*ಗೋಣಿಕೊಪ್ಪ, ಆ. ೯: ತಾಲೂಕಿನ ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಧಾರ್ ಕೇಂದ್ರಗಳಲ್ಲಿ ಅಸ್ಸಾಂ ಮತ್ತು ರೋಹಿಂಗ್ಯಾ ವಲಸಿಗ ಕಾರ್ಮಿಕರಿಗೆ ಆಧಾರ್ ಕಾರ್ಡ್ ಹೊಂದಿಸಿಕೊಳ್ಳಲು ಸುಲಭ ಮಾರ್ಗವನ್ನು ನೀಡುತ್ತಿರುವುದನ್ನು ತಡೆಹಿಡಿಯಲು ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಸೂಚಿಸಿದರು.

ಪೊನ್ನಂಪೇಟೆ ಶಾಸಕರ ಕಚೇರಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್ ಹಾಗೂ ಇತರ ಪ್ರಮುಖರು ನೀಡಿದ ದೂರನ್ನು ಪರಿಗಣಿಸಿದ ಶಾಸಕರು ದೂರವಾಣಿ ಕರೆ ಮಾಡುವ ಮೂಲಕ ಆಧಾರ್‌ಕಾರ್ಡ್ಗಳನ್ನು ಅಸ್ಸಾಂ ಮತ್ತು ರೋಹಿಂಗ್ಯಾ ಕಾರ್ಮಿಕರಿಗೆ ನೀಡುವ ಸಂದರ್ಭ ಮೂಲ ದಾಖಲಾತಿಯನ್ನು ಪರಿಶೀಲನೆ ಮಾಡುವಂತೆ ತಿಳಿಸಿದರು.

ಜಿಲ್ಲೆಗೆ ಕಾರ್ಮಿಕರ ಸೋಗಿನಲ್ಲಿ ಅಸ್ಸಾಂ ಮತ್ತು ರೋಹಿಂಗ್ಯಾ ವಲಸಿಗರು ಬಹುತೇಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಬಗ್ಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಈ ಬಗ್ಗೆ ನಿರ್ಧಾಕ್ಷಿಣ್ಯ ಮನೋಭಾವವನ್ನು ಹೊಂದಿರಬೇಕು ಎಂದು ತಿಳಿಸಿದರು.

ತೋಟದ ಮಾಲೀಕರು ಆದಷ್ಟು ಸ್ಥಳೀಯ ಕಾರ್ಮಿಕರನ್ನೇ ಕೆಲಸಕ್ಕೆ ನಿಯೋಜಿಸಿಕೊಳ್ಳುವುದರಿಂದ ಅಸ್ಸಾಂ ಕಾರ್ಮಿಕರು ಕೊಡಗಿಗೆ ಬರುವುದನ್ನು ತಡೆಹಿಡಿಯಬಹುದಾಗಿದೆ ಎಂದು ಈ ಸಂದರ್ಭ ಹೇಳಿದರು.

ತಾಲೂಕು ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷ ಕಾಡ್ಯಮಾಡ ಗಿರೀಶ್‌ಗಣಪತಿ, ರಾಜ್ಯ ಕೃಷಿ ಮೋರ್ಚಾ ಕೊಡಗು ಉಸ್ತುವಾರಿ ಮಾಪಂಗಡ ಯಮುನಾಚಂಗಪ್ಪ, ಆರ್.ಎಂ.ಸಿ. ನಿರ್ದೇಶಕ ಆದೇಂಗಡ ವಿನುಚಂಗಪ್ಪ ಉಪಸ್ಥಿತರಿದ್ದರು.