ಸೋಮವಾರಪೇಟೆ,ಆ.೧೧: ಬೆಳೆಗಾರರಿಗೆ ಮಾರಕವಾಗುವಂತಹ ಸರ್‌ಫೈಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದನ್ನು ತಕ್ಷಣ ರದ್ದುಗೊಳಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳು ವಾಯಿದೆ ಮೀರಿದ ಕೃಷಿ ಸಾಲದ ವಸೂಲಾತಿಗೆ, ಕೃಷಿಕರಿಗೆ ೬೦ ದಿನಗಳ ತಿಳುವಳಿಕೆ ಪತ್ರ ನೀಡಿ, ತದನಂತರ ಯಾವುದೇ ತಿಳುವಳಿಕೆ ನೀಡದೆ, ಹರಾಜು ಮಾಡುವ ಅವಕಾಶ ಈ ಕಾಯಿದೆಯಲ್ಲಿದ್ದು, ಇದು ಬೆಳೆಗಾರರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.

ಈ ಕಾಯ್ದೆಯ ಮೂಲಕ ಹರಾಜು ಹಾಕಿ ಬರುವ ಹಣವನ್ನು ಸಾಲಕ್ಕೆ ವಜಾಗೊಳಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಭೂ ಮಾಫಿಯಾದವರು, ಬ್ಯಾಂಕ್ ಹಾಗೂ ದಲ್ಲಾಳಿಗಳ ಒಳ ಒಪ್ಪಂದದ ಮುಖಾಂತರ ಕೃಷಿ ಜಮೀನುಗಳನ್ನು ಕಡಿಮೆ ಬೆಲೆಗೆ ಹರಾಜಿನಲ್ಲಿ ಖರೀದಿಸಿ, ಪ್ರತಿ ಕೃಷಿಗೆ ಒಳಪಟ್ಟ ಹಳ್ಳಿಗಳನ್ನು ಆಕ್ರಮಿಸಿಕೊಂಡು ಅವರಿಗೆ ಬೇಕಾದಂತೆ ಜಮೀನುಗಳನ್ನು ಪರಿವರ್ತಿಸಿಕೊಳ್ಳುವ ಅವಕಾಶ ಇದೆ. ಈ ಕಾಯಿದೆ ಜಾರಿಯಾದರೆ, ಭವಿಷ್ಯದಲ್ಲಿ ಎಲ್ಲ ಕೃಷಿ ಉತ್ಪನ್ನಗಳು ಕುಂಠಿತವಾಗಿ ದೇಶವು ಆಹಾರದ ಕೊರತೆಯನ್ನು ಎದುರಿಸಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು.

ಕೋವಿಡ್ ೧೯ರ ಮಹಾಮಾರಿ ಹಾಗೂ ಹವಾಮಾನ್ಯ ವೈಪರಿತ್ಯ ದಿಂದಾಗಿ ಬೆಳೆಗಾರರು ಕೃಷಿ ಚಟುವಟಿಕೆಗಳನ್ನು ಮಾಡಲಾಗದೆ ನಷ್ಟ ಅನುಭವಿಸಿಕೊಂಡು ಬಂದಿದ್ದಾರೆ. ಪ್ರಸ್ತುತ ವಾಣಿಜ್ಯ ಬ್ಯಾಂಕ್‌ಗಳು ಬೆಳೆಗಾರರಿಂದ ವಾಯಿದೆ ಮೀರಿದ ಸಾಲದ ವಸೂಲಾತಿಗೆ ಸರ್‌ಫೈಸಿ ಕಾಯಿದೆಯನ್ನು ಬಳಸಿಕೊಳ್ಳುತ್ತಿದ್ದು, ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ನಿಟ್ಟಿನಲ್ಲಿ ಬೆಳೆಗಾರರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ವಾಣಿಜ್ಯ ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡುವುದನ್ನು ಮುಂದೂಡ ಬೇಕೆಂದು ಮನವಿ ಮಾಡಿದರು.

ಪ್ರಸಕ್ತ ಸಾಲಿನ ಜುಲೈ ತಿಂಗಳ ಅಂತ್ಯಕ್ಕೆ ಹಿಂದಿನ ಸಾಲಿಗಿಂತ ದುಪ್ಪಟ್ಟು ಮಳೆಯಾಗಿದ್ದು, ತೋಟದಲ್ಲಿ ತೇವಾಂಶ ಹೆಚ್ಚಿದ ಹಿನ್ನೆಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಫಸಲು ಉದುರಲು ಪ್ರಾರಂಭಿಸಿದೆ. ಇದರೊಂದಿಗೆ ಕಾಡು ಪ್ರಾಣಿಗಳಿಂದ ಬೆಳೆ ನಷ್ಟ ಉಂಟಾಗುತ್ತಿದೆ. ರಾಜ್ಯ ಸರ್ಕಾರ ಬೆಳೆಗಾರರ ಸಂಕಷ್ಟವನ್ನು ಮನಗಂಡು ಕನಿಷ್ಟ ಒಂದು ಹೆಕ್ಟೇರಿಗೆ ರೂ. ಒಂದು ಲಕ್ಷ ಪರಿಹಾರ ಘೋಷಣೆ ಮಾಡಿ, ಬೆಳೆಗಾರರ ಹಿತ ಕಾಪಾಡಬೇಕೆಂದು ಸಂಘದ ಉಪಾಧ್ಯಕ್ಷ ಬಿ.ಎಂ. ಲವ ಮನವಿ ಮಾಡಿದರು.

ಕಾಫಿಯನ್ನು ಕೃಷಿ ಉತ್ಪನ್ನಗಳ ಪಟ್ಟಿಗೆ ಸೇರಿಸಬೇಕು. ಬೆಳೆಗಾರರ ಎನ್.ಪಿ. ಸಾಲಕ್ಕೆ ವಾಣಿಜ್ಯ ಬ್ಯಾಂಕ್‌ಗಳು ಒತ್ತಡ ಹೇರಬಾರದು. ಈ ಬಗ್ಗೆ ಲೀಡ್ ಬ್ಯಾಂಕ್ ನಿರ್ದೇಶನ ನೀಡಬೇಕು. ಸಾಲ ಕಟ್ಟಲು ಕಾಲಾವಕಾಶ ನೀಡಬೇಕು. ಬಡ್ಡಿಯನ್ನು ಕಡಿಮೆ ಮಾಡಬೇಕು. ತಾಲೂಕು ಕಚೇರಿಯಲ್ಲಿ ಆರ್‌ಟಿಸಿ ವಿತರಣೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಪದಾಧಿಕಾರಿ ಗಳಾದ ಎಸ್.ಸಿ. ಪ್ರಕಾಶ್, ಬಿ.ಜಿ. ಪೂವಮ್ಮ, ಎಸ್.ಬಿ. ಯಶ್ವಂತ್ ಉಪಸ್ಥಿತರಿದ್ದರು.