ಕಣಿವೆ, ಆ. ೧೦: ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವಂತೆ ಯಾರಾದರೊಬ್ಬ ಕೃಷಿಕ ಏನಾದರು ಅಪರೂಪದ ಬೆಳೆ ಬೆಳೆದು ಕೈತುಂಬಾ ಹಣಗಳಿಸಿದರೆ ಸಾಕು. ಬಹುತೇಕ ಕೃಷಿಕರು ಅದನ್ನೇ ಅನುಸರಿಸುತ್ತಾರೆ. ಕೊನೆಗೆ ಬೇಡಿಕೆ ಕುಸಿದು ಬೆಳೆನಷ್ಟವನ್ನು ಎಲ್ಲರೂ ಅನುಭವಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಕೃಷಿಕರು ಬೆಳೆವ ತರಕಾರಿ ಕಾಯಿ ಪಲ್ಯೆಗಳು, ಗೆಡ್ಡೆ ಗೆಣಸು ಫಸಲುಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗುತ್ತಿಲ್ಲ. ಹಾಗಾಗಿ ಕೃಷಿಕರು ನಷ್ಟದ ಮೇಲೆ ನಷ್ಟ ಅನುಭವಿಸುತ್ತಿದ್ದಾರೆ. ಆದಾಗ್ಯೂ ಅಪ್ಪ ಹಾಕಿದ ಆಲದ ಮರದಲ್ಲಿಯೇ ಜೋತು ಬೀಳುತ್ತಿದ್ದಾರೆಯೇ ಹೊರತು ಪರ್ಯಾಯ ಬೆಳೆ ಪದ್ಧತಿಗೆ ಮುಂದಾಗುವವರ ಸಂಖ್ಯೆ ಕಡಿಮೆ.

ಆದರೆ ಇಲ್ಲೋರ್ವರು ವಯೋವೃದ್ಧ ದಂಪತಿಗಳು ಹುತ್ತರಿ ಗೆಣಸು ಬೆಳೆ ಬೆಳೆದು ಇತರೆ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಸೀಗೆಹೊಸೂರು ಗ್ರಾಮದ ವಯೋವೃದ್ಧರಾದ ಸೂರಪ್ಪ ಹಾಗೂ ದೇವಮ್ಮ ದಂಪತಿ ತಮ್ಮ ಮನೆಯ ಆವರಣದ ಜಾಗದಲ್ಲಿ ಹುತ್ತರಿ ಗೆಣಸು ಬೆಳೆದಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ, ಅಂದರೆ ಮಾರ್ಚ್ ತಿಂಗಳಲ್ಲಿ ತಮ್ಮ ಮನೆಯಂಗಳದಲ್ಲಿ ಬೆಳೆಸಿರುವ ಸಿಲ್ವರ್ ಮರಗಳ ಬುಡದಲ್ಲಿ ಹುತ್ತರಿ ಗೆಣಸು ಬಳ್ಳಿಗಳನ್ನು ಬೆಳೆಸಲಾಗಿದೆ. ಆ ಬಳ್ಳಿಗಳು ಕಾಳು ಮೆಣಸು ಬಳ್ಳಿಗಳ ಹಾಗೆ ದಟ್ಟವಾಗಿ ಬೆಳೆದು ಮರದ ಬುಡದಿಂದ ಮೇಲುಮುಖವಾಗಿ ಹಬ್ಬಿಕೊಂಡು ಬೆಳೆಯುತ್ತಿವೆ.

ಒಂದು ಬಳ್ಳಿ ಹಬ್ಬಿಸಲು ಹುತ್ತರಿ ಗೆಣಸು ಬಿತ್ತನೆ ಬೀಜವೊಂದಕ್ಕೆ ತಲಾ ೩೦ ರೂಗಳಂತೆ ವ್ಯಯ ಮಾಡಿರುವ ಈ ದಂಪತಿಗಳು ಬಿತ್ತನೆಯಿಂದ ಕಟಾವಿನತನಕ ಸುಮಾರು ಎಂಟು ತಿಂಗಳ ಅಂತರದಲ್ಲಿ ಅಂದರೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರೋಹಿಣಿ ನಕ್ಷತ್ರದ ಹುಣ್ಣಿಮೆಯಂದು ಬರುವ ಹುತ್ತರಿ ಹಬ್ಬದ ಸಂದರ್ಭ ಈ ಹುತ್ತರಿ ಗೆಣಸಿಗೆ ಭಾರೀ ಬೇಡಿಕೆ ಇರುವುದರಿಂದ ಹಬ್ಬದ ಆಸುಪಾಸಿನಲ್ಲಿ ಈ ಫಸಲನ್ನು ಕಟಾವು ಮಾಡಲಾಗುತ್ತದೆ.

ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿನ ಕೊಡವರು ಹಾಗೂ ಅರೆಭಾಷಿಗ ಸಮುದಾಯದ ಸಾಂಪ್ರದಾಯಿಕ ಹಬ್ಬಕ್ಕೆ ಹುತ್ತರಿ ಗೆಣಸಿನ ಸೊಗಡಿಗೆ ಹೆಚ್ಚಿನ ಮಹತ್ವ ಇರುವ ಕಾರಣ ಸಹಜವಾಗಿಯೇ ಈ ಹುತ್ತರಿ ಗೆಣಸಿಗೆ ಕೆ.ಜಿ. ಒಂದಕ್ಕೆ ತಲಾ ೩೫ ರಿಂದ ೪೦ ರೂ.ಗಳವರೆಗೆ ಬೆಲೆ ಸಿಗುತ್ತದೆ ಎನ್ನಲಾಗುತ್ತಿದೆ.

ಹಾಗೆಯೇ ಈ ಫಸಲನ್ನು ನೆರೆ ಜಿಲ್ಲೆ ಕೇರಳದಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ತರಕಾರಿ ವಾಹನಗಳು ಮನೆ ಬಾಗಿಲಿಗೆ ಬಂದು ಈ ಹುತ್ತರಿ ಗೆಣಸನ್ನು ಕೊಂಡೊಯ್ಯುತ್ತವೆ ಎಂದು ದೇವಪ್ಪ ಹೇಳುತ್ತಾರೆ. ಆದರೆ ಈ ಹುತ್ತರಿ ಗೆಣಸಿಗೆ ಇರುವ ದರ ಸಿಹಿ ಗೆಣಸು, ಮರಗೆಣಸು ಹಾಗೂ ಕೆಸಕ್ಕೆ ಇಲ್ಲವಾಗಿದೆ. ಅಂದರೆ ಈ ಹುತ್ತರಿ ಗೆಣಸನ್ನು ಬೆಳೆಯಲು ಮರಗಳ ಬುಡಗಳು ಸೂಕ್ತವಾದ ಕಾರಣ ಖರ್ಚು ಕೂಡ ಕಡಿಮೆಯೇ ಎನ್ನುತ್ತಾರೆ ಕೃಷಿಕ ಮಹಿಳೆ ದೇವಮ್ಮ. ತಾವು ಕಳೆದ ಮೂರು ವರ್ಷಗಳಿಂದ ಈ ಫಸಲು ಬೆಳೆಯುತ್ತಿದ್ದು ಉತ್ತಮವಾದ ಲಾಭದಾಯಕ ಬೆಳೆಯಾಗಿದೆ ಎನ್ನುತ್ತಾರೆ ಅವರು.

ಹುತ್ತರಿ ಹಬ್ಬಕ್ಕೆ ಸಾವಯವವಾಗಿ ಬೆಳೆಯುತ್ತಿರುವ ಸ್ವಾದ ಬರಿತ ಹುತ್ತರಿ ಗೆಣಸಿನ ಬೆಳೆಯ ಮಾಹಿತಿ ಅಥವಾ ಗೆಣಸು ಬೇಕಾದರೆ ದೇವಮ್ಮ ಅವರನ್ನು ಸಂಪರ್ಕಿಸಬಹುದು. ೯೬೦೬೬೫೦೨೪೮

- ಕೆ.ಎಸ್. ಮೂರ್ತಿ