ಪೆರಾಜೆ, ಆ. ೧೧: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೊಪಯ್ಯ ಅವರಿಗೆ ಸಚಿವ ಸ್ಥಾನ ನೀಡುವಂತೆ ಪೆರಾಜೆ ಬಿಜೆಪಿ ಶಕ್ತಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.

ಇಲ್ಲಿಯ ಪಂಚಾಯತ್ ಸಭಾಂಗಣದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ನಂಜಪ್ಪ ನಿಡ್ಯಮಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಹಿಂದಿನ ಬಾರಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲವಾಗಿ ಸರ್ಕಾರ ಅಪಾಯದಲ್ಲಿದ್ದಾಗ , ವಿರೋಧ ಪಕ್ಷಗಳ ಗದ್ದಲ ಗಲಾಟೆಗಳ ನಡುವೆಯೂ ಸರ್ಕಾರವನ್ನು ಉಳಿಸಿದ ಕೀರ್ತಿ ಅಂದಿನ ವಿಧಾನಸಭಾ ಅಧ್ಯಕ್ಷರಾದ ಶಾಸಕ ಕೆ.ಜಿ.ಬೋಪಯ್ಯ ಅವರಿಗೆ ಸಲ್ಲುತ್ತದೆ, ಬಿಜೆಪಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ಇವರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಲಾಗಿದೆ. ಇಂದು ವಲಸಿಗರು ಸರ್ಕಾರ ರಚನೆಗೆ ಎಷ್ಟು ಮುಖ್ಯವೋ, ಅಂದು ಬೋಪಯ್ಯರವರು ಯಡಿಯೂರಪ್ಪ ಸರ್ಕಾರ ಉಳಿಯಲು ಅಷ್ಟೇ ಕಾರಣೀಭೂತರಾಗಿದ್ದರು, ವಲಸಿಗ ಶಾಸಕರಿಗೆ ಕೊಡುವ ಸ್ಥಾನಮಾನ ಗೌರವವನ್ನು ನಮ್ಮ ಶಾಸಕರಿಗೆ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭ ಕೊಡಗು ಜಿಲ್ಲಾ ಭಾ.ಜ.ಪ ರೈತ ಮೋರ್ಚಾ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಮಡಿಕೇರಿ ತಾ. ಬಿಜೆಪಿ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಪದಾಧಿಕಾರಿ ಧನಂಜಯ ಕೋಡಿ, ಗ್ರಾ.ಪಂ ಸದಸ್ಯರಾದ ಉದಯಚಂದ್ರ ಕುಂಬಳಚೇರಿ, ಸುಭಾಷ್ ಬಂಗಾರಕೋಡಿ, ಪಕ್ಷದ ಹಿರಿಯರಾದ ಹೊನ್ನಪ್ಪ ಅಮೆಚೂರು, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಅಶೋಕ ಪೆರುಮುಂಡ ಸೇರಿದಂತೆ ರಾಜಕೀಯ ಮುಖಂಡರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಬೂತ್ ಮಟ್ಟದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಂಟಿಕೊಪ್ಪ ನಾಡು ಗೌಡ ಸಂಘ

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ವಿಧಾಸಭಾ ಅಧ್ಯಕ್ಷರಾಗಿ ಸಮರ್ಥವಾಗಿ ನಿಭಾಯಿಸಿದ ಅನುಭವವಿರುವ ಕೆ.ಜಿ. ಬೋಪಯ್ಯ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಸುಂಟಿಕೊಪ್ಪ ನಾಡು ಗೌಡ ಸಂಘ ಆಗ್ರಹಿಸಿದೆ.

ಈ ಸಂಬAಧ ಏರ್ಪಡಿಸಿದ್ದ ಸಭೆಯಲ್ಲಿ ಶಾಸಕ ಬೋಪಯ್ಯ ಅವರು, ಎರಡು ಬಾರಿ ಮಡಿಕೇರಿ ಹಾಗೂ ಎರಡು ಬಾರಿ ವೀರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದು, ಎಲ್ಲ ವರ್ಗದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದವರಾಗಿದ್ದಾರೆ. ರಾಜಕೀಯವಾಗಿಯೂ ಸಾಕಷ್ಟು ಅನುಭವ ಹೊಂದಿದ್ದು, ಅವರಿಗೆ ಸಚಿವ ಸ್ಥಾನ ನೀಡಿದ್ದಲ್ಲಿ ಕೊಡಗು ಜಿಲ್ಲೆ ಅಭಿವೃದ್ಧಿ ಹೊಂದಲಿದೆ ಎಂಬ ಅಭಿಪ್ರಾಯ ವ್ಯಕ್ತಗೊಂಡಿತು.

ಸಭೆಯಲ್ಲಿ ಅಧ್ಯಕ್ಷ ಯಂಕನ ಉಲ್ಲಾಸ, ಉಪಾಧ್ಯಕ್ಷ ಬಿಳಿಯಾರ ಜವಾಹರ (ಮಂಜು), ಕಾರ್ಯದರ್ಶಿ ಯಂಕನ ಕೌಶಿಕ, ಸಹ ಕಾರ್ಯದರ್ಶಿ ಮಾಗಲು ವಸಂತ, ಖಜಾಂಚಿ ಪಟ್ಟೆಮನೆ ಉದಯಕುಮಾರ್, ನಿರ್ದೇಶಕರುಗಳಾದ ಕುಂಜಿಲನ ಮಂಜುನಾಥ್, ಯಂಕನ ಸುಮಿತ್ರ(ಕೃಪಾ), ಪಟ್ಟೆಮನೆ ಕುಸುಮ, ಬೈಚನ ಮೋಹನ್ ಕುಮಾರ್, ಮಾಟ್ರಮಾಡ ಸೋಮಯ್ಯ, ಕಡ್ಯದ ಅರುಣ್‌ಕುಮಾರ್, ಓಡೆಪ್ಪನ ಸುಧೀಶ್‌ಕುಮಾರ್, ಪಟ್ಟೆಮನೆ ಪ್ರಸನ್ನ ಪಾಲ್ಗೊಂಡಿದ್ದರು.