ಪೊನ್ನಂಪೇಟೆ, ಆ. ೯: ಸಿ. ರಾಜ್ಯವಾಗಿದ್ದ ಕೊಡಗನ್ನು ೧೯೫೬ ರಲ್ಲಿ ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯ ವಿಂಗಡನೆ ಸಂದರ್ಭ ಈಗಿನ ಕರ್ನಾಟಕ ರಾಜ್ಯಕ್ಕೆ ವಿಲೀನಗೊಳಿಸಿದ ಸಂದರ್ಭ ಬಹಳಷ್ಟು ಆಸೆ ನಿರೀಕ್ಷೆಗಳು ಇದ್ದವು. ಆದರೆ, ಕೊಡಗು ಜಿಲ್ಲೆ ಇದೀಗ ನಾನಾ ಸಮಸ್ಯೆಗಳಿಂದ ಹದಗೆಡಲು ರಾಜಕೀಯ ಸ್ಥಾನಮಾನವನ್ನು ಜಿಲ್ಲೆಯ ಜನಪ್ರತಿನಿಧಿಗಳಿಗೆ ನೀಡದೆ ಕಡೆಗಣಿಸುತ್ತಿರುವದೇ ಮೂಲ ಕಾರಣ ಎಂದು ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಮತ್ತು ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಚೆಕ್ಕೇರ ಸನ್ನಿ ಸುಬ್ಬಯ್ಯ ಮತ್ತು ಪದಾಧಿಕಾರಿಗಳು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ನೂತನ ತಾಲೂಕು ಪತ್ರಕರ್ತರ ಸಂಘದ ಪ್ರಥಮ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲಿಯೇ ರಾಜ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕೊಡಗಿನ ಜ್ವಲಂತ ಸಮಸ್ಯೆಗಳು ಹಾಗೂ ಜಿಲ್ಲೆಗೆ ಸಚಿವ ಸ್ಥಾನ ಸಿಗದೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಕಟ್ಟಿಮಂದಯ್ಯ ಮಾತನಾಡಿ,೧ ೯೫೬ರವರೆಗೆ ಕೊಡಗು ಸಿ ರಾಜ್ಯವಾಗಿದ್ದು, ತನ್ನದೇ ಆದ ಮಂತ್ರಿ ಮಂಡಲವನ್ನು ಹೊಂದಿತ್ತು.

(ಮೊದಲ ಪುಟದಿಂದ) ದೇಶದಲ್ಲಿಯೇ ಮಾದರಿ ಜಿಲ್ಲೆಯಾಗಿರುವ ಕೊಡಗು ಗುಡ್ಡಗಾಡು ಪ್ರದೇಶದಿಂದ ಕೂಡಿದೆ. ಕೊಡಗು ಅಭಿವೃದ್ಧಿಯಲ್ಲಿ ಕುಂಠಿತಗೊಳ್ಳಲು ರಾಜಕೀಯವಾಗಿ,ಆರ್ಥಿಕವಾಗಿ, ಸಾಮಾಜಿಕವಾಗಿ ಯಾವದೇ ಸ್ಥಾನ ಮಾನ ಸ್ಥಳಿಯರಿಗೆ ಸಿಗದೆ ವಂಚಿತ ವಾಗಿರುವದೇ ಮುಖ್ಯ ಕಾರಣವಾಗಿದೆ ಎಂದರು.

ಮೂರು ವಿಧಾನಸಭಾ ಕ್ಷೇತ್ರವನ್ನು ೨ಕ್ಕೆ ಇಳಿಕೆ ಮತ್ತು ೨೦೨೦-೨೦೨೧ನೇ ಸಾಲಿನಲ್ಲಿ ಎರಡು ಹೊಸ ತಾಲೂಕನ್ನು ನೀಡಿದ್ದು ಒಟ್ಟು ೫ ತಾಲೂಕಿಗೆ ಹೆಚ್ಚಳವಾಗಿದೆ. ಆದರೆ, ಕೇವಲ ೨ ವಿಧಾನ ಸಭಾ ಸ್ಥಾನವನ್ನು ಜನಸಂಖ್ಯಾ ಆಧಾರದಲ್ಲಿ ನೀಡಿರುವುದು ಸರಿಯಲ್ಲ. ನಮಗೆ ವಿಶೇಷ ಸ್ಥಾನಮಾನ ಮೂಲಕ ಕನಿಷ್ಟ ಮೂರು ವಿಧಾನ ಸಭಾ ಸ್ಥಾನ ಹಾಗೂ ಉಸ್ತುವಾರಿ ಸಚಿವರು, ಮಂತ್ರಿ ಸ್ಥಾನವನ್ನು ಕೊಡಗು ಜಿಲ್ಲೆಯಿಂದ ಆಯ್ಕೆಗೊಂಡಿರುವ ಜನಪ್ರತಿನಿಧಿಗಳಿಗೇ ನೀಡುವ ಮೂಲಕ ತಾರತಮ್ಯ ಧೋರಣೆಯನ್ನು ಸರ್ಕಾರ ನಿಲ್ಲಿಸ ಬೇಕು ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಮೂರು ಮಂತ್ರಿ ಸ್ಥಾನವನ್ನು ಕೊಡಗು ಜಿಲ್ಲೆಗೆ ನೀಡಲಾಗಿತ್ತು. ಇದೀಗ ಇಬ್ಬರು ಶಾಸಕರು ನಿರಂತರ ಬಿಜೆಪಿ ಪಕ್ಷದ ಮೂಲಕ ೪-೫ ಬಾರಿ ಆಯ್ಕೆ ಯಾಗಿದ್ದರೂ ಮಂತ್ರಿ ಸ್ಥಾನ ನೀಡದಿರುವದು ಅಕ್ಷಮ್ಯ. ಕೊಡಗಿನಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ಆದಾಯವಿದ್ದು ಮುಂದೆ ನಿರ್ಲಕ್ಷ÷್ಯ ತಾಳಿದ್ದಲ್ಲಿ ಹೋರಾಟದ ಹಾದಿ ತುಳಿಯಬೇಕಾದೀತು ಎಂದು ಕಟ್ಟಿಮಂದಯ್ಯ ತಿಳಿಸಿದ್ದಾರೆ.

ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆ ಕಾರ್ಯಾಧಕ್ಷ ಕಾಳಿಮಾಡ ಮೋಟಯ್ಯ ಅವರು ಮಾತನಾಡಿ, ಕೊಡಗಿಗೆ ಸಚಿವ ಸ್ಥಾನದಲ್ಲಾಗಿರುವ ಅನ್ಯಾಯದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ಹಾಗೂ ರಾಜ್ಯಪಾಲರಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟಿçÃಯ ಭಾಜಪಾ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ ಅವರಿಗೂ ಮನವಿ ಪತ್ರವನ್ನು ಕಳುಹಿಸಲಾಗುವದು ಎಂದು ಹೇಳಿದರು.

ಇತ್ತೀಚೆಗಿನ ವರ್ಷಗಳಲ್ಲಿ ಕೊಡಗು ಜಿಲ್ಲೆ ಅತಿವೃಷ್ಠಿ ಮತ್ತು ವನ್ಯಜೀವಿಗಳ ಉಪಟಳದಿಂದಾಗಿ ಆರ್ಥಿಕ ಬೆಳೆಗಳಾದ ಕಾಫಿ, ಕಾಳುಮೆಣಸು, ಏಲಕ್ಕಿ ಉತ್ಪಾದನೆ ಕುಂಠಿತಗೊಳ್ಳುತ್ತಿದೆ. ಅಡಿಕೆ, ಬಾಳೆ, ತೆಂಗು ಫಸಲುಗಳು ಕಾಡಾನೆ ಪಾಲಾಗುತ್ತಿದ್ದು, ಆನೆ ಮತ್ತು ವ್ಯಾಘ್ರಗಳಿಂದ ಮಾನವ ಹಾನಿ ಹಾಗೂ ಸಾಕುಪ್ರಾಣಿಗಳ ಬೇಟೆ ನಡೆಯುತ್ತಿದೆ. ಕೃಷಿಕರು, ರೈತಾಪಿ ವರ್ಗ, ಕೂಲಿ ಕಾರ್ಮಿಕ ವರ್ಗ ತೀವೃ ಸಂಕಷ್ಟಕ್ಕೆ ಒಳಗಾಗಿದ್ದು ಸರ್ಕಾರದ ಸ್ಪಂದನೆ ಸಾಲದು ಹಾಗೂ ಕೊಡಗಿನ ಹೊರಜಿಲ್ಲೆಯ ಉಸ್ತುವಾರಿ ಸಚಿವರು ನಮಗೆ ಬೇಕಾಗಿಲ್ಲ. ಸ್ಥಳೀಯ ಸಮಸ್ಯೆಗಳು, ಜನಜೀವನವನ್ನು ಅರಿತಿರುವ ಇಲ್ಲಿನ ಶಾಸಕರುಗಳನ್ನೇ ಮಂತ್ರಿಯಾಗಿ ಮಾಡುವಂತೆ ಒತ್ತಾಯಿಸಿದರು.

ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಬಾಚರಣಿಯಂಡ ಎಸ್.ಕಾರ್ಯಪ್ಪ ಮಾತನಾಡಿ, ಸರ್ಕಾರವು ನಮ್ಮ ಮನವಿಯನ್ನು ಕಡೆಗಣಿಸಿದ್ದೇ ಆದಲ್ಲಿ, ಮುಂದಿನ ದಿನಗಳಲ್ಲಿ ಕೊಡಗಿನ ಎಲ್ಲ ಸಂಘಟನೆಗಳನ್ನು ಒಗ್ಗೂಡಿಸಿ, ಕೊಡಗು ಸಿ ರಾಜ್ಯ ಕಲ್ಪನೆಯೊಂದಿಗೆ ಕೊಡಗಿಗೆ ವಿಶೇಷ ಸ್ಥಾನ ಮಾನ ನೀಡುವ ಕುರಿತು ಬೃಹತ್ ಹೋರಾಟ ನಡೆಸಲಾಗುವದು ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ವೀರಾಜಪೇಟೆ ತಾಲೂಕು ಪ್ರಗತಿಪರ ನಾಗರಿಕ ವೇದಿಕೆಯ ಅಧ್ಯಕ್ಷ ಮಳವಂಡ ಅರವಿಂದ ಕುಟ್ಟಪ್ಪ, ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಚೆಕ್ಕೇರ ಸನ್ನಿ ಸುಬ್ಬಯ್ಯ, ಕಾರ್ಯದರ್ಶಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ, ಸಲಹೆಗಾರ ಚೊಟ್ಟೆಯಂಡಮಾಡ ವಿಶ್ವನಾಥ್ ಮಾತನಾಡಿದರು.

ಅರುಣ್‌ಶೆಟ್ಟಿ ಆಗ್ರಹ

ಕೊಡಗಿನ ಶಾಸಕರುಗಳಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡ ಬೇಕೆಂದು ಮಡಿಕೇರಿ ನಗರಸಭಾ ಸದಸ್ಯ ಅರುಣ್‌ಶೆಟ್ಟಿ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ೪-೫ ಬಾರಿ ಬಿಜೆಪಿಯಿಂದ ಶಾಸಕರುಗಳಾಗಿ ಆಯ್ಕೆಯಾಗಿರುವ ಶಾಸಕರುಗಳಿಗೆ ಹಿರಿತನದ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.