ಮಡಿಕೇರಿ, ಆ. ೧೦: ಹುಳಿತಾಳದ ಬೊಟ್ಲಪ್ಪ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ತಾಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪನವರ ಹುಟ್ಟುಹಬ್ಬವನ್ನು ಸಂಘಟನೆಯು ಸುಮಾರು ಐವತ್ತು ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿ, ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆಗೊಂಡ ಹಿಂದುಳಿದ ವರ್ಗದ ಬಡ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪಾರಿತೋಷಕ ನೀಡುವ ಮೂಲಕ ಆಚರಿಸಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ದಿವಾಕರ್, ದೀಪಕ್ ಅವರು ರಕ್ತದಾನ ಮಾಡುವ ಮೂಲಕ ಯುವ ಜನತೆಗೆ ಮಾದರಿಯಾಗಿ ಹುಟ್ಟುಹಬ್ಬ ಆಚರಿಸಿದ್ದು, ಸಮಿತಿಯು ಅವರ ಹುಟ್ಟುಹಬ್ಬವನ್ನು ನಮ್ಮ ಸಮುದಾಯ ಜನತೆಯ ಕಷ್ಟದಲ್ಲಿ ಭಾಗಿಯಾಗುವ ಮೂಲಕ ಆಚರಿಸುವ ನಿಟ್ಟಿನಲ್ಲಿ ಆಹಾರ ಕಿಟ್ ವಿತರಿಸಿ, ಗ್ರಾಮದ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುತ್ತಿದೆ. ನಮ್ಮ ಸಂಘಟನೆಯ ಮುಖ್ಯ ಧ್ಯೇಯ ಶಿಕ್ಷಣವಾಗಿದ್ದು ವಿದ್ಯಾಭ್ಯಾಸವೊಂದೇ ನಮ್ಮ ಸಮುದಾಯವನ್ನು ಬಡತನದಿಂದ, ಅಸ್ಪೃಶ್ಯತೆಯಿಂದ ಪಾರು ಮಾಡಲು ಸಾಧ್ಯ ಎಂದರು.

ಅತಿಥಿಗಳಾಗಿ ಭಾಗವಹಿಸಿದ್ದ ಸಮಾಜ ಸೇವಕ ವಾಸು ಅವರು ದಲಿತ ಸಂಘರ್ಷ ಸಮಿತಿಯು ೨೦೧೮ರಿಂದ ಈಚೆಗೆ ಬಡಜನರ ಕಷ್ಟಕ್ಕೆ ಸ್ಪಂದಿಸುತ್ತಾ ಸಮಾಜಕ್ಕೆ ಮಾದರಿ ಯಾಗಿದ್ದು, ಈಗಾಗಲೇ ಸಾವಿರಾರು ಬಡಕುಟುಂಬಗಳಿಗೆ ಆಹಾರ ಕಿಟ್ ನೀಡಿ ಸಮಾಜದಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿದೆ. ದಿವಾಕರ್ ಹಾಗೂ ತಂಡ ಕಳೆದ ೩೫ವರ್ಷ ಗಳಿಂದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಗೌರವಿಸುತ್ತಿದ್ದು. ಬಡ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶಿಕ್ಷಣಕ್ಕೆ ನೆರವಾಗುವ ಕೆಲಸ ಮಾಡುತ್ತಾ ಬಂದಿದೆ ಎಂದು ಸಮಿತಿಯ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಯಮಿ ಸುರೇಶ್ ಬಿಳಿಗೇರಿ ಮಾತನಾಡಿ, ನಿಜವಾದ ದಲಿತರೆಂದರೆ ಶ್ರೀಮಂತಿಕೆಯಿದ್ದರೂ ಹೃದಯವಂತಿಕೆ ಇಲ್ಲದಂತಹವರು. ನಾವುಗಳು ದಲಿತರಲ್ಲ. ನಾವೆಲ್ಲ ದುಡಿದು ತಿನ್ನುವ ಸ್ವಾಭಿಮಾನಿ ಬಳಗ, ನಾನು ದಲಿತೇತರ ಹಿಂದುಳಿದ ವರ್ಗಕ್ಕೆ ಸೇರಿದವನು. ನಾವೆಲ್ಲರೂ ಒಂದಾಗಿ ಹೋರಾಡು ವವರೆಗೂ ಅಸ್ಪೃಶ್ಯತೆ ತೊಲಗದು. ಈ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ ನಿರಂತರ ಹೋರಾಟ ಮಾಡುತ್ತಿದ್ದು, ಕೊಡಗು ಜಿಲ್ಲಾ ಸಮಿತಿ ಸಮಾಜಮುಖಿ ಕೆಲಸಗಳಿಂದ ಮೆಚ್ಚುಗೆ ಕಾರ್ಯ ಮಾಡುತ್ತಿದೆ ಎಂದರು.

ಪತ್ರಕರ್ತ ರಂಜಿತ್ ಕವಲಪಾರ ಮಾತನಾಡಿ, ಸರ್ವಧರ್ಮ ಸಮನ್ವಯತೆಯನ್ನು ಪಾಲಿಸುತ್ತಿರುವ ಶ್ರೀ ಬೊಟ್ಲಪ್ಪ ಸಂಘದ ಕುರಿತು ಸಾಹಿತಿ ಬೀಚಿ ಅವರು ಮಡಿಕೇರಿಗೆ ಭೇಟಿ ನೀಡಿದ ಪ್ರಸಂಗವನ್ನು ಮುಂದಿಟ್ಟು ಕೊಂಡು ಅವರು ವಿಡಂಬನಾತ್ಮಕವಾಗಿ ಧರ್ಮಗಳ ಕುರಿತು ಅಂದು ಆಡಿದ ಮಾತುಗಳನ್ನು ಹೇಳುವ ಮೂಲಕ. ಬೊಟ್ಲಪ್ಪ ಸಂಘವು ಧರ್ಮ, ಜಾತಿ, ಮತ, ಪಂಥಗಳನ್ನು ಮೀರಿ ಕೆಲಸ ಮಾಡುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ತಾಲೂಕು ಘಟಕದ ಸಂಚಾಲಕ ದೀಪಕ್ ಪೊನ್ನಪ್ಪ ಮಾತನಾಡಿ, ಸಂಘಟನೆಯು ನನಗೆ ಬಡವರ ನಡುವೆ ಇದ್ದು ಅವರ ಕಷ್ಟ ಸುಖದಲ್ಲಿ ಭಾಗವಹಿಸಲು ಕಲಿಸಿದೆ. ಕಳೆದ ವರ್ಷದ ನನ್ನ ಹುಟ್ಟು ಹಬ್ಬವನ್ನು ಸಂಪಾಜೆ ಗ್ರಾಮದ ಪಿ.ಯು.ಸಿ.ಯಲ್ಲಿ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದ ಗೀತ ಅವರ ಮನೆಯಲ್ಲಿ ಅವಳ ಮುಂದಿನ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಆಚರಿಸಲಾಯಿತು.

ಈ ವರ್ಷ ಇಲ್ಲಿ ಆಚರಿಸಲಾಗು ತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ದೀಪಕ್ ಪೊನ್ನಪ್ಪ ಅವರಿಗೆ ಶುಭಾಶಯ ತಿಳಿಸಿ, ನೆರೆದಿದ್ದ ಸಾರ್ವಜನಿಕರಿಗೆ ವಿದ್ಯಾರ್ಥಿ ಗಳಿಗೆ ಸಿಹಿ ಹಂಚಿ, ವಿದ್ಯಾಭ್ಯಾಸದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಆಹಾರ ಕಿಟ್ ವಿತರಿಸಲಾಯಿತು. ಬೊಟ್ಲಪ್ಪ ಸಂಘದ ಸ್ಥಾಪಕಾಧ್ಯಕ್ಷ ಜೋಯಪ್ಪ, ಅಧ್ಯಕ್ಷ ಸುರೇಶ್, ಕೊಡಗು ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ವಿನು ಹೆಚ್.ಆರ್, ಪತ್ರಕರ್ತ ಚಂದನ್ ನಂದರಬೆಟ್ಟು ಹಾಗೂ ಪ್ರಮುಖರಿದ್ದರು.