ಮಡಿಕೇರಿ, ಆ. ೮: ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಒಬ್ಬ ಬೇತಾಳನಿಂದ ನನಗೆ ಸಚಿವ ಸ್ಥಾನ ಸಿಕ್ಕಿಲ್ಲವೆಂದು ಆರೋಪಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಆ ಬೇತಾಳ ಯಾರೆಂದು ಕೊಡಗಿನ ಜನರ ಮುಂದೆ ಬಹಿರಂಗ ಪಡಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಟಿ.ಈ. ಸುರೇಶ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಜೆಪಿಯಲ್ಲಿ ಶಾಸಕರು ಪ್ರಭಾವಿತರೇ ಅಥವಾ ಬೇತಾಳ ಪ್ರಭಾವಿತವೇ ಎನ್ನುವುದನ್ನು ತಿಳಿಯುವ ಕುತೂಹಲದಲ್ಲಿ ಜನರಿದ್ದಾರೆ ಎಂದು ಹೇಳಿದ್ದಾರೆ.
ನೂತನ ಸಚಿವ ಸಂಪುಟ ರಚನೆ ಸಂದರ್ಭ ಕೊಡಗಿನ ಇಬ್ಬರು ಹಿರಿಯ ಶಾಸಕರಿಗೂ ಸ್ಥಾನ ಸಿಕ್ಕಿಲ್ಲ. ಈ ಶಾಸಕರು ಸಚಿವರಾಗಲು ಅರ್ಹರೇ ಅಥವಾ ಅನರ್ಹರೇ ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡುತ್ತಿದ್ದು, ಇದಕ್ಕೆ ಬಿಜೆಪಿ ಪಕ್ಷವೇ ಉತ್ತರ ನೀಡಬೇಕಾ ಗಿದೆ. ಕೊಡಗಿನ ಮತದಾರರು ಸ್ಥಳೀಯ ಸಂಸ್ಥೆ, ವಿಧಾನಸಭೆ, ಲೋಕ ಸಭೆ ಸೇರಿದಂತೆ ಎಲ್ಲಾ ಚುನಾವಣೆ ಗಳಲ್ಲಿ ಬಿಜೆಪಿಯ ಪರವಾಗಿದ್ದಾರೆ. ಆದರೆ ಬಿಜೆಪಿ ಮಾತ್ರ ಕೊಡಗನ್ನು ಹಗುರವಾಗಿ ಪರಿಗಣಿಸಿದ್ದು, ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಸುರೇಶ್ ಟೀಕಿಸಿದ್ದಾರೆ.
ಜಿಲ್ಲೆಯ ಮತದಾರರು ಇನ್ನಾದರು ಬಿಜೆಪಿಯ ತಾರತಮ್ಯ ನೀತಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಕೊಡಗಿನ ಅಭಿವೃದ್ಧಿಯಲ್ಲಿ ಕಾಳಜಿ ಇಲ್ಲದ ಈ ಪಕ್ಷವನ್ನು ತಿರಸ್ಕರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಗೌರವ ತೋರಲಾಗಿದೆ
ಕೊಡಗು ಜಿಲ್ಲೆಯಲ್ಲಿ ೪- ೫ ಬಾರಿ ಶಾಸಕರಾದವರು ಇದ್ದರೂ ಸಚಿವ ಸ್ಥಾನ ನೀಡದೆ ವಂಚಿಸುವ ಮೂಲಕ ಕೊಡಗಿನ ಮತದಾರರಿಗೆ ಭಾರತೀಯ ಜನತಾ ಪಾರ್ಟಿ ಅಗೌರವ ತೋರಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಕೆ.ಎ. ಯಾಕೂಬ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಜೆಪಿಗೆ ಅಧಿಕಾರ ನಡೆಸಲು ಕೊಡಗಿನ ಮತಗಳು ಬೇಕು, ಆದರೆ ಕೊಡಗು ಮತ್ತು ಇಲ್ಲಿನ ಜನರು ಬೇಡ ಎಂಬAತಾಗಿದೆ ಎಂದು ಟೀಕಿಸಿದ್ದಾರೆ.
ಇಬ್ಬರು ಹಿರಿಯ ಶಾಸಕರುಗಳಿಗೆ ಸಚಿವರಾಗುವ ಅರ್ಹತೆ ಇದೆಯೇ ಅಥವಾ ಇಲ್ಲವೇ ಎನ್ನುವುದನ್ನು ಬಿಜೆಪಿ ಜಿಲ್ಲೆಯ ಜನರ ಮುಂದೆ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲ ಕಾವೇರಿನಾಡು ಕೊಡಗಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಒಂದೇ ಬಾರಿಗೆ ಮೂವರು ಮಂತ್ರಿಗಳನ್ನು ನೀಡಿದ ಹೆಗ್ಗಳಿಕೆಯೂ ಕಾಂಗ್ರೆಸ್ಗೆ ಸಲ್ಲುತ್ತದೆ. ಬಿಜೆಪಿ ಸರ್ಕಾರ ಬಂದಾಗಲೆಲ್ಲ ಜಿಲ್ಲೆಯ ಶಾಸಕರನ್ನು ಮಾತ್ರವಲ್ಲದೆ ಜನರ ಬೇಡಿಕೆಗಳನ್ನು ಕೂಡ ನಿರ್ಲಕ್ಷಿಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.