ಸೋಮವಾರಪೇಟೆ, ಆ. ೯: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀದಳ್ಳಿ ಗ್ರಾಮದಿಂದ ಕೊತ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮೇಲೆ ಗುಡ್ಡ ಕುಸಿದಿರುವ ಪರಿಣಾಮ ಸಂಚಾರ ಬಂದ್ ಆಗಿದೆ.

ಬೀದಳ್ಳಿ ಊರೊಳಗಿನಿಂದ ಕೊತ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜಿ.ಪಂ.ಗೆ ಸೇರಿದ ರಸ್ತೆಯಲ್ಲಿ ಗುಡ್ಡಕುಸಿತ ಉಂಟಾಗಿದೆ. ಗ್ರಾಮದ ಕೆ.ಜೆ. ತಮ್ಮಯ್ಯ ಅವರ ತೋಟದ ಬಳಿಯಲ್ಲಿ ಸುಮಾರು ೩೦ ಅಡಿಗಳಷ್ಟು ದೂರಕ್ಕೆ ಗುಡ್ಡ ಕುಸಿದಿದ್ದು, ಭಾರೀ ಪ್ರಮಾಣದ ಮಣ್ಣು ರಸ್ತೆಯ ಮೇಲೆ ಬಿದ್ದಿದೆ.

ಕಳೆದ ಬಾರಿ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದಿಂದ ರೂ. ೧೦ ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸುವ ಮೂಲಕ ಈ ಭಾಗದ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿತ್ತು. ಇದೀಗ ಕಾಂಕ್ರಿಟ್ ರಸ್ತೆಯ ಮೇಲೆಯೇ ಭಾರೀ ಪ್ರಮಾಣದಲ್ಲಿ ಮಣ್ಣು ಶೇಖರಣೆಗೊಂಡಿದ್ದು, ಸಂಚಾರ ಬಂದ್ ಆಗಿದೆ.

ಕಳೆದ ವರ್ಷ ೧೦ ಅಡಿಗಳಷ್ಟು ಗುಡ್ಡ ಕುಸಿತವಾಗಿತ್ತು. ಈ ವರ್ಷದ ಮಳೆಗೆ ೩೦ ಅಡಿಗಳಷ್ಟು ಉದ್ದಕ್ಕೆ ಗುಡ್ಡ ಕುಸಿದಿದೆ. ಇದರಿಂದಾಗಿ ವಾಹನ ಹಾಗೂ ಜನ ಸಂಚಾರಕ್ಕೆ ತಡೆಬಿದ್ದಿದ್ದು, ಗ್ರಾಮಸ್ಥರು ಸಮಸ್ಯೆ ಎದುರಿಸುವಂತಾಗಿದೆ. ಬಳಸು ದಾರಿಯ ಮೂಲಕ ಕೃಷಿ ಉತ್ಪನ್ನ, ಅಗತ್ಯ ಸಾಮಗ್ರಿಗಳನ್ನು ತರುವಂತಾಗಿದೆ. ತೋಟ ಗದ್ದೆಗಳಿಗೆ ತೆರಳಲೂ ಅನಾನುಕೂಲವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಸAಪರ್ಕ ರಸ್ತೆಯ ಮೇಲೆ ಬಿದ್ದಿರುವ ಗುಡ್ಡದ ಮಣ್ಣನ್ನು ತಕ್ಷಣ ತೆರವುಗೊಳಿಸಲು ಜಿ.ಪಂ. ಇಂಜಿನಿಯರಿAಗ್ ವಿಭಾಗ ಕ್ರಮ ವಹಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.