ವನ್ಯಮೃಗಗಳು ಒಂದು ಸೀಮಿತ ಪರಿಧಿಯೊಳಗೆ ಮಾತ್ರ ಜೀವಿಸಬೇಕು. ಅವುಗಳ ವ್ಯಾಪ್ತಿಯನ್ನು ದಾಟಿ ಹೊರ ಬಂದರೆ ಅವುಗಳನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಕೆಟ್ಟ ಮನಸ್ಥಿತಿಯ ಹಂತಕರಿಗೆ ಅರಣ್ಯ ಇಲಾಖೆ ವನ್ಯಜೀವಿಗಳ ಸಂರಕ್ಷಣ ಕಾಯಿದೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಠಿಣ ಶಿಕ್ಷೆ ವಿಧಿಸುವಂತಾಗಬೇಕು.
ಇತ್ತೀಚೆಗೆ ಬಸವನಹಳ್ಳಿ ಬಳಿಯ ಹೊಸಕಾಡು ಕೃಷಿ ಪ್ರದೇಶದಲ್ಲಿ ವಿದ್ಯುತ್ ತಗುಲಿ ಕಾಡಾನೆಯೊಂದು ಮೃತಪಟ್ಟಿದ್ದು ನೋಡುಗರ ಕಣ್ಣುಗಳನ್ನು ತೇವ ಮಾಡಿತ್ತು.
ದೈತ್ಯಾಕಾರದ ಗಂಡಾನೆಯೊAದು ಕಾಡಿನಲ್ಲಿ ತನಗೆ ಬೇಕಾದ ಆಹಾರ ಸೊಪ್ಪು - ಸದೆಗಳು ಸಿಗದೇ ಕಾಡಿನಿಂದ ನಾಡಿಗೆ ಬಂದ ಕಾಡಾನೆ ಹೊಸಕಾಡಿನ ಕೃಷಿ ಪ್ರದೇಶದಲ್ಲಿ ಅಡ್ಡಾಡುವಾಗ ಅದಕ್ಕೆ ಯಾವುದೇ ಹಸಿರು ಆಹಾರ ಸಿಗದಿರುವಾಗ ಎದುರು ಸಿಕ್ಕ ಅಡಿಕೆ ತೋಟಕ್ಕೆ ಧಾವಿಸುತ್ತಿದ್ದ ಸಂದರ್ಭ ತೋಟ ಮಾಲೀಕನೋರ್ವ ಕಾಡಾನೆಗಳಿಂದ ತನ್ನ ಬೆಳೆ ರಕ್ಷಿಸಿಕೊಳ್ಳಲು ತನ್ನ ಜಮೀನಿನ ಸುತ್ತಾ ಅಳವಡಿತ ಸೋಲಾರ್ ಬೇಲಿಗೆ ಅನಧಿಕೃತವಾಗಿ ವಿದ್ಯುತ್ತನ್ನು ಹರಿಸಿ ಕಾಡಾನೆಯನ್ನು ಸಾಯಿಸಿದ್ದು ಮಾತ್ರ ಘನ ಘೋರವಾದ ಶಿಕ್ಷಾರ್ಹ ಅಪರಾಧ.
ಆಹಾರ ಅರಸಿ ಬಂದ ಈ ಸಲಗ ಮೊದಲೇ ಮದವೇರಿ ಸಂಗಾತಿಯ ಸಾಂಗತ್ಯಕ್ಕೆ ಹಪಹಪಿಸುತ್ತಾ ಅಲೆದಾಡುತ್ತಿದ್ದಾಗ ವಿದ್ಯುತ್ ಉರುಳಿಗೆ ಬಲಿಯಾದ ಪ್ರಕರಣವನ್ನು ಅರಣ್ಯ ಹಾಗೂ ಚೆಸ್ಕಾಂ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕಿದೆ.
ಕಾಡುಗಳು ಸಮೃದ್ಧವಾಗಿದ್ದಾಗ...
ಕಾಡಾನೆಗಳ ಹಾವಳಿ ಇಲ್ಲದಿದ್ದ ಅವಧಿಯಲ್ಲಿ ಆಕಸ್ಮಿಕವಾಗಿ ಕಾಡಾನೆಯೊಂದು ಕೃಷಿಕನ ಹೊಲ ಗದ್ದೆ ತೋಟಕ್ಕೆ ಬಂದರೆ ಖುಷಿಪಡುತ್ತಿದ್ದ ಕೃಷಿಕ ಆ ಆನೆಯ ಹೆಜ್ಜೆ ಗುರುತುಗಳಿಗೆ ಪೂಜೆ ಸಲ್ಲಿಸುತ್ತಿದ್ದ ಕಾಲವೊಂದಿತ್ತು. ಅಂದು ಆನೆ ಬಂದಲ್ಲಿ ಸಾಕ್ಷಾತ್ ಗಜಮುಖನೇ ತನ್ನ ಆಸ್ಥಾನಕ್ಕೆ ಬಂದನೆAಬ ದೈವಿಕ ಭಾವನೆ ಒಡ ಮೂಡುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ. ನಾಡಿನಲ್ಲಿ ಜನಸಂಖ್ಯೆ ಹೆಚ್ಚಳಗೊಂಡು ಜನವಸತಿ ಅರಣ್ಯದತ್ತ ದಾಪುಗಾಲಿಟ್ಟಿದೆ. ಆದರೆ ಅರಣ್ಯದಲ್ಲಿನ ಮುಗ್ಧ ವನ್ಯ ಜೀವಿಗಳು ಮಾತ್ರ ಜನವಸತಿ ಅಥವ ಕೃಷಿ ಪ್ರದೇಶಗಳತ್ತ ಧಾವಿಸಬಾರದು. ಹೇಗಿದೆ ನೋಡಿ ನಮ್ಮಗಳ ವರ್ತನೆ.
ಈ ಭೂಮಿಯ ಮೇಲೆ ಪ್ರತೀ ಜೀವಿಗಳಿಗೂ ಜೀವಿಸುವ ಹಕ್ಕಿದೆ ವಿನಃ ಯಾರನ್ನೂ ಯಾರೂ ಕೂಡ ಕೊಲ್ಲುವ ಹಕ್ಕಿಲ್ಲ. ಮಿತಿ ಮೀರಿದ ಜನಸಂಖ್ಯೆ ಹಾಗೂ ವಾಹನಗಳ ದಟ್ಟಣೆಯ ನಡುವೆ ವನ್ಯಜೀವಿಗಳನ್ನು ಕೂಡ ಬದುಕಿನ ಭಾಗವಾಗಿ ನಾವು ತೆಗೆದುಕೊಳ್ಳಬೇಕೇ ಹೊರತು ಅವುಗಳನ್ನು ಕೊಲ್ಲುವ ವಿಕೃತ ಭಾವನೆ ಯಾರಲ್ಲೂ ಇರಬಾರದು.
ಕಾಡುಗಳಲ್ಲಿ ಹಲಸು, ಬಾಳೆ, ಬಿದಿರು ಮೊದಲಾದ ಗಿಡ ಮರಗಳನ್ನು ನೆಟ್ಟು ಬೆಳೆಸಿ ಮರಗಳಾಗಿಸಿದಲ್ಲಿ ಕಾಡಾನೆಗಳಿಗೆ ಒಂದಿಷ್ಟು ಆಹಾರ ಪೂರೈಸಬಹುದಾಗಿದೆ.
ಅರಣ್ಯ ಇಲಾಖೆ ಹಾಗೂ ಕೆಲವು ಸಂಘ ಸಂಸ್ಥೆಗಳು ಪ್ರತೀ ವರ್ಷವೂ ಕಾಡಿನಲ್ಲಿ ಬೀಜ ಬಿತ್ತುವ, ಗಿಡ ನೆಡುವ ಕಾರ್ಯಕ್ರಮಗಳನ್ನು ನಡೆಸುತ್ತವೆ. ಆದರೆ ಆ ಬೀಜಗಳು ಮೊಳಕೆಯೊಡೆದು ಗಿಡಗಳಾಗುವ ಮುನ್ನಾ ಕಾಡಿನ ಒಳಗೆ ನುಗ್ಗುವ ಜಾನುವಾರುಗಳು ತುಳಿದು ನಾಶಪಡಿಸುತ್ತಿವೆ. ಇನ್ನು ನೆಟ್ಟ ಗಿಡಗಳು ಬೇರು ಬಿಟ್ಟು ಮೇಲೇರುವ ಮುನ್ನವೆ ಹಾನಿಗೊಳಗಾಗುತ್ತಿವೆ. ಹೀಗಾದರೆ ಕಾಡಾನೆಗಳಿಗೆ ಆಹಾರ ಒದಗಿಸುವ ಪರಿ ಹೇಗೆ? ಎಂಬದು ಯಕ್ಷ ಪ್ರಶ್ನೆಯಾಗಿದೆ.
ದಿನಕ್ಕೆ ಕಾಡಾನೆಯೊಂದಕ್ಕೆ ಕುಡಿಯಲು ೨೦೦ ಲೀಟರ್ ನೀರು ಬೇಕು. ೩೦೦ ಕೆ.ಜಿ.ಯಷ್ಟು ಆಹಾರ ಬೇಕು. ನಿತ್ಯವೂ ಹತ್ತಾರು ಕಿ.ಮೀ. ಕ್ರಮಿಸುವ ಈ ಕಾಡಾನೆ ಇದ್ದಲ್ಲಿ ಇರುವುದಿಲ್ಲ.
ಕಾಡಿನಲ್ಲಿ ಎಲ್ಲಿ ನೋಡಿದರೂ ಕೂಡ ಅವುಗಳ ಹೊಟ್ಟೆ ತುಂಬಿಸುವ ತೊಗಟೆ ಹಾಗೂ ಸೊಪ್ಪಿನ ಮರಗಳೇ ಇಲ್ಲ. ಎಲ್ಲವು ವಾಣಿಜ್ಯಮಯ. ಅಂದರೆ ತೇಗ, ಬೀಟೆ, ನೀಲಗಿರಿ, ಸಿಲ್ವರ್ ನಂತಹ ಗಿಡಮರಗಳೇ ಇರುವ ಕಾಡಿನಲ್ಲಿ ಕಾಡಾನೆಗಳಿಗೆ ಪೂರಕವಾದ ಯೋಜನೆಗಳು ರೂಪುಗೊಳ್ಳದ ಹೊರತು ವನ್ಯಜೀವಿಗಳಿಗೂ ರಕ್ಷಣೆಯಿಲ್ಲ. ಕಾಡಂಚಿನ ಕೃಷಿಕರಿಗೂ ಮುಕ್ತಿಯಿಲ್ಲ. ಹಾಗಾಗಿ ಆನೆ ಮಾನವ-ಸಂಘರ್ಷಕ್ಕೆ ಕೊನೆಯೇ ಇಲ್ಲದಂತಾಗುತ್ತದೆ.
ಅಧಿಕಾರಿಗಳು ಹಾಗೂ ಪ್ರಾಣಿ ಪರಿಸರ ಪ್ರಿಯರು ಒಟ್ಟಾಗಿ ಸೇರಿ ಚಿಂತಿಸಿ ಫಲಪ್ರದ ಯೋಜನೆಗಳನ್ನು ಜಾರಿಗೊಳಿಸುವ ಕೆಲಸ ಇನ್ನಾದರೂ ಆದೀತೆ ನೋಡಬೇಕಷ್ಟೆ. - ಕೆ.ಎಸ್. ಮೂರ್ತಿ, ಕಣಿವೆ.