ಮಡಿಕೇರಿ, ಆ. ೧೧: ಕೊಡಗು ಜಿಲ್ಲೆಯಲ್ಲಿ ಇ-ಕೆವೈಸಿ ಪ್ರಕ್ರಿಯೆಗೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ತಿಂಗಳ ನಿಗದಿತ ಅವಧಿಯಲ್ಲಿ ನಡೆದ ಪ್ರಕ್ರಿಯೆಯಲ್ಲಿ ೧೪,೦೯೫ ಕುಟುಂಬಗಳು ಪ್ರಕ್ರಿಯೆಯಲ್ಲಿ ಭಾಗಿಯಾಗಿವೆ. ಇದುವರೆಗೂ ಒಟ್ಟು ೯೫,೭೦೦ ಕುಟುಂಬ ಬೆರಳಚ್ಚು ನೀಡಿ ಪ್ರಕ್ರಿಯೆ ಪೂರ್ಣಗೊಳಿಸಿದೆೆ.

ಬೋಗಸ್ ಕಾರ್ಡ್ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆರಳಚ್ಚು ನೀಡುವ ನಿಯಮ ಜಾರಿಗೊಳಿಸಲಾಗಿದ್ದು, ಈ ಬಾರಿಯ ಪ್ರಕ್ರಿಯೆಯಲ್ಲಿ ೧,೪೩,೩೧೧ ಪಡಿತರ ಚೀಟಿದಾರರ ಕುಟುಂಬಗಳ ಪೈಕಿ ಬೆರಳಚ್ಚು ನೀಡದ ೧೪,೦೯೫ ಕುಟುಂಬದ ಸದಸ್ಯರು ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಇದುವರೆಗೂ ಒಟ್ಟು ೯೫,೭೦೦ ಕುಟುಂಬಗಳ ಇ-ಕೆವೈಸಿ ಮುಗಿದಿವೆ. ೪೬,೬೧೧ ಕುಟುಂಬಗಳು ಬೆರಳಚ್ಚು ನೀಡಲು ಬಾಕಿ ಉಳಿದಿವೆ.

ತಾ. ೧ ರಿಂದ ೧೦ರ ತನಕ ನಡೆದ ಪ್ರಕ್ರಿಯೆಯಲ್ಲಿ ಮೊದಲ ದಿನ ೫೨೯ ಮಂದಿ, ತಾ. ೨ ರಂದು ೧೦೭೫, ತಾ. ೩ ರಂದು ೧,೧೦೦, ತಾ. ೪ ರಂದು ೧೧೩೬, ತಾ. ೫ ರಂದು ೧೩೬೪, ತಾ. ೬ ರಂದು ೧೪೭೧, ತಾ. ೭ ರಂದು ೧೨೩೯, ತಾ. ೮ ರಂದು ೨೩೧೫, ತಾ. ೧೦ ರಂದು ೨೪೭೯ ಕುಟುಂಬ ಬೆರಳಚ್ಚು ನೀಡಿದೆ. ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇನ್ನೂ ೪೬,೬೧೧ ಕುಟುಂಬ ಬೆರಳಚ್ಚು ನೀಡಲು ಬಾಕಿ ಉಳಿದಿದ್ದಾರೆ. ಅವರಿಗೆ ಮುಂದಿನ ತಿಂಗಳು ೧ ರಿಂದ ೧೦ ರ ತನಕ ಅವಕಾಶ ನೀಡಲಾಗುತ್ತದೆ. ಈ ಪೈಕಿ ಬೇರೆ ಜಿಲ್ಲೆಗಳಲ್ಲಿ ಉದ್ಯೋಗದಲ್ಲಿರುವವರು ಹಾಗೂ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಅದೇ ರೀತಿ ಬೆರಳಚ್ಚು ಮಾಸಿದ ೪,೦೬೦ ಮಂದಿಯ ದೂರುಗಳು ಬಂದಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.