ಸುಂಟಿಕೊಪ್ಪ, ಆ. ೯: ‘‘ವಸತಿ ರಹಿತರಿಗೆ ‘ಸೂರು’ ಕಲ್ಪಿಸಿಕೊಡಿ ಕೊರೊನಾ ಲಸಿಕೆ ಗ್ರಾಮಕ್ಕೆ ತರಿಸಿಕೊಡಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಿ, ಶಾಲೆಯ ರಸ್ತೆ ಸರಿಪಡಿಸಿ, ಮನೆ ನಿರ್ಮಿಸಿಕೊಂಡವ ರಿಗೆ ಹಕ್ಕುಪತ್ರ ನೀಡಿ’’ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ಪ್ರಥಮ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ ಗಳನ್ನು ಸಭೆಯ ಮುಂದಿಟ್ಟರು.
ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ನೂತನ ಆಡಳಿತ ಮಂಡಳಿಯ ೨೦೨೧ನೇ ಸಾಲಿನ ಪ್ರಥಮ ಗ್ರಾಮ ಸಭೆ ಕಾನ್ಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷ ಬಿ.ಜಿ.ರಮೇಶ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ಬಹಳಷ್ಟು ಸಮಸ್ಯೆಗಳನ್ನು ಗ್ರಾಮಸ್ಥರು ಸರಿಪಡಿಸುವಂತೆ ಕೋರಿದರು.
ಕೊರೊನಾದಿಂದ ಜನತೆ ನಲುಗಿ ಹೋಗಿದ್ದಾರೆ. ಗ್ರಾ. ಪಂ.ಯ ಮತದಾರರಿಗೆ ಮೊದಲ ಲಸಿಕೆಯೇ ಸಿಕ್ಕಿಲ್ಲ. ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಲಸಿಕೆ ಏನೇನೂ ಸಾಲುತ್ತಿಲ್ಲ. ನಾಕೂರು ಗ್ರಾಮ ಪಂಚಾಯಿತಿಗೆ ಆರೋಗ್ಯ ಇಲಾಖೆ ಯವರಿಂದ ಲಸಿಕೆ ಕಾರ್ಯಕ್ರಮ ನಡೆಸಿ ಎಂದು ಗ್ರಾಮಸ್ಥ ಕರುಣಾಕರ ಅವರು ಆಗ್ರಹಿಸಿದರು. ಹೆರೂರು ಗ್ರಾಮದಲ್ಲಿ ಮನೆ ನಿವೇಶನ ಸರಕಾರದಿಂದ ಮಂಜೂರಾಗಿದೆ. ಅದು ಪಲಾನುಭವಿಗಳಿಗೆ ಇನ್ನೂ ಸಿಕ್ಕಿಲ್ಲ. ಕೆಲವರು ಮನೆ ಹಕ್ಕು ಪತ್ರ ಪಡೆದು ಸಣ್ಣ ಜೋಪಡಿ ನಿರ್ಮಿಸಿ ಜೀವಿಸುತ್ತಿದ್ದಾರೆ. ೬೪ ಮಂದಿಗೆ ೩ ಸೆಂಟು ಜಾಗ ಮಂಜೂರಾಗಿದೆ. ಈ ಬಗ್ಗೆ ಪಂಚಾಯಿತಿಯವರು ಅವರಿಗೆ ‘ಸೂರು’ ಕೊಡಲು ದೃಢ ನಿರ್ಧಾರ ಕೈಗೊಳ್ಳಬೇಕು ಎಂದು ಅಂಬೆಕಲ್ ಚಂದ್ರಶೇಖರ, ಕರುಣಾ, ಡಿ.ರಾಮಯ್ಯ ಒತ್ತಾಯಿಸಿದರು.
ಗ್ರಾ.ಪಂ. ಉಪಾಧ್ಯಕ್ಷ ಬಿ.ಇ. ಸತೀಶ ಉತ್ತರಿಸಿ ತಾ. ಪಂ.ಕಾರ್ಯ ನಿರ್ವಹಣಾಧಿ ಕಾರಿಯವರಲ್ಲಿ ಈ ಬಗ್ಗೆ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ನಿಯೋಗ ತೆರಳಿ ವಿಷಯ ಪ್ರಸ್ತಾಪಿಸಿದ್ದು, ತಾ.ಪಂ.ನಿAದ ಅನುಮೋದನೆ ಪಡೆದ ನಂತರ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗು ವುದು ಎಂದು ಹೇಳಿದರು.
ಎಮ್ಮೆಗುಂಡಿ ಅಂಗನವಾಡಿ ಕೇಂದ್ರ ಮಳೆಯಿಂದ ಸೋರುತ್ತಿರುವು ದಾಗಿ ಅಂಗನವಾಡಿ ಕಾರ್ಯಕರ್ತೆ ಗಮನ ಸೆಳೆದರು. ನಾಕೂರಿನಲ್ಲಿ ರಸ್ತೆ ಬದಿ ಬೃಹದಾಕಾರದ ಮರ ಬೆಳೆದು ನಿಂತಿದ್ದು, ಅದನ್ನು ಅರಣ್ಯ ಇಲಾಖೆ ಕಡಿಯಬೇಕು, ಹೇರೂರಿನಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದ್ದು, ೩ ವರ್ಷ ಕಳೆದರೂ ಇನ್ನೂ ಚರಂಡಿ ನಿರ್ಮಾಣ ವಾಗಿಲ್ಲ ಮಳೆ ನೀರು ಮನೆಗೆ ನುಗ್ಗುತ್ತಿದೆ. ಹೇರೂರಿನಲ್ಲಿ ೬೦ ಪರಿಶಿಷ್ಟ ಪಂಗಡದವರಿಗೆ ಆಧಾರ್ ಗುರುತಿನಚೀಟಿ, ಪಡಿತರ ಚೀಟಿ ಮೂಲಭೂತ ಸೌಲಭ್ಯವೇ ಸಿಕ್ಕಿಲ್ಲ. ಮಾದಾಪುರದಲ್ಲಿ ಮನೆ ಕಳಕೊಂಡು ನಿರ್ಗತಿಕರಾದ ಕುಟುಂಬ ನಾಕೂರಿನಲ್ಲಿ ಬಂದು ನೆಲೆಸಿದೆ. ಅವರುಗಳ ಆಧಾರ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಕಳೆದುಹೋಗಿದೆ. ಅವರಿಗೆ ಸಹಾಯಹಸ್ತ ನೀಡಿ ಎಂದು ಗ್ರಾಮಸ್ಥರಾದ ನೀಲಮ್ಮ ಕರುಣಾಕರ, ಗ್ರಾ.ಪಂ. ಮಾಜಿ ಸದಸ್ಯರಾದ ಅಂಬೆಕಲ್ ಚಂದ್ರು, ಜನಾರ್ಧನ, ಸವಿತಾ, ಭವ್ಯ ಸಮಸ್ಯೆಗಳನ್ನು ವಿವರಿಸಿದರು.
ಅಧ್ಯಕ್ಷ ಬಿ.ಜಿ.ರಮೇಶ ಮಾತನಾಡಿ ನಾಕೂರು ಗ್ರಾ.ಪಂ.ಗೆ ಕೊರೊನಾ ಲಸಿಕೆ ಮುಂದಿನ ದಿನಗಳಲ್ಲಿ ತರಿಸಿಕೊಡಲಾಗುವುದು. ಪಂಚಾಯಿತಿ ಅನುದಾನದಿಂದ ಕುಡಿಯುವ ನೀರು, ರಸ್ತೆ ಕಾಮಗಾರಿ ವಸತಿ ರಹಿತರಿಗೆ ಮನೆ ನಿರ್ಮಿಸಿಕೊಡಲು ನೂತನ ಆಡಳಿತ ಮಂಡಳಿ ಬದ್ದವಾಗಿದೆ ಎಂದು ಸಭೆಗೆ ತಿಳಿಸಿದರು.
ನಾಕೂರು ಬೈಚನಹಳ್ಳಿಯಲ್ಲಿ ಬಡವರು ೫ ಮನೆಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.ಅವರಿಗೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರ ಇನ್ನೂ ಸಿಕ್ಕಿಲ್ಲ ಪಂಚಾಯಿತಿ, ಕಂದಾಯ ಇಲಾಖೆ ಅವರಿಗೆ ಸಹಾಯ ಹಸ್ತ ನೀಡಿ ಎಂದು ಗ್ರಾ.ಪಂ. ಮಾಜಿ ಸದಸ್ಯ ಚೋಮಣಿ ಆಗ್ರಹಿಸಿದರು.
ಅಧ್ಯಕ್ಷರು ಗ್ರಾ.ಪಂ. ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರಾದ ಎ.ಎಸ್. ದೀಪಿಕಾ ಅವರಲ್ಲಿ ಮಾಹಿತಿ ಬಯಸಿದಾಗ ಕಂದಾಯ ಇಲಾಖೆಯ ದಾಖಲೆಯಲ್ಲಿ ಆ ಜಾಗ ತೋಡು ಎಂದು ಬರುತ್ತಿದೆ. ಕಾನೂನು ಪ್ರಕಾರ ತೋಡಿಗೆ ಹಕ್ಕು ಪತ್ರ ನೀಡಲು ಬರುವುದಿಲ್ಲ ಎಂದು ಹೇಳಿದರು.
ಅಧ್ಯಕ್ಷ ರಮೇಶ, ಉಪಾಧ್ಯಕ್ಷ ಸತೀಶ ಅವರುಗಳು ಕಂದಾಯ ಇಲಾಖೆಯಲ್ಲಿನ ಮೂಲದಾಖಲಾತಿ ಬಗ್ಗೆ ಪರಿಶೀಲಿಸಲಾಗುವುದು. ಇಲ್ಲ್ಲಿ ತೋಡು ಇರಲಿಲ್ಲ ಎಂದೂ ಸಮಜಾಯಿಷಿಕೆ ನೀಡಿದರು. ಈ ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಸತೀಶ್, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೂಳಪ್ಪ ಕೂತಿನ, ಸದಸ್ಯರುಗಳಾದ ಕೊಳಂಬೆ ಸುಭಾಷ್, ಪ್ರೇಮಕೃಷ್ಣಪ್ಪ, ಸೀತೆ, ಅರುಣಕುಮಾರಿ, ಮುಂಡೋಡಿ ಜಗನ್ನಾಥ್, ರಾಧಾಮಣಿ, ಜಿ.ಪಂ.ಅಭಿಯAತರ ರಾದ ಫಯಾಜ್ ಅಹ್ಮದ್, ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಅಧಿಕಾರಿ ಮನಸ್ವಿ, ಆರೋಗ್ಯ, ಅರಣ್ಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.