ಕುಶಾಲನಗರ, ಆ. ೧೧: ಕುಶಾಲನಗರ-ಕೊಪ್ಪ ಗಡಿಭಾಗದ ಪುರಾತನ ಸೇತುವೆಯನ್ನು ನಿರ್ವಹಣೆ ಮಾಡುವುದರೊಂದಿಗೆ ಅಭಿವೃದ್ಧಿಗೊಳಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಕುಶಾಲನಗರ ಕಾವೇರಿ ರಕ್ಷಣಾ ಬಳಗ, ಪ್ರವಾಹ ಸಂತ್ರಸ್ತರ ವೇದಿಕೆ, ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡ ಸೇತುವೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ರಂಜನ್ ಸುಮಾರು ಎರಡು ಶತಮಾನ ಕಾಣುತ್ತಿರುವ ಬ್ರಿಟಿಷ್ ಕಾಲದ ಸೇತುವೆಯನ್ನು ಉಳಿಸುವ ಕೆಲಸವಾಗಬೇಕು. ಈ ಸಂಬAಧ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರ ಸೇವೆ ಶ್ಲಾಘನೀಯ ಎಂದರು.

ಸೇತುವೆ ಮೇಲೆ ಬೆಳೆದಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವ ಕಾರ್ಯ ನಡೆಯಿತು. ಪುರಾತನ ಸೇತುವೆಗೆ ನೂತನವಾಗಿ ಡಾಮರೀಕರಣ ನಡೆಸಿ ತಡೆಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ ನಡೆಸಿಕೊಡುವುದಾಗಿ ಪಿಆರ್‌ಸಿ ಸಂಸ್ಥೆಯ ಮಾಲೀಕರು ಹಾಗೂ ಗುತ್ತಿಗೆದಾರರಾದ ಪುರುಷೋತ್ತಮ ರೈ ಭರವಸೆ ನೀಡಿದರು. ಇದೇ ಸಂದರ್ಭ ಮಾತನಾಡಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್ ಪುರಾತನ ಸೇತುವೆ ಸ್ವಚ್ಛತಾ ಕಾರ್ಯಕ್ಕೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ನೂತನ ಸೇತುವೆ ಎರಡೂ ಭಾಗದಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಿಸುವ ಮೂಲಕ ನದಿಗೆ ತ್ಯಾಜ್ಯ ಎಸೆಯದಂತೆ ತಡೆಗಟ್ಟಲು ಸದ್ಯದಲ್ಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಈ ಸಂದರ್ಭ ವೇದಿಕೆಯ ಅಧ್ಯಕ್ಷ ಎಂ ಎನ್ ಚಂದ್ರಮೋಹನ್, ಉಪಾಧ್ಯಕ್ಷ ತೋರೆರ ಉದಯ್ ಕುಮಾರ್, ಕೊಡಗನ ಹರ್ಷ, ಕಡವಡೀರ ವಿವೇಕ್, ರಕ್ಷಣಾ ಬಳಗದ ಡಿ ಆರ್ ಸೋಮಶೇಖರ್, ಪಂಚಾಯಿತಿ ಪೌರ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.