ಸೋಮವಾರಪೇಟೆ,ಆ.೧೧: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಸೆಪ್ಟೆಂಬರ್ ೩ ರಂದು ಚುನಾವಣೆ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಬಿಸಿಎಂಬಿ ಮೀಸಲು ಕ್ಷೇತ್ರವಾಗಿರುವ ವಾರ್ಡ್ ೧ರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಉದಯಶಂಕರ್ ಹಾಗೂ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಜಯಗಳಿಸಿದ್ದ ಪ.ಪಂ. ಅಧ್ಯಕ್ಷೆಯೂ ಆಗಿದ್ದ ನಳಿನಿ ಗಣೇಶ್ ಅವರ ನಿಧನದಿಂದ ತೆರವಾಗಿದ್ದ ಈ ಎರಡೂ ಸ್ಥಾನಗಳಿಗೆ ಸೆಪ್ಟೆಂಬರ್ ೩ ರಂದು ಮತದಾನ ನಡೆಯಲಿದೆ.

ಇದೇ ತಿಂಗಳ ತಾ. ೧೬ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಅಲ್ಲಿಂದ ಸೆ. ೬ರವರೆಗೆ ಚುನಾವಣೆ ನಡೆಯುವ ವಾರ್ಡ್ಗಳಲ್ಲಿ ಸದಾಚಾರ ಸಂಹಿತೆ ಜಾರಿಗೆ ಬರಲಿದೆ. ಇದೇ ತಿಂಗಳ ತಾ. ೨೩ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ೨೪ರಂದು ಪರಿಶೀಲನೆ, ೨೬ರೊಳಗೆ ನಾಮಪತ್ರ ವಾಪಸ್ ಪಡೆಯುವುದು, ಸೆಪ್ಟೆಂಬರ್ ೩ ರಂದು ಚುನಾವಣೆ, ಮರು ಮತದಾನದ ಅವಶ್ಯಕತೆ ಉಂಟಾದಲ್ಲಿ ಸೆ.೫ರಂದು ಮರು ಮತದಾನ, ತಾ. ೬ರಂದು ಮತ ಎಣಿಕೆ ನಡೆಯಲಿದೆ.

ಕಳೆದ ಚುನಾವಣೆಯಲ್ಲಿ ವಾರ್ಡ್ ಒಂದರಿAದ ಕಾಂಗ್ರೆಸ್ ಬೆಂಬಲಿತ ಸದಸ್ಯ ಉದಯಶಂಕರ್ ಅವರು ಗೆಲುವು ಸಾಧಿಸಿದ್ದು, ಅನಾರೋಗ್ಯ ಹಿನ್ನೆಲೆ ನಿಧನರಾಗಿದ್ದಾರೆ. ವಾರ್ಡ್ ೩ರಿಂದ ಬಿಜೆಪಿ ಬೆಂಬಲಿತ ಸದಸ್ಯೆಯಾಗಿ ಸಾಮಾನ್ಯ ಮಹಿಳೆ ಮೀಸಲು ಕ್ಷೇತ್ರದಿಂದ ನಳಿನಿ ಗಣೇಶ್ ಸ್ಪರ್ಧಿಸಿ ಜಯ ಗಳಿಸಿದ್ದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲುಗೊಳಿಸಿ ಆಯೋಗ ಆದೇಶ ಹೊರಡಿಸಿದ್ದರಿಂದ ಸಾಮಾನ್ಯ ಮಹಿಳೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರೂ ಸಹ ನಳಿನಿ ಗಣೇಶ್ ಅಧ್ಯಕ್ಷೆಯಾಗಿದ್ದರು. ಪ್ರಸ್ತುತ ಪ್ರಭಾರ ಅಧ್ಯಕ್ಷರಾಗಿ ಹಾಲಿ ಉಪಾಧ್ಯಕ್ಷ, ಕಾಂಗ್ರೆಸ್ ಬೆಂಬಲಿತ ಸಂಜೀವ ಅವರು ಅಧಿಕಾರ ನಡೆಸುತ್ತಿದ್ದು, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಬಿಜೆಪಿಯ ಪಿ.ಕೆ. ಚಂದ್ರು ಅವರು ಈ ಅವಧಿಯಲ್ಲಿ ಅಧ್ಯಕ್ಷರಾಗಲು ಕಸರತ್ತು ನಡೆಸುತ್ತಿದ್ದಾರೆ.