ನಾಪೋಕ್ಲು, ಆ. ೮: ಕೇಂದ್ರೀಯ ಅಧಿಕಾರಸ್ಥ ಸಮಿತಿ (ಸಿಇಸಿ) ಪ್ರಾಕೃತಿಕ ಕಾಯ್ದಿಟ್ಟ ಅರಣ್ಯ ಮತ್ತು ರಕ್ಷಿತಾ ಅರಣ್ಯಗಳ ಮಧ್ಯದಲ್ಲಿರುವ ಮತ್ತು ಅಕ್ಕಪಕ್ಕದಲ್ಲಿರುವ ಖಾಸಗಿ ಜಮೀನನ್ನು ಸರಕಾರದ ವಶಕ್ಕೆ ಪಡೆದು ಅರಣ್ಯದ ವ್ಯಾಪ್ತಿಗೆ ಸೇರಿಸುವಂತೆ ಮಾಡಿರುವ ಶಿಫಾರಸ್ಸನ್ನು ಜಾರಿಗೊಳಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ನ್ಯಾಯಯುತವಾಗಿ ಕಾರ್ಯನಿರ್ವಹಿಸದೇ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿರುವದನ್ನು ನಾವು ಖಂಡಿಸುತ್ತೇವೆ ಎಂದು ನಾಪೋಕ್ಲು ಕೊಡವ ಸಮಾಜದ ಸ್ಪೋರ್ಟ್ಸ್, ಕಲ್ಚರ್ ಮತ್ತು ರಿಕ್ರಿಯೇಷನ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ, ಕುಂಜಿಲ-ಕಕ್ಕಬ್ಬೆ ಗ್ರಾ.ಪಂ.ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ನಾಲಡಿ ಗ್ರಾಮದ ನಾಟೋಳಂಡ ಪೊನ್ನಪ್ಪ, ದಿಲೀಪ್, ಕಲಿಯಂಡ ನರೇಶ್ ಬೋಪಣ್ಣ, ಕೊಳಕೇರಿ ಗ್ರಾಮದ ಕೇಟೋಳಿತ ಶಮ್ಮಿ ಸುಬ್ಬಯ್ಯ, ಕಲಿಯಂಡ ಮಾದಯ್ಯ, ಜಯಕುಮಾರ್, ನಾಪೋಕ್ಲು ಗ್ರಾಮದ ಅರೆಯಡ ವಿಠಲ ಮೊಣ್ಣಪ್ಪ ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿಯ ಕೋಪಟ್ಟಿ ಗ್ರಾಮದ ಸರ್ವೆ ನಂಬರ್ ೧/೧೦ರ ೨೦೪.೪೨ ಎಕರೆ ಜಮೀನನ್ನು ಎಸ್.ಎಲ್. ಶ್ರುತಿ ಕೋಂ ನರಸಿಂಹಮೂರ್ತಿಯವರಿAದ ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಜಮೀನು ಕೋಲಾರ ಮೂಲದ ಮಾಜಿ ಸಂಸತ್ ಸದಸ್ಯರ ಕುಟುಂಬಕ್ಕೆ ಸೇರಿದ ಜಮೀನಾಗಿರುವ ಕಾರಣದಿಂದ ರಾಜಕೀಯ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಈ ಪ್ರಸ್ತಾವನೆಯನ್ನು ಅನುಮೋದಿಸಲು ಮುಂದಾಗಿರುವAತೆ ಕಂಡು ಬರುತ್ತಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ. ಕೆಲವು ಸಾಮಾಜಿಕ ಸಂಘಟನೆಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯ ಪಾರದರ್ಶಕವಲ್ಲದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ಈ ಪ್ರಸ್ತಾವನೆಯನ್ನು ಅನುಮೋದಿಸಿ ಸರಕಾರದ ಸಂಪನ್ಮೂಲವನ್ನು ದುಂದು ವೆಚ್ಚ ಮಾಡಲಾಗುತ್ತಿದೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದರೂ ಕೂಡ, ಇದುವರೆಗೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯೂ ಈ ಬಗ್ಗೆ ಚಕಾರ ಎತ್ತಿಲ್ಲ. ಈ ಯೋಜನೆಯಡಿ ಜಿಲ್ಲೆಯ ಭೂ ಮಾಲೀಕರಿಗೆ ಹಾಗೂ ಜಮ್ಮಾ ಮಲೆ ಹಿಡುವಳಿದಾರರಿಗೆ ಅನುಕೂಲ ಮಾಡಿಕೊಡಲು ಮುಂದಾಗಿಲ್ಲ. ಇದನ್ನು ಗಮನಿಸಿದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಬದ್ಧತೆ ಮತ್ತು ಒಲವು ಕೊಡಗಿನ ಮತದಾರರ ಬದಲು ಕೋಲಾರ ಪ್ರಭಾವಿ

(ಮೊದಲ ಪುಟದಿಂದ) ಜನಪ್ರತಿನಿಧಿಗಳ ಪರವಾಗಿರುವದು ಸ್ಪಷ್ಟವಾಗುತ್ತದೆ.

ಕೊಡಗಿನ ರಾಜರ ಕಾಲದಲ್ಲಿ ಹಲವಾರು ಕುಟುಂಬಗಳಿಗೆ ಜಮ್ಮಾ ಮಲೆಗಳನ್ನು ಮಂಜೂರು ಮಾಡಲಾಗಿತ್ತು. ಬ್ರಿಟಿಷರ ಆಳ್ವಿಕೆ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಜಮ್ಮಾ ಮಲೆಗಳ ಮೇಲಿನ ಹಿಡುವಳಿದಾರರ ಹಕ್ಕನ್ನು ಗುರುತಿಸಿದೆ. ಮಡಿಕೇರಿ ತಾಲೂಕಿನ ಅಯ್ಯಂಗೇರಿ, ನಾಲಡಿ, ಯವಕಪಾಡಿ, ಮರಂದೋಡ, ಚೇಲಾವರ ಮತ್ತು ಕರಡ ಗ್ರಾಮ ಹಾಗೂ ವೀರಾಜಪೇಟೆಯ ಪಾಲಂಗಾಲ ಗ್ರಾಮದಲ್ಲಿ ೧೫೫ ಕುಟುಂಬಗಳಿಗೆ ೮೬೪೯.೯೩ ಎಕರೆ ಜಮ್ಮಾ ಮಲೆಗಳನ್ನು ನೀಡಲಾಗಿತ್ತು. ಈ ಜಮ್ಮಾ ಮಲೆಗಳು ಪರಿನಾಲ್ಕುನಾಡು ರಕ್ಷಿತಾರಣ್ಯದ ವ್ಯಾಪ್ತಿಗೆ ಸೇರಿವೆ.

ಏಲಕ್ಕಿಗೆ ಕಾಣಿಸಿಕೊಂಡ ರೋಗ ಮತ್ತು ಬೆಲೆ ಕುಸಿತ, ವೇತನ ಹೆಚ್ಚಳ, ಸೂಕ್ತ ಸಂಪರ್ಕದ ಕೊರತೆಯ ಕಾರಣದಿಂದ ಬಹುತೇಕ ಹಿಡುವಳಿದಾರರು ಜಮ್ಮಾ ಮಲೆಗಳಲ್ಲಿ ಕೃಷಿ ಮಾಡುತ್ತಿಲ್ಲ. ಬಹುತೇಕ ಹಿಡುವಳಿದಾರರು ಜಮ್ಮಾ ಮಲೆಗಳಲ್ಲಿ ಮರಕಡಿತಲೆಗೂ ಮುಂದಾಗಿಲ್ಲ. ಇದರಿಂದಾಗಿ ಜಮ್ಮಾ ಮಲೆಗಳಲ್ಲಿ ಅರಣ್ಯ ಇಲಾಖೆಯ ವಶದಲ್ಲಿರುವ ರಕ್ಷಿತಾರಣ್ಯದಲ್ಲಿರುವದಕ್ಕಿಂತಲೂ ದಟ್ಟವಾದ ಮರ, ಕಾಡುಗಳಿವೆ.

ಜಮ್ಮಾ ಮಲೆ ಹಿಡುವಳಿದಾರರು ಸರಕಾರ ಸೂಕ್ತ ಪರಿಹಾರ ನೀಡಿದರೆ, ಜಮ್ಮಾ ಮಲೆಗಳ ಮೇಲಿನ ತಮ್ಮ ಹಕ್ಕನ್ನು ಬಿಟ್ಟುಕೊಡುವದಾಗಿ ಸರಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಸಿ.ಪಿ. ಯೋಗೀಶ್ವರ್ ಅರಣ್ಯ ಸಚಿವರಾಗಿದ್ದ ಸಮಯದಲ್ಲಿ ಸರಕಾರ ಪರಿಹಾರ ಪಾವತಿಸುವ ಪ್ರಸ್ತಾಪವೂ ಚರ್ಚೆಗೆ ಬಂದಿತ್ತು. ಆದರೆ, ನಂತರ ಈ ವಿಚಾರದಲ್ಲಿ ಯಾವ ಪ್ರಗತಿಯೂ ಆಗಲಿಲ್ಲ.

ಕೇಂದ್ರೀಯ ಅಧಿಕಾರಸ್ಥ ಸಮಿತಿ(ಸಿಇಸಿ)ಯ ಶಿಫಾರಸ್ಸು ಜಮ್ಮಾ ಮಲೆಗಳ ಹಿಡುವಳಿದಾರರ ಬೇಡಿಕೆಗೆ ಶಾಶ್ವತ ಪರಿಹಾರ ನೀಡಲು ಅನುಕೂಲವಾಗುವಂತಿದೆ. ಆದರೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯ ಕಾರ್ಯವೈಖರಿಯಿಂದಾಗಿ ಜಮ್ಮಾ ಮಲೆ ಹಿಡುವಳಿದಾರರು ಈ ಯೋಜನೆಯ ಸೌಲಭ್ಯ ಪಡೆಯಲು ವಿಫಲರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಜಮ್ಮಾ ಮಲೆ ಹಿಡುವಳಿದಾರರ ಮತ್ತು ಕೊಡಗಿನ ಭೂ ಮಾಲೀಕರ ಪರವಾದ ಧ್ವನಿಗೆ ನ್ಯಾಯ ಒದಗಿಸಲು ನಾಪೋಕ್ಲು ಕೊಡವ ಸಮಾಜ ಸ್ಪೋರ್ಟ್ಸ್, ಕಲ್ಚರ್ ಮತ್ತು ರಿಕ್ರಿಯೇಷನ್ ಅಸೋಸಿಯೇಶನ್ ನಿರ್ಧರಿಸಿದೆ. ಈ ಅಸೋಸಿಯೇಷನ್‌ನಲ್ಲಿ ಹಲವಾರು ಜಮ್ಮಾ ಮಲೆ ಹಿಡುವಳಿದಾರರು ಸದಸ್ಯರಾಗಿದ್ದು, ಯಾವದೇ ರಾಜಕೀಯ ಹಿತಾಸಕ್ತಿಯಿಲ್ಲದೆ ಈ ಕೆಳಗಿನ ಒತ್ತಾಯವನ್ನು ಅವರು ಜಿಲ್ಲಾಡಳಿತ, ರಾಜ್ಯ ಸರಕಾರ ಮತ್ತು ಜನಪ್ರತಿನಿಧಿಗಳ ಮುಂದಿರಿಸಿದ್ದಾರೆ.

‘ಕೇAದ್ರೀಯ ಅಧಿಕಾರಸ್ಥ ಸಮಿತಿ (ಸಿಇಸಿ) ಪ್ರಾಕೃತಿಕ ಕಾಯ್ದಿಟ್ಟ ಅರಣ್ಯ ಮತ್ತು ರಕ್ಷಿತ ಅರಣ್ಯಗಳ ಮಧ್ಯದಲ್ಲಿರುವ ಮತ್ತು ಅಕ್ಕಪಕ್ಕದಲ್ಲಿರುವ ಖಾಸಗೀ ಜಮೀನನ್ನು ಸರಕಾರದ ವಶಕ್ಕೆ ಪಡೆದು ಅರಣ್ಯದ ವ್ಯಾಪ್ತಿಗೆ ಸೇರಿಸುವಂತೆ ಮಾಡಿರುವ ಶಿಫಾರಸ್ಸನ್ನು ಜಾರಿಗೊಳಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲು ಪಾರದರ್ಶಕತೆಯಿಲ್ಲದೆ ಕಾರ್ಯನಿರ್ವಹಿಸುವದನ್ನು ನಿಲ್ಲಿಸುವದು. ಈ ಯೋಜನೆಯಡಿ ಜಮೀನನ್ನು ಸರಕಾರಕ್ಕೆ ಬಿಟ್ಟುಕೊಡಲು ಸಿದ್ಧರಿರುವ ಜಮ್ಮಾ ಮಲೆ ಹಿಡುವಳಿದಾರರು ಮತ್ತು ಇತರ ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸುವದು.

ಈ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಮಡಿಕೇರಿ ತಾಲೂಕು ಭಾಗಮಂಡಲ ಹೋಬಳಿಯ ಕೋಪಟ್ಟಿ ಗ್ರಾಮದ ಸರ್ವೇ ನಂಬರ್ ೧/೧೦ರ ೨೦೪.೪೨ ಎಕರೆ ಜಮೀನನ್ನು ಎಸ್.ಎಲ್. ಶ್ರುತಿ ಕೋಂ ನರಸಿಂಹಮೂರ್ತಿ ಅವರ ಅರ್ಜಿಯನ್ನು ತಡೆಹಿಡಿಯುವದು.

ಭೂಮಾಲೀಕರ/ ಜಮ್ಮಾ ಮಲೆ ಹಿಡುವಳಿದಾರರ ಅರ್ಜಿಯನ್ನು ಸೂಕ್ಷö್ಮವಾಗಿ ಗಮನಿಸಿ ಅದರಲ್ಲಿ ಈ ಯೋಜನೆಗೆ ಕೊಡಗು ಜಿಲ್ಲೆಯಲ್ಲಿ ಲಭ್ಯವಿರುವ ಸೂಕ್ತವಾದ ಜಮೀನಿನ ಸಮಗ್ರ ವರದಿ ತಯಾರಿಸುವದು.

ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ಕಾಂಪಾ ನಿಧಿಯಡಿ ಲಭ್ಯವಿರುವ ಅನುದಾನವನ್ನು ಬಳಸಿ ಈ ಜಮೀನನ್ನು ಖರೀದಿಸಿ ಇವುಗಳ ಸಂರಕ್ಷಣೆಗೆ ಸಂರಕ್ಷಿತ ಅರಣ್ಯಗಳ ವ್ಯಾಪ್ತಿಗೆ ಸೇರಿಸುವದು’.

ಈ ಬಗ್ಗೆ ಜಿಲ್ಲಾಡಳಿತ, ಜನ ಪತಿನಿಧಿಗಳು ಸೂಕ್ತ ಕ್ರಮಕೈಗೊಳ್ಳದಿದ್ದರೆ, ಮುಂಬರುವ ಚುನಾವಣೆಯಲ್ಲಿ ಮತದಾರರು ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿದೆ.