ಪೆರಾಜೆಯ ಜ್ಯೋತಿ ಪ್ರೌಢಶಾಲೆಯಲ್ಲಿ ೩೩ ವರ್ಷಗಳ ಕಾಲ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಬೇಬಿ ವೇಣುಗೋಪಾಲ್ ಅವರು ತಾವು ಕಲಿಸಿದ ಶಾಲೆಗೆ ಪ್ರತಿವರ್ಷ ಹತ್ತು ಸಾವಿರ ರೂಪಾಯಿಗಳ ದೇಣಿಗೆಯನ್ನು ನೀಡುವ ವಾಗ್ದಾನ ಮಾಡಿದ್ದು, ಮೊದಲ ಕಂತನ್ನು ಈಗಾಗಲೇ ನೀಡಿದ್ದಾರೆಂದು ಗೊತ್ತಾಗಿದೆ.
ತಾನು ಬೋಧಿಸಿದ ಶಾಲೆಯು ಆರ್ಥಿಕತೆಯಲ್ಲಿ ತೀರಾ ಹಿಂದುಳಿದಿದ್ದು, ಅಲ್ಲದೆ ೧೯೯೩ರಲ್ಲಿ ಅನುದಾನಕ್ಕೆ ಒಳಪಟ್ಟ ಎಲ್ಲ ಶಿಕ್ಷಕ ವೃಂದದವರು ನಿವೃತ್ತಿಯ ಅಂಚಿನಲ್ಲಿರುವುದನ್ನು ಮನಗಂಡು, ನಿವೃತ್ತಿಯ ಸಂದರ್ಭದಲ್ಲಿ ಶಾಲೆಯಮೇಲಿನ ಪ್ರೀತಿ ಅಭಿಮಾನ ಹಾಗೂ ೩೩ ವರ್ಷಗಳ ಕಾಲ ತನಗೆ ಅನ್ನಕೊಟ್ಟ ಸಂಸ್ಥೆ ಹಾಗೂ ಊರ ಜನತೆಯನ್ನು ನೆನಪಿಸಿಕೊಳ್ಳುತ್ತಾ ಈ ಸಂಸ್ಥೆ ಉಳಿಯಬೇಕು ಹಾಗೂ ಊರ ಶಾಲೆ ಊರವರ ಕೈಯ್ಯಲ್ಲಿ ಇರಬೇಕು ಎಂಬ ಹಿತದೃಷ್ಟಿಯಿಂದ ಬೇಬಿ ವೇಣುಗೋಪಾಲ ಅವರು ಈ ಕೊಡುಗೆ ನೀಡಿದ್ದಾರೆ. ತಾವು ಘೋಷಿಸಿ ರುವ ದೇಣಿಗೆಯನ್ನು ಪ್ರತಿ ವರ್ಷವೂ ನೀಡುತ್ತೇನೆಂದು ಶಾಲಾ ಆಡಳಿತ ಮಂಡಳಿಗೆ ತಿಳಿಸಿರುತ್ತಾರೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೇಟೆ ಪಟ್ಟಣದ ಶಾಲೆ ವಿದ್ಯಾರ್ಥಿಗಳಂತೆ ಗ್ರಾಮಾಂತರ ಶಾಲಾ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಶಿಕ್ಷಕಿ ಈ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಈ ವರ್ಷದ ಹಣವನ್ನು ಶಾಲಾ ಮುಖ್ಯ ಶಿಕ್ಷಕರಾದ ವೇಣುಗೋಪಾಲ್ ಕೊಯಿಂಗಾಜೆರವರು ಆಡಳಿತ ಮಂಡಳಿಗೆ ನೀಡಿದರು.
ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷರಾದ ಎನ್.ಎ. ಜ್ಞಾನೇಶ್ ಸಂಚಾಲಕರಾದ ಹರಿಶ್ಚಂದ್ರ ಮುಡ್ಕಜೆ, ಲೋಕನಾಥ್ ಅಮೆಚೂರ್, ಶಾಲಾ ಸ್ಥಾಪಕರಾದ ಪೂವಪ್ಪ ಮಾಸ್ಟರ್ ದೊಡ್ಡಡ್ಕ ಉಪಸ್ಥಿತರಿದ್ದರು.
ಶ್ರೀಮತಿ ಬೇಬಿ ವೇಣುಗೋಪಾಲ ಅವರು ಮೇ೩೧ , ೧೯೮೮ರಲ್ಲಿ ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ಶಿಕ್ಷಕಿ ವೃತ್ತಿಗೆ ಸೇರ್ಪಡೆಗೊಂಡು ಸತತ ೩೩ವರ್ಷಗಳಿಂದ ಸೇವೆ ಸಲ್ಲಿಸಿರುತ್ತಾರೆ. ಮೂರುವರೆ ವರ್ಷ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿದರು. ಕಳೆದ ಎರಡು ವರುಷಗಳಿಂದ ಸಮಾಜ ವಿಜ್ಞಾನ ಪಾಠದ ಜೊತೆಗೆ ಪ್ರತಿ ತರಗತಿಗೆ ಆಂಗ್ಲ ಭಾಷೆಯನ್ನು ಸಹ ಬೋಧಿಸುತ್ತಿದ್ದರು. ಇವರು ಕೇರ್ಪಳ ಶೇಷಪ್ಪ ಗೌಡ ಮತ್ತು ಶ್ರೀಮತಿ ಗೌರಮ್ಮ ದಂಪತಿಗಳ ಪುತ್ರಿ. ಇವರು ಪ್ರಾಥಮಿಕ ಶಿಕ್ಷಣವನ್ನು ಸುಳ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ. ಪಿ.ಯು.ಸಿ ವ್ಯಾಸಂಗ ಮಾಡಿದ್ದು, ಪದವಿಯನ್ನು ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಪಡೆದಿರುತ್ತಾರೆ.
ಮಂಗಳೂರಿನ ಕೋಣಾಜೆ ಯೂನಿವರ್ಸಿಟಿಯಲ್ಲಿ ಎಂ.ಎ , ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ವ್ಯಾಸಂಗ ಪೂರೈಸಿರುತ್ತಾರೆ. ಇವರ ಪತಿ ವೇಣುಗೋಪಾಲ ಕೊಯಿಂಗಾಜೆಯವರು ಪ್ರಸ್ತುತ ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ.
-ಕಿರಣ್ ಕುಂಬಳಚೇರಿ.