ಶನಿವಾರಸಂತೆ, ಆ. ೯: ಸಮೀಪದ ಕೊಡ್ಲಿಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಿಗ್ಮಿ ಠೇವಣಿ ಸಂಗ್ರಹಕಾರ ಕೆರಗನಹಳ್ಳಿಯ ಕೆ.ಎಲ್. ಲೋಕೇಶ್ ಮೇಲೆ ಹಲ್ಲೆ ಮಾಡಿ, ಸಂಗ್ರಹಿಸಿದ್ದ ಪಿಗ್ಮಿ ಹಣ ಮತ್ತು ಯಂತ್ರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.
ಕೆ.ಎಲ್. ಲೋಕೇಶ್ ಹಣ ಸಂಗ್ರಹಿಸುವ ಸಂದರ್ಭ ಹಲ್ಲೆ ನಡೆದಿದ್ದು, ಅದೇ ಗ್ರಾಮದ ರಮೇಶ್, ಕೂಡ್ಲೂರು ಪ್ರಸಾದ್ ಹಾಗೂ ಪಾಲಾಕ್ಷ ಆರೋಪಿಗಳಾಗಿದ್ದಾರೆ. ತಮಗೆ ಕೊಡಬೇಕಾಗಿರುವ ಸಾವಿರ ರೂಪಾಯಿ ಹಣ ಕೊಡುವಂತೆ ಅವರು ಕೇಳಿದಾಗ, ಲೋಕೇಶ್ ತಾವು ಕೊಟ್ಟಿರುವುದಾಗಿ ಹೇಳಿದ್ದು, ಆರೋಪಿಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿ ಪರಾರಿಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಶನಿವಾರಸಂತೆ ಮುಖ್ಯಪೇದೆ ಎಚ್.ಬಿ. ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ (ಕಲಂ ೩೪೧, ೫೦೪, ೩೨೩, ೫೦೬ ಐಪಿಸಿ) ಪ್ರಕರಣ ದಾಖಲಿಸಿರುತ್ತಾರೆ.