ರಾಜ್ಯದಲ್ಲಿ ಕೊರೊನಾದಿಂದ ೩೧ ಸಾವು
ಬೆಂಗಳೂರು, ಆ. ೧೦: ಕೊರೊನಾ ಎರಡನೇ ಅಲೆ ನಂತರ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕಳೆದ ೨೪ ಗಂಟೆಯಲ್ಲಿ ೧,೩೩೮ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೨೯,೨೧,೦೪೯ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಮಹಾಮಾರಿಗೆ ೩೧ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೩೬,೮೪೮ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಬೆಂಗಳೂರಿನಲ್ಲಿ ಇಂದು ೩೧೫ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ ೧೨,೩೧,೦೯೭ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೩ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೧,೯೪೭ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೨೮,೬೧,೪೯೯ಕ್ಕೆ ಏರಿಕೆಯಾಗಿದೆ. ೨೨,೬೭೬ ಸಕ್ರೀಯ ಪ್ರಕರಣಗಳಿವೆ. ರಾಜ್ಯಾದ್ಯಂತ ಇಂದು ೧,೨೬,೪೦೦ ಕೋವಿಡ್ ಟೆಸ್ಟ್ ನಡೆಸಲಾಗಿದ್ದು, ೧,೩೩೮ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. ೧.೦೫ಕ್ಕೆ ಇಳಿದಿದೆ.
ತಾಲಿಬಾನ್ ಹಿಂಸಾಚಾರ: ದೂತವಾಸ ಸಿಬ್ಬಂದಿ ವಾಪಸ್ ಕರೆಸಿಕೊಳ್ಳಲು ಕ್ರಮ
ಕಾಬೂಲ್/ನವದೆಹಲಿ, ಆ. ೧೦: ಅಫ್ಘಾನಿಸ್ತಾನದ ರಾಜಧಾನಿ ಬಾಲ್ಖ್ ಪ್ರಾಂತ್ಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ತಾಲಿಬಾನ್ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು, ಮಜರ್-ಇ-ಶರೀಫ್ನಲ್ಲಿರುವ ತನ್ನ ದೂತವಾಸದಿಂದ ಭಾರತವು ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸುತ್ತಿದೆ ಎಂದು ಬಲ್ಲ ಮೂಲಗಳು ಮಂಗಳವಾರ ತಿಳಿಸಿವೆ. ಕಾನ್ಸುಲೇಟ್ನ ಭಾರತೀಯ ಮೂಲದ ಸಿಬ್ಬಂದಿ ಮತ್ತು ಮಜರ್-ಇ-ಶರೀಫ್ನಲ್ಲಿ ವಾಸಿಸುತ್ತಿರುವ ಹಲವಾರು ಭಾರತೀಯರನ್ನು ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹದಗೆಡುತ್ತಿರುವ ಭದ್ರತಾ ಸನ್ನಿವೇಶದಿಂದಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರು ಇಂದೇ ವಿಶೇಷ ವಿಮಾನದಲ್ಲಿ ಭಾರತಕ್ಕೆ ಮರಳುವಂತೆ ಭಾರತ ಸರ್ಕಾರ ಮನವಿ ಮಾಡಿದೆ. ಆಫ್ಘನ್ ಭದ್ರತಾ ಪಡೆಗಳು ಮತ್ತು ತಾಲಿಬಾನ್ ಮಧ್ಯೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆ ಭಾರತ ಸರ್ಕಾರ ಈ ಸಲಹೆ ನೀಡಿದೆ. ತಾಲಿಬಾನ್ ಬಂಡುಕೋರರ ದೃಷ್ಟಿ ಅಫ್ಘಾನಿಸ್ತಾನದ ನಾಲ್ಕನೇ ಅತಿ ದೊಡ್ಡ ನಗರವಾದ ಮಝರ್ ಇ ಶರೀಫ್ ಮೇಲೆ ಬಿದ್ದಿರುವ ಬೆನ್ನಲ್ಲೇ ಭಾರತ ತನ್ನ ಪ್ರಜೆಗಳ ಸ್ಥಳಾಂತರಕ್ಕೆ ವಿಶೇಷ ವಿಮಾನದ ಏರ್ಪಾಡು ಮಾಡಿರುವುದು ಗಮನಾರ್ಹ. ಸೋಮವಾರವಷ್ಟೇ ತಾನು ಮಝರ್ ಇ ಶರೀಫ್ ನಗರವನ್ನು ವಶಪಡಿಸಿಕೊಳ್ಳಲು ಮುಂದಾಗುವುದಾಗಿ ತಾಲಿಬಾನ್ ಪ್ರಕಟಣೆ ಹೊರಡಿಸಿತ್ತು. ಆಫ್ಘನ್ ಸರ್ಕಾರದ ವಶದಲ್ಲಿರುವ ಪ್ರದೇಶಗಳಲ್ಲಿ ಮಝರ್ ಇ ಶರೀಫ್ ಪ್ರಮುಖವಾದುದೆಂದು ಹೇಳಲಾಗುತ್ತಿದೆ. ಹೀಗಾಗಿ ಸಹಜವಾಗಿ ತಾಲಿಬಾನ್ ವಕ್ರದೃಷ್ಟಿ ಅದರ ಮೇಲೆ ಬಿದ್ದಿದೆ. ಅದನ್ನು ವಶಪಡಿಸಿಕೊಂಡಲ್ಲಿ ಆಫ್ಹ್ಘನ್ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ ಎನ್ನುವುದು ತಾಲಿಬಾನ್ ಲೆಕ್ಕಾಚಾರ. ರಾಜಕೀಯ ಪರಿಣತರು ಕೂಡಾ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಇದೀಗ ಭಾರತೀಯರ ಸ್ಥಳಾಂತರಕ್ಕೆ ನಿಯೋಜಿಸಲಾಗಿರುವ ವಿಮಾನ ಮಝರ್ ಇ ಶರೀಫ್ ನಗರದಿಂದ ಇಂದು ಹೊರಡಲಿದೆ. ಈ ಬಗ್ಗೆ ಮಝರ್ ಇ ಶರೀಫ್ ನಗರದಲ್ಲಿನ ಭಾರತೀಯ ದೂತವಾಸ ಕಚೇರಿ ಟ್ವೀಟ್ ಮಾಡಿದ್ದು, ಅಲ್ಲಿಂದ ಹೊರಡಲಿಚ್ಛಿಸುವ ಭಾರತೀಯರು ಆದಷ್ಟು ಬೇಗನೆ ತಮ್ಮ ಹಾಗೂ ಕುಟುಂಬದ ವಿವರಗಳನ್ನು ನೀಡುವಂತೆ ಸೂಚಿಸಿದೆ.
ಬೆಂಗಳೂರಿನಲ್ಲಿ ರೂ. ೮೦ ಕೋಟಿ ಬೆಲೆಬಾಳುವ ೮೦ ಕೆ.ಜಿ. ಅಂಬರ್ಗ್ರಿಸ್ ವಶಕ್ಕೆ
ಬೆಂಗಳೂರು, ಆ. ೧೦: ಬೆಂಗಳೂರಿನ ಕೇಂದ್ರ ಕ್ರೈಮ್ ಬ್ರಾಂಚ್ (ಸಿಸಿಬಿ) ಪೊಲೀಸರು ೮೦ ಕೆ.ಜಿ.ಯಷ್ಟು ಅಂಬರ್ಗ್ರಿಸ್ನ್ನು ವಶಕ್ಕೆ ಪಡೆದಿದ್ದಾರೆ. ಐದು ಮಂದಿಯಿAದ ಅಂಬರ್ಗ್ರಿಸ್ನ್ನು ವಶಕ್ಕೆ ಪಡೆಯಲಾಗಿದ್ದು, ನಿಷೇಧಿತ ಅಂಬರ್ಗ್ರಿಸ್ನ್ನು ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಮುಜೀಬ್ ಪಾಶಾ (೪೮) ಮೊಹಮ್ಮದ್ ಅಲಿಯಾಸ್ ಮುನ್ನ (೪೫) ಗುಲಾಬ್ ಚಂದ್ ಅಲಿಯಾಸ್ ಗುಡ್ಡು (೪೦) ಹಾಗೂ ಸಂತೋಷ್ (೩೧) ಅವರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ರಾಯಚೂರಿನ ಜಗನ್ನಾಥಾಚಾರ್ (೫೨) ನ್ನೂ ಬಂಧಿಸಲಾಗಿದೆ. ಮಾಹಿತಿಯ ಆಧಾರದಲ್ಲಿ ಸಿಸಿಬಿ ಗೊಡೋನ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಅಂಬರ್ಗ್ರಿಸ್ನ್ನು ವಶಕ್ಕೆ ಪಡೆದಿದ್ದಾರೆ. ಭಾರತದಲ್ಲಿ ವನ್ಯಜೀವಿ ರಕ್ಷಣೆ ಕಾಯ್ದೆಯಡಿ ಅಂಬರ್ಗ್ರಿಸ್ನ ಮಾರಾಟ ಹಾಗೂ ದಾಸ್ತಾನನ್ನು ನಿಷೇಧಿಸಲಾಗಿದೆ.
ಮಕ್ಕಳ ಆಸ್ಪತ್ರೆ ತೆರೆಯಲು ಸೂಚನೆ
ಬೆಂಗಳೂರು, ಆ. ೧೦: ಶ್ರಾವಣ ಮಾಸ ಆರಂಭವಾಗಿದ್ದು, ಸಾಲುಸಾಲು ಹಬ್ಬಗಳು ಹಿಂದೂಗಳಿಗೆ ಎದುರಾಗಿರುವುದರಿಂದ ಮಕ್ಕಳನ್ನು ಕೋವಿಡ್ ೩ನೇ ಅಲೆಯಿಂದ ತಪ್ಪಿಸಲು ಬೆಂಗಳೂರಿನ ಪ್ರತಿವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆ ತೆರೆಯಲು ಸೂಚನೆ ನೀಡಿರುವುದಾಗಿ ಬೆಂಗಳೂರು ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಅಮೇರಿಕಾದಲ್ಲಿ ಕೋವಿಡ್ ೩ನೇ ಅಲೆಯಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಈ ಹಿನ್ನೆಲೆ ರಾಜ್ಯದಲ್ಲಿಯೂ ಅನೇಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆ ತೆರೆಯಲು ಸೂಚನೆ ನೀಡಿದ್ದೇನೆ. ಐದಾರು ದಿನಗಳಲ್ಲಿ ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಕೇರಳದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ. ಅದು ರಾಜ್ಯದಲ್ಲಿ ಕಾಣಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾ. ೧೫ ರ ನಂತರ ಬೆಂಗಳೂರಿನಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲಾಗುವುದು. ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ತಾತ್ಕಾಲಿಕವಾಗಿ ಬೆಡ್ಗಳನ್ನು ವಾಪಸ್ ನೀಡಲಾಗಿದೆ. ಅಗತ್ಯ ಬಿದ್ದರೆ ಬೆಡ್ಗಳನ್ನು ವಾಪಸ್ ಪಡೆಯುತ್ತೇವೆ. ನಮ್ಮ ಆದೇಶದಲ್ಲಿಯೇ ಅದನ್ನು ತಿಳಿಸಿದ್ದೇವೆ ಎಂದು ಅಶೋಕ್ ತಿಳಿಸಿದರು.
ಭಾರತೀಯ ವಿಮಾನಗಳಿಗೆ ಕೆನಡಾ ನಿಷೇಧ
ನವದೆಹಲಿ, ಆ. ೧೦: ಕೊರೊನಾ ಸೋಂಕು ಹಿನ್ನೆಲೆ ಭಾರತದಿಂದ ಬರುವ ವಿಮಾನಗಳನ್ನು ಮುಂದಿನ ಸೆಪ್ಟೆಂಬರ್ ಅಂತ್ಯದವರೆಗೆ ಕೆನಡಾ ಸರ್ಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ. ಕೋವಿಡ್ ಸೋಂಕು ದೇಶದಲ್ಲಿ ಮತ್ತಷ್ಟು ಹೆಚ್ಚಾಗಬಹುದು ಆತಂಕದಿAದಲೇ ಭಾರತದಿಂದ ಬರುವ ನೇರ ವಿಮಾನಗಳ ಸಂಚಾರವನ್ನು ಸರ್ಕಾರ ನಿಷೇಧಿಸಿದೆ. ಕೆನಡಾ ಸರ್ಕಾರದ ಆರೋಗ್ಯ ಇಲಾಖೆ ವರದಿ ಮತ್ತು ಮುನ್ಸೂಚನೆ ಹಿನ್ನೆಲೆ ಸರ್ಕಾರ ವಿಮಾನ ಸಂಚಾರಗಳ ಮೇಲೆ ನಿರ್ಬಂಧ ಹಾಕಿದೆ. ಕಳೆದ ಏಪ್ರಿಲ್ ೨೨ ರಂದು ಕೆನಡಾ ಸರ್ಕಾರ ಮೊದಲ ಬಾರಿಗೆ ಭಾರತೀಯ ವಿಮಾನಗಳು ದೇಶ ಪ್ರವೇಶ ಮಾಡದಂತೆ ನಿರ್ಬಂಧ ಹಾಕಿದ್ದು. ಈಗ ೫ನೇ ಬಾರಿಗೆ ಭಾರತೀಯ ವಿಮಾನಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಹೊಸ ಆದೇಶ ಸೆಪ್ಟೆಂಬರ್ ೨೧ ರವರೆಗೂ ಜಾರಿಯಲ್ಲಿದೆ ಎಂದು ಸರ್ಕಾರದ ವಕ್ತಾರರೊಬ್ಬರು ಸ್ಪಷ್ಟಪಡಿಸಿದ್ದಾರೆ. ಹಿಂದಿನ ಆದೇಶ ಆಗಸ್ಟ್ ೨೧ಕ್ಕೆ ಮುಕ್ತಾಯಗೊಂಡಿದ್ದರೂ ಅದನ್ನು ಒಂದು ತಿಂಗಳ ಮಟ್ಟಿಗೆ ವಿಸ್ತರಣೆ ಮಾಡಿ ಸರ್ಕಾರ ಹೊಸ ತೀರ್ಮಾನ ಕೈಗೊಂಡಿದೆ.