ಕಣಿವೆ, ಆ. ೧೦: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ಚಿಕ್ಕನಾಯಕನ ಹೊಸಳ್ಳಿ ಗ್ರಾಮದ ಸುರೇಶ್ ಎಂಬವರ ಶುಂಠಿ ಹೊಲದಲ್ಲಿ ಸ್ಥಳೀಯ ಕೃಷಿಕರಿಗೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶುಂಠಿ ಫಸಲಿಗೆ ಸಮಗ್ರ ರೋಗ ನಿರ್ವಹಣೆಯ ಕುರಿತು ಕೃಷಿಕರ ಜಮೀನಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಮಾತನಾಡಿದ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ. ವೀರೇಂದ್ರ ಕುಮಾರ್, ಕೃಷಿಕರು ರಾಸಾಯನಿಕ ಔಷಧಿಗಳ ಬಳಕೆಯನ್ನು ಮಿತಗೊಳಿಸಿ ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು.

ಶುಂಠಿ ಹೊಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಜೀವಾಮೃತ ಸಿದ್ಧಗೊಳಿಸಿ ಎಲ್ಲಾ ಬೆಳೆಗಳಿಗೂ ಸಿಂಪಡಿಸಿಕೊAಡು ಬಂದರೆ ಉತ್ತಮ ಬೆಳೆ ಹಾಗೂ ಇಳುವರಿ ಪಡೆಯಬಹುದು ಎಂದರಲ್ಲದೆ, ಶುಂಠಿಗೆ ಬಾಧಿಸುತ್ತಿರುವ ಕೊಳೆ ರೋಗ ಸೇರಿದಂತೆ ವಿವಿಧ ಮಾರಕ ರೋಗಗಳ ಹತೋಟಿಗೆ ಉಪಯುಕ್ತ ಎನ್ನಲಾದ ಅರ್ಕ ಎಂಬ ಸೂಕ್ಷ್ಮಾಣು ಜೀವಿಗಳ ಸಮೂಹದ ೨೦ ಗ್ರಾಂ ಪೌಡರನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ರೋಗ ಪೀಡಿತ ಶುಂಠಿಯ ಬುಡಕ್ಕೆ ಸುರಿಯುವ ಮೂಲಕ ಡಾ. ವೀರೇಂದ್ರಕುಮಾರ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಹಾಗೆಯೇ ಗೋಣಿಕೊಪ್ಪದ ಕೃಷಿ ಹವಾಮಾನ ತಜ್ಞ ಡಾ. ಹರೀಶ್ ಈ ಸಂದರ್ಭ ಉಪಸ್ಥಿತರಿದ್ದು ಭಾರತೀಯ ಹವಾಮಾನ ಇಲಾಖೆ ಕೃಷಿ ಚಟುವಟಿಕೆಗಳಿಗೆ ಉಪಯುಕ್ತ ವಾಗುವಂತೆ ಸಿದ್ಧಪಡಿಸಿರುವ ಹವಾಮಾನ ಆಪ್ "ಮೇಘಧೂತ್" ಬಳಕೆ ಹಾಗೂ ಉಪಯೋಗದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಸೋಮವಾರಪೇಟೆ ತಾಲೂಕು ಕೃಷಿ ರೈತ ಮೋರ್ಚಾ ಅಧ್ಯಕ್ಷ ಟಿ.ಬಿ. ಜಗದೀಶ್, ತೊರೆನೂರು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಕೆ. ವಸಂತ, ಕೃಷಿಕರಾದ ಮಹೇಶ್, ಟಿ.ಎಸ್. ರಾಜಶೇಖರ್, ಡಿ.ಆರ್. ಪ್ರೇಮಕುಮಾರ್, ಪಾಂಡುರAಗ, ರವಿಕುಮಾರ್ ಮೊದಲಾದವರಿದ್ದರು.