*ಗೋಣಿಕೊಪ್ಪ, ಆ. ೯ : ನಿರಂತರ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಸಚಿವ ಸ್ಥಾನವನ್ನು ನೀಡಬೇಕು. ಈ ಮೂಲಕ ಭಾರತೀಯ ಜನತಾ ಪಕ್ಷ ಕೊಡಗಿನ ಋಣ ತೀರಿಸಬೇಕಿದೆ ಎಂದು ಪೊನ್ನಂಪೇಟೆ ಶಕ್ತಿ ಕೇಂದ್ರದ ಪ್ರಮುಖ್ ಮೂಕಳೇರ ಮಧು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೊಡಗಿಗೆ ನಿರಂತರ ಮಂತ್ರಿ ಸ್ಥಾನ ಕೈತಪ್ಪುತಿದ್ದು, ಕೊಡಗಿನವರಿಗೆ ಪ್ರತಿ ಬಾರಿಯೂ ಅನ್ಯಾಯವಾಗುತ್ತಿದೆ, ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ನಿರಂತರ ಭೂಕುಸಿತ ಹಾಗೂ ಇದೀಗ ಕೊರೊನಾ ಸಂಕಷ್ಟ ಸೇರಿದಂತೆ ವನ್ಯಮೃಗಗಳ ಹಾವಳಿಯಿಂದ ಇಲ್ಲಿನ ಜನರು ಕಂಗೆಟ್ಟಿದ್ದಾರೆ. ಇಲ್ಲಿನ ಸಮಸ್ಯೆ ಗಳನ್ನು ಬಗೆಹರಿಸಲು ಸಚಿವ ಸ್ಥಾನವನ್ನು ಶಾಸಕರಿಗೆ ನೀಡುವುದರ ಮೂಲಕ ಮಾತ್ರ ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗೆ ಇಬ್ಬರು ಶಾಸಕರು, ಒಬ್ಬರು ಸಂಸದರು, ಮತ್ತೊಬ್ಬರು ವಿಧಾನ ಪರಿಷತ್ ಸದಸ್ಯರನ್ನು ಭಾರತೀಯ ಜನತಾ ಪಕ್ಷಕ್ಕೆ ಕೊಡುಗೆಯಾಗಿ ನೀಡಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಬಹುತೇಕ ಗ್ರಾಮ ಪಂಚಾಯತ್'ಗಳು ಬಿಜೆಪಿ ಆಡಳಿತ ನಡೆಸುತ್ತಿದೆ. ಆದರೂ, ಸಚಿವ ಸ್ಥಾನವನ್ನು ನೀಡಲು ನಿರಾಕರಣೆಯ ಧೋರಣೆ ತೋರುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.