*ಸಿದ್ದಾಪುರ, ಆ. ೧೦ : ಹಲವು ಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿರುವ ಕೃಷಿಕ ವರ್ಗಕ್ಕೆ ಸೆಸ್ಕ್ ಶಾಕ್ ಕೊಟ್ಟಿದೆ. ವಾಲ್ನೂರು- ತ್ಯಾಗತ್ತೂರು ಭಾಗದ ಬೆಳೆಗಾರರು ಹಾಗೂ ರೈತರಿಗೆ ವಾರ್ಷಿಕ ವಿದ್ಯುತ್ ಬಿಲ್ ೫೦ ಸಾವಿರದಿಂದ ೩ ಲಕ್ಷ ರೂ.ಗಳ ವರೆಗೆ ನೀಡಲಾಗಿದೆ.

ಸರ್ಕಾರ ಕೃಷಿಕರಿಗೆ ಬೆಳೆ ಬೆಳೆಯಲು ಉಚಿತ ವಿದ್ಯುತ್ ನೀಡುತ್ತದೆ ಎನ್ನುವ ವಿಶ್ವಾಸ ದೊಂದಿಗೆ ಮೋಟಾರ್‌ಗಳನ್ನು ಅಳವಡಿಸಿಕೊಂಡವರು ಈಗ ಪಶ್ಚಾತ್ತಾಪ ಪಡುವ ಪರಿಸ್ಥಿತಿ ಬಂದೊದಗಿದೆ. ಸುತ್ತಮುತ್ತಲ ಬೆಳೆಗಾರರು ಹಾಗೂ ರೈತರು ವಿದ್ಯುತ್ ಬಿಲ್ ನೋಡಿ ಕಂಗಾಲಾಗಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಇಂದಿನ ಪರಿಸ್ಥಿತಿಯಲ್ಲಿ ಲಕ್ಷಾಂತರ ರೂ. ಬಿಲ್ ಪಾವತಿಸುವುದಾರೂ ಹೇಗೆ ಎಂದು ಕೃಷಿಕ ವರ್ಗ ಪ್ರಶ್ನಿಸುತ್ತಿದೆ. ದುಬಾರಿ ಬಿಲ್ ನೀಡಿರುವ ಸೆಸ್ಕ್ ಅಧಿಕಾರಿಗಳು ಸಿಬ್ಬಂದಿಗಳನ್ನು ಕಳುಹಿಸಿ ಹಣ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಒಂದೆಡೆ ಅತಿವೃಷ್ಟಿ, ವನ್ಯಜೀವಿಗಳ ಹಾವಳಿ, ಮತ್ತೊಂಡೆದೆ ಕೋವಿಡ್ ಸಂದಿಗ್ಧ ಪರಿಸ್ಥಿತಿ. ಇವುಗಳ ನಡುವೆ ಮೂಗಿಗೆ ತುಪ್ಪ ಸವರುವ ಉಚಿತ ಭಾಗ್ಯದ ಘೋಷಣೆಗಳು ಬೇರೆ. ಮುಗ್ಧ ಕೃಷಿಕ ಸರ್ಕಾರದಿಂದ ಉಚಿತ ವಿದ್ಯುತ್ ಲಭಿಸುವ ಕನಸು ಕಂಡು ಇದೀಗ ಬೇಸ್ತು ಬಿದ್ದಿದ್ದಾನೆ. ಲಕ್ಷಾಂತರ ರೂ. ವಿದ್ಯುತ್ ಬಿಲ್ ಪಾವತಿಸುವುದಾದರು ಹೇಗೆ, ಇಷ್ಟೊಂದು ಆದಾಯವೇ ಕೃಷಿಯಿಂದ ಬರುತ್ತಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದಾನೆ.

ತಕ್ಷಣ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಮಧ್ಯ ಪ್ರವೇಶ ಮಾಡಿ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.