೆಗಳಿಗೆ ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ನಂತರ ಅಲಂಕಾರ ಮಾಡುವುದರ ಜತೆಗೆ ಪೂಜೆ ಸಲ್ಲಿಸಲಾಯಿತು.

ಬೆಳಿಗ್ಗೆ ಕಾವೇರಿ ನದಿಗೆ ಆನೆಗಳನ್ನು ತಂದು ಮಾವುತರು ಮತ್ತು ಕಾವಾಡಿಗರು ಅವುಗಳನ್ನು ಸ್ವಚ್ಛಗೊಳಿಸಿ ನಂತರ ಕಬ್ಬು ಬಾಳೆಹಣ್ಣು, ತೆಂಗಿನಕಾಯಿ ಮತ್ತಿತರ ತಿಂಡಿಗಳನ್ನು ತಿನ್ನಿಸಲಾಯಿತು. ಆನೆಗಳ ಮೈಮೇಲೆ ಬಣ್ಣಗಳನ್ನು ಬಳಿದು ನಂತರ ಶಿಬಿರದಲ್ಲಿರುವ ಗಣಪತಿ, ನಂದೀಶ್ವರ ದೇವರಿಗೆ ಪೂಜೆ ಸಲ್ಲಿಸಿ ಪ್ರತಿ ಆನೆಗಳಿಗೆ ಆರತಿ ಎತ್ತಿ ಪೂಜಿಸಲಾಯಿತು.

ಆನೆ ದಿನಾಚರಣೆ ಅಂಗವಾಗಿ ದುಬಾರೆ ಶಿಬಿರಕ್ಕೆ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕೂಡ ಕಲ್ಪಿಸಲಾಗಿತ್ತು. ದುಬಾರೆಯಲ್ಲಿ ರ‍್ಯಾಫ್ಟಿಂಗ್ ಸಾಹಸ ಕ್ರೀಡೆ ರದ್ದುಗೊಂಡಿರುವುದರಿAದ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿಯ ಆನೆ ದಿನಾಚರಣೆ ಬಹಳ ಸರಳವಾಗಿ ಆಚರಿಸಲಾಯಿತು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ತಿಳಿಸಿದರು.

ಈ ಸಂದರ್ಭ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ದುಬಾರೆ ಶಿಬಿರದ ಉಸ್ತುವಾರಿ ಅಧಿಕಾರಿ ಕನ್ನಂಡ ರಂಜನ್ ಮತ್ತು ಮಾವುತರು ಕಾವಾಡಿಗರು ಇದ್ದರು. ಶಿಬಿರದ ಹಿರಿಯ ಮಾವುತ ಧೋಬಿ ಮತ್ತು ಸಿಬ್ಬಂದಿಗಳು ಎಲ್ಲಾ ಆನೆಗಳಿಗೆ ಒಳಿತಾಗಲಿ ಎಂದು ಹಾರೈಸಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಮಾವುತ ಮತ್ತು ಕಾವಾಡಿಗಳಿಗೆ ಅರಣ್ಯ ಇಲಾಖೆ ವತಿಯಿಂದ ಆಹಾರದ ಮತ್ತು ಅಗತ್ಯ ವಸ್ತುಗಳ ಕಿಟ್ಗಳನ್ನು ವಿತರಿಸಲಾಯಿತು.

- ಎನ್.ಎನ್. ದಿನೇಶ್, ಚಂದ್ರಮೋಹನ್