ಮಡಿಕೇರಿ/ ಗೋಣಿಕೊಪ್ಪ/ಸೋಮವಾರಪೇಟೆ, ಆ. ೧೨: ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಆರ್.ಟಿ.ಸಿ. ಸಮಸ್ಯೆ ತಲೆದೋರಿದ್ದು, ದಿನನಿತ್ಯ ಪಹಣಿಗಾಗಿ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ತಾಲೂಕು ಕಚೇರಿಗಳಲ್ಲ್ಲಿ ಆರ್.ಟಿ.ಸಿ. ಸಿಗದೇ ಇರುವುದರಿಂದ ಕೃಷಿಕರು, ಸಾರ್ವಜನಿಕರು ಪರದಾಟ ಅನುಭವಿಸುವಂತಾಗಿದೆ.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ೧೫ ದಿನಗಳಿಂದ, ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಕಳೆದ ೩೦ ದಿನಗಳಿಂದ ಆರ್ಟಿಸಿ ಸಿಗುತ್ತಿಲ್ಲ. ಪ್ರತಿನಿತ್ಯ ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ಸಾರ್ವಜನಿಕರು ಆರ್ಟಿಸಿ ಸಿಗದೇ ಇರುವುದರಿಂದ ಬರಿಗೈಯಲ್ಲಿ ಹಿಂತಿರುಗುವAತಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಆರ್ಟಿಸಿ ತೆಗೆಯಲು ತಾಲೂಕು ಕಚೇರಿಗೆ ಡಿಜಿಟಲ್ ಕಾರ್ಡ್ ನೀಡಲಾಗಿದ್ದು, ಇದರ ಅವಧಿ ಮುಕ್ತಾಯವಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಬೆಂಗಳೂರಿಗೆ ಡಿಜಿಟಲ್ ಕಾರ್ಡ್
(ಮೊದಲ ಪುಟದಿಂದ) ಕಳುಹಿಸಲಾಗಿದ್ದು, ‘ಅಪ್ಡೇಟ್’ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ.ಇದರೊಂದಿಗೆ ಟೆಂಡರ್ ಅವಧಿಯೂ ಮುಕ್ತಾಯ ವಾಗಿರುವುದರಿಂದ ಸಾರ್ವಜನಿಕರಿಗೆ ಆರ್ಟಿಸಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಚೇರಿ ಸಿಬ್ಬಂದಿಗಳು ತಿಳಿಸಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ ಸರ್ವರ್ ಸಮಸ್ಯೆ ಕಡಿಮೆ ಇದ್ದು, ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ. ಆದರೆ, ಖಾಸಗಿಯಾಗಿ ತಂತ್ರಾAಶ ಸಮಸ್ಯೆ ಇರುವುದರಿಂದ ತಾಲೂಕು ಕಚೇರಿ, ಅಟಲ್ ಜನಸ್ನೇಹಿ ಕೇಂದ್ರ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಸಂದಣಿ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶದ ಕೆಲವೆಡೆ ನೆಟ್ವರ್ಕ್ ಸಮಸ್ಯೆ ಇರುವುದರಿಂದ ತಂತ್ರಾAಶ ವೇಗವಾಗಿ ಕೆಲಸ ಮಾಡುವುದಿಲ್ಲ.
ರೈತರ ಆರ್ಥಿಕ ಚಟುವಟಿಕೆ ಹಾಗೂ ಕೃಷಿ ಚಟುವಟಿಕೆಗೆ ಮೂಲ ಆಧಾರ ಸ್ತಂಭವಾಗಿರುವ ಪಹಣಿ ಪತ್ರವು (ಆರ್.ಟಿ.ಸಿ) ಲಭ್ಯವಾಗದೆ ರೈತರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ನಿಗದಿತ ಕೇಂದ್ರಗಳಲ್ಲಿ ಪಹಣಿ ಪತ್ರಗಳನ್ನು ವಿತರಿಸುವ ಕಾರ್ಯ ಕೆಲವು ವರ್ಷಗಳ ಹಿಂದೆಯೇ ಜಾರಿಗೆ ಮಾಡಿತ್ತು. ಇದರಿಂದಾಗಿ ರೈತರಿಗೆ ತಮಗೆ ಬೇಕಾದ ಆರ್.ಟಿ.ಸಿ.ಗಳನ್ನು ಪಡೆಯಲು ಅವಕಾಶವಾಗಿತ್ತು. ಇದೀಗ ಕಳೆದ ೧೫ ದಿನಗಳಿಂದ ರೈತರಿಗೆ ಅತ್ಯವಶ್ಯಕವಾಗಿರುವ ಆರ್.ಟಿ.ಸಿ.ಗಳು ನಿಗದಿತ ಕೇಂದ್ರದಲ್ಲಿ ಲಭ್ಯವಾಗುತ್ತಿಲ್ಲ. ಇದರಿಂದಾಗಿ ಸಮಸ್ಯೆ ಉಲ್ಬಣವಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಆರ್.ಟಿ.ಸಿ.ಗಳು ಲಭ್ಯವಾಗುತ್ತಿಲ್ಲವೆಂದು ಕೇಂದ್ರಗಳಲ್ಲಿ ನಾಮಫಲಕ ಅಳವಡಿಸಿದ್ದಾರೆ.
ರೈತರಿಗೆ ಪಹಣಿ ಮುಖ್ಯ
ರೈತರು ತಮ್ಮ ಕೃಷಿ ಚಟುವಟಿಕೆಗೆ ಬ್ಯಾಂಕಿನಿAದ, ಸೊಸೈಟಿಗಳಿಂದ ನಿಗದಿತ ಸಮಯದಲ್ಲಿ ಸಾಲವನ್ನು ಪಡೆಯುವುದು ವಾಡಿಕೆ ಹಾಗೂ ಸರ್ಕಾರದ ಯೋಜನೆಯಿಂದ ಬರುವ ಪ್ರಯೋಜನೆಗಳನ್ನು ಪಡೆಯುವುದು ಕೂಡ ಇಂತ ಸಮಯದಲ್ಲಿ ಹೆಚ್ಚಾಗಿರುತ್ತದೆ. ಆದರೆ ಈ ಎಲ್ಲಾ ಚಟುವಟಿಕೆಗಳು ಸಹಜವಾಗಿ ಸಾಗಬೇಕಾದರೆ ಆರ್.ಟಿ.ಸಿ. ಕಡ್ಡಾಯವಾಗಿದೆ. ಆರ್.ಟಿ.ಸಿ ಲಭ್ಯವಿಲ್ಲದೆ ರೈತರಿಗೆ ಯಾವುದೇ ಬ್ಯಾಂಕಿನಿAದ ಹಣಕಾಸು ಮಂಜೂರಾತಿ ಆಗುತ್ತಿಲ್ಲ. ತಮ್ಮ ತಮ್ಮ ಕೃಷಿ ಪತ್ತಿನ ಸಹಕಾರ ಸಂಘವನ್ನೇ ನಂಬಿಕೊAಡು ತಮ್ಮ ತೋಟ, ಗದ್ದೆಗಳಿಗೆ ಬೇಕಾದ ರಸಗೊಬ್ಬರವನ್ನು ಆರ್.ಟಿ.ಸಿ. ಆಧಾರದ ಮೇಲೆ ಪಡೆಯುತ್ತಾರೆ. ಆದರೆ ಇದೀಗ ಕೃಷಿ ಚಟುವಟಿಕೆಯು ಬಿರುಸಿನಿಂದ ಸಾಗುತ್ತಿದ್ದರೂ ಸೊಸೈಟಿಗಳಿಂದ ಗೊಬ್ಬರ ಪಡೆಯಲು ಆರ್.ಟಿ.ಸಿ.ಯು ಬಹುದೊಡ್ಡ ಸಮಸ್ಯೆಯಾಗಿ ರೈತರನ್ನು ಕಾಡುತ್ತಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಗೊಬ್ಬರವನ್ನು ಕೃಷಿ ಚಟುವಟಿಕೆಗೆ ಬಳಸಲು ಸಾಧ್ಯವಾಗುತ್ತಿಲ್ಲ.
ಕೃಷಿ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ಸಿಗುವ ಟಿಲ್ಲರ್, ಕಳೆಕೊಚ್ಚುವ ಯಂತ್ರ, ಟಾರ್ಪಲ್, ಮರ ಕೊಯ್ಯುವ ಯಂತ್ರ, ಇವುಗಳ ಪ್ರಯೋಜನಗಳನ್ನು ಪಡೆಯಲು ರೈತರು ಇಲಾಖೆಗೆ ಕಡ್ಡಾಯವಾಗಿ ಆರ್.ಟಿ.ಸಿ. ಪ್ರತಿಯನ್ನು ಇನ್ನಿತರ ದಾಖಲೆಗಳೊಂದಿಗೆ ಸಲ್ಲಿಸುವುದು ಕಡ್ಡಾಯವಾಗಿದೆ. ಆದರೆ ಆರ್.ಟಿ.ಸಿ. ಲಭ್ಯವಿಲ್ಲದ ಕಾರಣ ಇಂತಹ ಯೋಜನೆಗಳಿಂದ ರೈತರು ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ರೈತರು ಆರ್.ಟಿ.ಸಿ. ಕೇಂದ್ರಗಳಿಗೆ ತೆರಳಿ ವಿಚಾರಿಸುವುದು ದಿನನಿತ್ಯದ ಕೆಲಸವಾಗಿದ್ದು, ವೀರಾಜಪೇಟೆ ತಾಲೂಕಿನಲ್ಲಿ ಈ ರೀತಿಯ ದೃಶ್ಯಗಳು ನಿತ್ಯ ಕಂಡು ಬರುತ್ತಿವೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಸಿಗುವ ಎರಡು ಸಾವಿರ ಹಣವನ್ನು ಬ್ಯಾಂಕಿನಿAದ ಪಡೆಯಲು ಆರ್.ಟಿ.ಸಿ. ಕಡ್ಡಾಯಗೊಳಿಸಲಾಗಿದೆ. ನಿಗದಿತ ದಿನಾಂಕದ ಒಳಗೆ ಈ ಸವಲತ್ತನ್ನು ಪಡೆಯಲು ರೈತರು ನೂತನ ಆರ್.ಟಿ.ಸಿ. ಪ್ರತಿಯನ್ನು ಬ್ಯಾಂಕಿಗೆ ಸಲ್ಲಿಸಬೇಕಾಗಿದೆ. ಪ್ರಸ್ತುತ ಈ ಯೋಜನೆಯು ಚಾಲನೆಯಲ್ಲಿದ್ದು ಆರ್.ಟಿ.ಸಿ. ಲಭ್ಯವಾಗದೆ ಇದರ ಪ್ರಯೋಜನವನ್ನು ರೈತರು ಪಡೆಯಲು ಸಾಧ್ಯವಾಗುತ್ತಿಲ್ಲ.
ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಆರ್.ಟಿ.ಸಿ. ಆಧಾರದ ಮೇಲೆ ರೈತರಿಗೆ ಮೆಣಸು ಬಳ್ಳಿ, ಸಿಲ್ವರ್, ಅಕೇಶಿಯಾ ಇತ್ಯಾದಿ ಗಿಡಗಳನ್ನು ಉಚಿತವಾಗಿ ನೀಡುವ ಯೋಜನೆಯಿದ್ದರೂ ಆರ್.ಟಿ.ಸಿ. ಇಲ್ಲದೆ ಈ ಯೋಜನೆಯಿಂದ ವಂಚಿತರಾಗಿದ್ದಾರೆ.
ರೈತರು ಮನೆ ಕಟ್ಟಲು ಪಡೆದಿರುವ ಸಾಲವನ್ನು ಬ್ಯಾಂಕಿಗೆ ಮರು ಪಾವತಿಸಿ, ಈ ಬಗ್ಗೆ ಭೂ ನೊಂದವಣಾಧಿಕಾರಿಗಳ ಕಚೇರಿಯ ದಾಖಲೆಯಲ್ಲಿ ನಮುದಾಗಿರುವ ಹೆಸರನ್ನು ರದ್ದುಗೊಳಿಸಲು ಆರ್.ಟಿ.ಸಿ. ಕಡ್ಡಾಯವಾಗಿದೆ. ಇದರಿಂದಾಗಿ ಸಾಲವನ್ನು ಸಕಾಲದಲ್ಲಿ ಮರು ಪಾವತಿಸಿ ಮತ್ತೆ ಸಾಲ ಪಡೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಭೂ ನೊಂದಾವಣಾಧಿಕಾರಿಗಳ ಇಲಾಖೆಗೂ ಆದಾಯ ಖೋತವಾಗುತ್ತಿದೆ.
ಸೋ.ಪೇಟೆಯಲ್ಲಿ ಡಿಜಿಟಲ್ ಕಾರ್ಡ್ ಎಡವಟ್ಟು
ಸೋಮವಾರಪೇಟೆÀ ತಾಲೂಕು ಕಚೇರಿಯಲ್ಲಿ ಆರ್ಟಿಸಿ ಸಿಗದೇ ಇರುವುದರಿಂದ ಕೃಷಿಕರು, ಸಾರ್ವಜನಿಕರು ಪರದಾಟ ಅನುಭವಿಸುವಂತಾಗಿದೆ.
ಸೋಮವಾರಪೇಟೆ ತಾಲೂಕು ಕಚೇರಿಯಲ್ಲಿ ಕಳೆದ ೩೦ ದಿನಗಳಿಂದ ಆರ್ಟಿಸಿ ಸಿಗುತ್ತಿಲ್ಲ. ಪ್ರತಿನಿತ್ಯ ಗ್ರಾಮೀಣ ಭಾಗದಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ಸಾರ್ವಜನಿಕರು ಆರ್ಟಿಸಿ ಸಿಗದೇ ಇರುವುದರಿಂದ ಬರಿಗೈಯಲ್ಲಿ ಹಿಂತಿರುಗುವAತಾಗಿದೆ.
ಆರ್ಟಿಸಿ ತೆಗೆಯಲು ತಾಲೂಕು ಕಚೇರಿಗೆ ಡಿಜಿಟಲ್ ಕಾರ್ಡ್ ನೀಡಲಾಗಿದ್ದು, ಇದರ ಅವಧಿ ಮುಕ್ತಾಯವಾಗಿರುವುದರಿಂದ ಸಮಸ್ಯೆ ಉಂಟಾಗಿದೆ. ಬೆಂಗಳೂರಿಗೆ ಡಿಜಿಟಲ್ ಕಾರ್ಡ್ ಕಳುಹಿಸಲಾಗಿದ್ದು, ಅಪ್ಡೇಟ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ. ಇದರೊಂದಿಗೆ ಟೆಂಡರ್ ಅವಧಿಯೂ ಮುಕ್ತಾಯವಾಗಿರುವುದರಿಂದ ಸಾರ್ವಜನಿಕರಿಗೆ ಆರ್ಟಿಸಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಚೇರಿ ಸಿಬ್ಬಂದಿಗಳು ತಿಳಿಸಿದ್ದಾರೆ.
ಹೊರಭಾಗದಲ್ಲಿರುವ ಖಾಸಗಿ ಸಿಎಸ್ಸಿ ಸೆಂಟರ್ಗಳಲ್ಲೂ ಕೆಲವೊಮ್ಮೆ ಸರ್ವರ್ ಸಮಸ್ಯೆ ಎದುರಾಗುತ್ತಿರುವುದರಿಂದ ಆರ್ಟಿಸಿ ಪಡೆಯಲು ಸಾಧ್ಯವಾಗುತ್ತಿಲ್ಲ. ಆರ್ಟಿಸಿಯ ಅಲಭ್ಯತೆಯಿಂದಾಗಿ ರೈತರು ಹಾಗೂ ಕೃಷಿಕರು ಹೆಚ್ಚಿನ ಸಮಸ್ಯೆ ಎದುರಿಸುವಂತಾಗಿದೆ.
ಸಹಕಾರ ಸಂಘ, ಬ್ಯಾಂಕ್ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಆರ್ಟಿಸಿ ಅತೀ ಅಗತ್ಯವಾಗಿದೆ. ಇದರೊಂದಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಸಹಾಯಧನ, ಟಾರ್ಪಲ್, ಕೃಷಿ ಯಂತ್ರೋಪಕರಣ, ಗಿಡಗಳನ್ನು ಪಡೆಯಲೂ ಸಹ ಆರ್ಟಿಸಿ ಅವಶ್ಯಕತೆಯಿದ್ದು, ತಾಲೂಕು ಕಚೇರಿಯಲ್ಲಿ ಲಭ್ಯವಾಗದೇ ಸಮಸ್ಯೆಯಾಗುತ್ತಿದೆ.
ಸಹಕಾರಿ ಸಂಸ್ಥೆ ಹಾಗೂ ಬ್ಯಾಂಕ್ಗಳಲ್ಲಿ ಈಗಾಗಲೇ ಪಡೆದಿರುವ ಸಾಲವನ್ನು ರಿನೀವಲ್ ಮಾಡಲು, ಹೆಚ್ಚುವರಿ ಸಾಲ ಪಡೆಯಲು ಆರ್ಟಿಸಿ ಕೇಳಲಾಗುತ್ತಿದೆ. ಇತ್ತ ಸಮಯಕ್ಕೆ ಸರಿಯಾಗಿ ಆರ್ಟಿಸಿ ಸಿಗದೇ ಇರುವುದರಿಂದ ಸಾಲ ನವೀಕರಣಗೊಳ್ಳದೇ ಹೆಚ್ಚಿನ ಬಡ್ಡಿ ಪಾವತಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಕಾಡಾನೆ ಧಾಳಿ, ಅತಿವೃಷ್ಟಿಯಿಂದಾಗಿ ಕೃಷಿ ಫಸಲು ನಷ್ಟಗೊಂಡರೆ ಪರಿಹಾರ ಪಡೆಯಲು ಆರ್ಟಿಸಿ ಬೇಕಾಗಿದೆ. ಸಿಎಸ್ಸಿ ಸೆಂಟರ್ನಲ್ಲಿ ಒಂದು ಆರ್ಟಿಸಿಗೆ ೨೦ ರೂಪಾಯಿ ಪಾವತಿಸಬೇಕಿದೆ. ತಾಲೂಕು ಕಚೇರಿಯಲ್ಲಿ ೧೫ ರೂ. ನೀಡಬೇಕಿದ್ದು, ಇದೀಗ ಹಣ ನೀಡಿದರೂ ಆರ್ಟಿಸಿ ಇಲ್ಲದಂತಾಗಿದೆ.
ತಾಲೂಕಿನ ಕೂತಿ, ಕುಡಿಗಾಣ, ಕೊತ್ನಳ್ಳಿ, ಹೆಗ್ಗಡಮನೆ, ಬೀಕಳ್ಳಿ, ಬೆಂಕಳ್ಳಿ ಸೇರಿದಂತೆ ಇನ್ನಿತರ ಗ್ರಾಮೀಣ ಭಾಗದಿಂದ ನೂರಾರು ರೂಪಾಯಿ ವ್ಯಯಿಸಿ ಬಾಡಿಗೆ ವಾಹನದಲ್ಲಿ ಪಟ್ಟಣಕ್ಕೆ ಆಗಮಿಸುವ ರೈತರು, ಆರ್ಟಿಸಿ ಸಿಗದ ಹಿನ್ನೆಲೆ ಯಾವುದೇ ಕೆಲಸಗಳನ್ನೂ ಪೂರ್ಣಗೊಳಿಸಲಾಗದೇ ಬರಿಗೈಯಲ್ಲಿ ಹಿಂತಿರುಗುವAತಾಗಿದೆ. ಸ್ಥಳೀಯ ನಾಡಕಚೇರಿಗಳಲ್ಲಿ ಪಹಣಿ ನೀಡಲು ವ್ಯವಸ್ಥೆ ಕಲ್ಪಿಸಿದ್ದರೂ ಸಹ ವಿದ್ಯುತ್ ವ್ಯತ್ಯಯ, ಸರ್ವರ್ ಸಮಸ್ಯೆಯಿಂದಾಗಿ ಸಾಧ್ಯವಾಗುತ್ತಿಲ್ಲ.
ಸೇವಾ ಕೇಂದ್ರಗಳಲ್ಲಿ ಕೆಲವೊಮ್ಮೆ ಆರ್ಟಿಸಿ ಮಾತ್ರ ಸಿಗುತ್ತಿದ್ದು, ಮ್ಯೂಟೇಷನ್ ಪ್ರತಿ ಸೇರಿದಂತೆ ಇನ್ನಿತರ ದಾಖಲಾತಿಗಳಿಗೆ ತಾಲೂಕು ಕಚೇರಿಯನ್ನೇ ಅವಲಂಭಿಸಬೇಕಿದೆ. ಅತೀ ಹೆಚ್ಚು ಗ್ರಾಮಾಂತರ ಪ್ರದೇಶವನ್ನೇ ಹೊಂದಿರುವ ಸೋಮವಾರಪೇಟೆ ತಾಲೂಕಿನಲ್ಲಿ, ದಿನಂಪ್ರತಿ ಆರ್ಟಿಸಿ ನೀಡಬೇಕಾಗುತ್ತದೆ. ಇದೀಗ ಡಿಜಿಟಲ್ ಕಾರ್ಡ್ನಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಬಡ ರೈತರು ತೊಂದರೆ ಅನುಭವಿಸುವಂತಾಗಿದೆ.
ತಾಲೂಕು ಕಚೇರಿಯಲ್ಲಿ ಆರ್ಟಿಸಿ ನೀಡಲು ಶೀಘ್ರ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಕಚೇರಿ ಎದುರು ವಿವಿಧ ರೈತಪರ ಸಂಘಟನೆಗಳು, ಸಾರ್ವಜನಿಕರ ಸಹಕಾರದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಕೃಷಿಕ ಸಮಾಜ, ಕಾಫಿ ಬೆಳೆಗಾರರ ಸಂಘದ ಪ್ರಮುಖರು ಎಚ್ಚರಿಕೆ ನೀಡಿದ್ದಾರೆ.