ಕಾವೇರಿಯು ಭಾರತದ ಪರ್ಯಾಯ ದ್ವೀಪೀಯ ಪ್ರದೇಶದ ಮುಖ್ಯ ನದಿಗಳಲ್ಲೊಂದು. ತಮಿಳುನಾಡಿನಲ್ಲಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ತಲಕಾವೇರಿಯಲ್ಲಿ ಜನಿಸಿ ಉಗಮಸ್ಥಾನದಿಂದ ಸಂಗಮದವರೆಗೆ ಇದರ ಉದ್ದ ೪೭೫ ಮೈಲಿ.

ಹಿಂದೂ ಪುರಾಣೋಕ್ತವಾದ ಏಳು ಪವಿತ್ರ ನದಿಗಳಲ್ಲಿ ಕಾವೇರಿಯೂ ಒಂದು. ದಕ್ಷಿಣಗಂಗಾ ಎಂದು ಇದರ ಪ್ರತೀತಿ. ತನ್ನಲ್ಲಿ ಮೀಯುವ ಅಸಂಖ್ಯಾತ ಯಾತ್ರಿಕರಿಂದ ಬಂದ ಪಾಪದ ಪರಿಹಾರಾರ್ಥವಾಗಿ ಗಂಗೆಯೇ ವರ್ಷಕ್ಕೊಮ್ಮೆ (ತುಲಾ ಸಂಕ್ರಮಣದAದು) ಅಂತರ್ಗತಳಾಗಿ ಕಾವೇರಿಯ ಉಗಮಸ್ಥಾನದಲ್ಲಿ ಮೀಯುತ್ತಾಳೆಂಬುದು ಆ ಸುತ್ತಿನ ಜನರ ನಂಬಿಕೆ. ಕಾವೇರಿ ನದಿ ಹರಿಯುವ ಪ್ರದೇಶದ ಜನಕ್ಕೆ ಅದರಿಂದಾಗಿರುವ ಉಪಕಾರ ಅಪಾರ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕೃಷಿ ಕೈಗಾರಿಕಾಭಿವೃದ್ಧಿಗೆ ಇದು ಬಹಳ ಮಟ್ಟಿಗೆ ಕಾರಣವಾಗಿದೆ. ಕಾವೇರಿ ಹರಿಯುವ ನಾಡು ಪವಿತ್ರ ಭೂಮಿಯೆಂದು ಪರಿಗಣಿತವಾಗಿರುವುದಕ್ಕೆ ತಲತಲಾಂತರದಿAದ ಅದರಿಂದ ಲಭ್ಯವಾಗುತ್ತಿರುವ ಉಪಕಾರ ಮುಖ್ಯ ಕಾರಣ.

ಉಗಮ, ಹರಿವು: ಕೊಡಗು ಜಿಲ್ಲೆಯಲ್ಲಿ ಪಶ್ಚಿಮ ಘಟ್ಟಗಳ ಬ್ರಹ್ಮಗಿರಿಯಲ್ಲಿ ಕಾವೇರಿ ಉಗಮಿಸುತ್ತದೆ. ಇದೇ ತಲಕಾವೇರಿ ಗಿರಿಯ ನೆತ್ತಿಯ ಮೇಲೆ ಅರಬ್ಬೀಸಮುದ್ರಕ್ಕೆ ಹತ್ತಿರದಲ್ಲೇ ಹುಟ್ಟುವ ಈ ನದಿ ಅಡ್ಡ ಬಂದ ಪರ್ವತವನ್ನು ದಾಟಿ ಪೂರ್ವಾಭಿಮುಖವಾಗಿ ಹರಿಯುವುದು ಒಂದು ಸ್ವಾರಸ್ಯ. ಪಶ್ಚಿಮದತ್ತ ಜಾರಿದ್ದರೆ ಅದರ ನೀರು ನೆಟ್ಟಗೆ ಅರಬ್ಬೀ ಕಡಲನ್ನು ಸೇರುತ್ತಿತ್ತು. ಪೂರ್ವದಲ್ಲಿ ಅದು ಈಗ ಹರಿಯುತ್ತಿರುವ ಪ್ರದೇಶ ಆಗ ಬಹುತೇಕ ಬರಡಾಗುತ್ತಿತ್ತು. ಘಟ್ಟದ ನೆತ್ತಿ ಗೆರೆಯ ಪಶ್ಚಿಮಕ್ಕಿರುವ ಪ್ರದೇಶದ ಒಂದು ಭಾಗದ ನೀರನ್ನೂ ಕಾವೇರಿ ಕೂಡಿಸಿಕೊಳ್ಳುತ್ತದೆ. ಜೂನ್‌ನಿಂದ ಸೆಪ್ಟೆಂಬರಿನವರೆಗೆ ಕೊಡಗಿನಲ್ಲಿ ಸಮೃದ್ಧಿಯಾಗಿ ಬೀಳುವ ಮಳೆಯಿಂದಾಗಿ ಆ ಕಾಲದಲ್ಲಿ ಕಾವೇರಿ ತುಂಬಿ ಹರಿಯುತ್ತದೆ. ಘಟ್ಟದ ಬದಿಯ ಮೈದಾನಕ್ಕೂ ತಮಿಳುನಾಡಿನ ಬಯಲು ನೆಲಕ್ಕೂ ನೀರುಣಿಸುತ್ತದೆ.

ಉಗಮಸ್ಥಾನದಿಂದ ಸಿದ್ದಾಪುರದವರೆಗೆ ಆಗ್ನೇಯಾಭಿಮುಖವಾಗಿ ಹರಿಯುತ್ತ ಅಲ್ಲಿಂದ ಈಶಾನ್ಯ ದಿಕ್ಕಿನಲ್ಲಿ ಹರಿಯುವ ಕಾವೇರಿ, ಕೊಡಗಿನ ಅನೇಕ ಉಪನದಿಗಳನ್ನು ತನ್ನಲ್ಲಿ ಸೇರಿಸಿಕೊಳ್ಳುತ್ತದೆ. ಹುಟ್ಟುವೆಡೆಯಿಂದ ಮೂರು ಮೈಲಿ ಕೆಳಕ್ಕೆ ಭಾಗಮಂಡಲದಲ್ಲಿ ಕಾವೇರಿಯನ್ನು ಕೂಡಿಕೊಳ್ಳುವ ನದಿಯೇ ಕನ್ನಿಕೆ. ಕೊಡಗಿನಲ್ಲಿ ದಕ್ಷಿಣ ಕಡೆಯಿಂದ ಕಾವೇರಿಗೆ ಬಂದು ಸೇರುವವು ಕಕ್ಕಬೆ ಹೊಳೆ, ಕಾಡನೂರುಹೊಳೆ ಮತ್ತು ಸಮ್ಮೆಹೊಳೆ. ಮಡಿಕೇರಿ ಶ್ರೇಣಿಯ ದಕ್ಷಿಣದ ಜಲಾನಯನ ಪ್ರದೇಶದಿಂದ ಹರಿದು ಬರುವ ಮುತ್ತಾರುಮುಡಿ ಹೊಳೆ ಕಾವೇರಿಯ ಉತ್ತರ ಪಾರ್ಶ್ವದಲ್ಲಿ ಅದನ್ನು ಸೇರಿಕೊಳ್ಳುತ್ತದೆ. ಈ ಭಾಗದಲ್ಲಿ ಕಾವೇರಿಯನ್ನು ಕೂಡಿಕೊಳ್ಳುವ ಇನ್ನೊಂದು ನದಿ. ಚಿಕ್ಲಿಹೊಳೆ ಕುಶಾಲನಗರಕ್ಕೆ ಉತ್ತರದಲ್ಲಿ ಕಾವೇರಿಯಲ್ಲಿ ಸಂಗಮಿಸುವ ಮುಖ್ಯ ನದಿಯೆಂದರೆ ಹಟ್ಟಿ ಅಥವಾ ಹಾರಂಗಿ. ಕಕ್ಕೆ ಹೊಳೆ, ಜೇರನಹೊಳೆ, ಹಟ್ಟಿಹೊಳೆ ಇವು ಹಾರಂಗಿಯನ್ನು ಸೇರುವ ಹೊಳೆಗಳು.

ಹುಟ್ಟುವೆಡೆಯಿಂದ ಘಟ್ಟದ ಇಳಿಜಾರಿನಲ್ಲಿ ವೇಗವಾಗಿ ಹರಿಯುವ ಕಾವೇರಿ ಕೇವಲ ೮ ಕಿ.ಮೀ. ಸಾಗುವ ವೇಳೆಗೆ ೪೫೦ ಮೀ. ನಷ್ಟು ಔನ್ನತ್ಯವನ್ನು ಕಳೆದುಕೊಂಡಿರುತ್ತದೆ. ಭಾಗಮಂಡಲದಿAದಲೇ ಅದಕ್ಕೆ ಪ್ರೌಢನದಿಯ ಲಕ್ಷಣಗಳೆಲ್ಲ ಪ್ರಾಪ್ತವಾಗಿರುತ್ತವೆ. ಅಡ್ಡ ಬರುವ ಬಂಡೆಗಳಲ್ಲಿ ಯಾವುದೂ ಅಭೇದ್ಯವಾದ ಅಡ್ಡಿಯಾಗಿ ಪರಿಣಮಿಸಿಲ್ಲ. ಪ್ರಾಚೀನ ನದಿಯ ಚಿಹ್ನೆಗಳೆಲ್ಲ ಕಾವೇರಿಗೆ ಉಂಟು. ಇದು ಹರಿಯುವ ಪಾತ್ರದ ಮೇಲ್ಮೆöÊಗೆ ಈ ನದಿಯಷ್ಟು ವಯಸ್ಸಾಗಿಲ್ಲ. ಈಚೆಗೆ ಸಂಭವಿಸಿದ ಭೂ ಉತ್ಕರ್ಷದ ಪರಿಣಾಮವದು.

ಹಾರಂಗಿಯೊಡಗೂಡಿ ಮೈಸೂರು-ಕೊಡಗು ಜಿಲ್ಲೆಗಳ ಗಡಿಗುಂಟ ಸಾಗಿದ ತರುವಾಯ ಇದು ಹಾಸನ ಜಿಲ್ಲೆಯ ದಕ್ಷಿಣಾಗ್ರದಲ್ಲಿ ರಾಮನಾಥಪುರದ ಬಳಿ ಬಲಕ್ಕೆ ತಿರುಗಿ ಪೂರ್ವಾಭಿಮುಖಿವಾಗಿ ಹರಿಯುತ್ತದೆ. ಅಲ್ಲಿಂದಲೇ ಇದಕ್ಕೆ ಮೈಸೂರು ಜಿಲ್ಲೆಯತ್ತ ಗಮನ. ಅನತಿದೂರದಲ್ಲೇ ಸಾಲಿಗ್ರಾಮದ ಬಳಿಯ ಚುಂಚನಕಟ್ಟೆಯಲ್ಲಿ ಜಲಪಾತವಾಗಿ ಪರಿಣಮಿಸಿ ವೇಗವನ್ನು ಇನ್ನಷ್ಟು ಕಡಿಮೆಗೊಳಿಸಿಕೊಂಡು ಕೃಷ್ಣರಾಜನಗರದ ಮಾರ್ಗವಾಗಿ ಮುಂದೆ ಸಾಗುವ ಕಾವೇರಿಯನ್ನು ಕನ್ನಂಬಾಡಿಯ ಬಳಿಯಲ್ಲಿ ಸಂಗಮಿಸುವ ಉಪನದಿಗಳು ಹೇಮಾವತಿ ಮತ್ತು ಲಕ್ಷö್ಮಣತೀರ್ಥ, ಇವೆರಡೂ ಅನುಕ್ರಮವಾಗಿ ಕೊಡಗಿನ ಉತ್ತರ-ದಕ್ಷಿಣ ಪ್ರದೇಶಗಳ ನೀರನ್ನು ಕೂಡಿಸಿಕೊಂಡು ಮೊದಲನೆಯದು ಹಾಸನ ಜಿಲ್ಲೆಯಲ್ಲೂ, ಎರಡನೆಯದು ಮೈಸೂರು ಜಿಲ್ಲೆಯಲ್ಲೂ ಹರಿದು ಬರುತ್ತವೆ.

ಕನ್ನಂಬಾಡಿಯ ಬಳಿಯಲ್ಲಿ ಮಂಡ್ಯ ಜಿಲ್ಲೆ ಸೇರುವ ಕಾವೇರಿ ಆ ಜಿಲ್ಲೆಯ ದಕ್ಷಿಣಾಗ್ರದಲ್ಲೇ ಹರಿದು, ತನ್ನ ವೇಗವನ್ನು ಇನ್ನೂ ತಗ್ಗಿಸಿಕೊಂಡು ಶ್ರೀರಂಗಪಟ್ಟಣದಲ್ಲಿ ಕವಲೊಡೆದು ಅದನ್ನೊಂದು ದ್ವೀಪವಾಗಿ ಪರಿವರ್ತಿಸಿ, ಮತ್ತೆ ಮೈಸೂರು ಜಿಲ್ಲೆಯ ಉತ್ತರದಂಚಿನಲ್ಲಿ ಸಾಗುತ್ತದೆ. ಬನ್ನೂರು, ಸೋಸಲೆಗಳನ್ನು ದಾಟಿದ ಮೇಲೆ ಸಿಕ್ಕುವುದು ತಿರುಮಕೂಡಲು ನರಸೀಪುರ. ಮೈಸೂರು ಜಿಲ್ಲೆಯ ದಕ್ಷಿಣದ ಕಡೆಯಿಂದ ಹರಿದು ಬರುವ ಕಪಿನಿ ನದಿ ಕಾವೇರಿಯನ್ನು ಸೇರುವುದು ಈ ಎಡೆಯಲ್ಲಿ.

ಮಂಡ್ಯ-ಮೈಸೂರು ಜಿಲ್ಲೆಗಳ ಗಡಿ ಮುಟ್ಟಿ ದಕ್ಷಿಣಕ್ಕೆ ತಿರುಗಿ ತಲಕಾಡನ್ನು ಎಡಕ್ಕೆ ಬಿಟ್ಟು ಪೂರ್ವದತ್ತ ನೋಟ ಹರಿಯಿಸುವ ಕಾವೇರಿಯ ಈ ವರ್ತನೆಯಿಂದಾಗಿ ತಲಕಾಡಿನ ಸುತ್ತೆಲ್ಲ ಮರಳು ಹಾಯ್ದಿದೆ. ಪಾತ್ರದುದ್ದಕ್ಕೂ ತುಂಬಿ ತಂದ ಮರಳನ್ನೆಲ್ಲ ವಿಸರ್ಜಿಸಲು ಕಾವೇರಿಗೆ ಈ ತಿರುವು ಅತ್ಯಂತ ಅನುಕೂಲಕರ. ಬಲಗಡೆಯಿಂದ ಹರಿದು ಬರುವ ಸುವರ್ಣಾವತಿ ನದಿ ಸಂಗಮಿಸುವುದು ತಲಕಾಡಿನ ಬಳಿಯಲ್ಲೇ.

ಮತ್ತೆ ಕಾವೇರಿಯ ಗತಿ ಬದಲಾಗುತ್ತದೆ. ಉತ್ತರಾಭಿಮುಖವಾಗಿ ಹರಿದು ಮಂಡ್ಯ ಜಿಲ್ಲೆಯ ಗಡಿಗೆ ಸೋಕಿ ನಡೆದು ಶಿವಸಮುದ್ರ ಬಳಿಯಲ್ಲಿ ಕವಲೊಡೆದು, ಗಗನಚುಕ್ಕಿ-ಬರಚುಕ್ಕಿಗಳಾಗಿ ಧುಮಿಕಿ, ಮತ್ತೆ ಒಂದಾಗಿ ಸಾಗುತ್ತದೆ. ಇಲ್ಲಿ ಸಂಭವಿಸಿರುವುದು ಕಾವೇರಿಯ ಎರಡನೆಯ ದೊಡ್ಡ ದ್ವೀಪ.

ಕೇವಲ ೮೦ ಕಿ.ಮೀ. ದೂರದಲ್ಲಿ ೮೦೦ ಮೀ.ನಷ್ಟು ಕೆಳಕ್ಕಿಳಿಯುವ ಕಾವೇರಿ ನದಿ ಆನಂತರ ಬೆಂಗಳೂರು ಜಿಲ್ಲೆಯ ದಕ್ಷಿಣ ಅಂಚನ್ನು ಸೋಕಿ ಹರಿಯುತ್ತದೆ. ಸಮುದ್ರ ಮಟ್ಟಕ್ಕಿಂತ ಸುಮಾರು ೭೫೦ ಮೀ. ಎತ್ತರವಿರುವ ಮೈಸೂರು ಪ್ರಸ್ಥಭೂಮಿಯ ಫಲವತ್ತಾದ ಪ್ರದೇಶದಲ್ಲಿ ಹಾವಿನಂತೆ ಹರಿದು ಅಗಲ ಹೆಚ್ಚಿಸಿಕೊಂಡು ನಿಧಾನವಾಗಿ ಸಾಗಿದ ನದಿಯ ಸ್ವಭಾವವೇ ಶಿವಸಮುದ್ರದಿಂದಾಚೆಗೆ ವ್ಯತ್ಯಾಸವಾಗುತ್ತದೆ. ಮೈಸೂರಿನ ಪ್ರಸ್ಥಭೂಮಿಯಿಂದ ತಮಿಳುನಾಡಿನ ತಗ್ಗುಬಯಲಿಗೆ ಹರಿಯುವಾಗ ಅದರ ವೇಗ ಅತಿ ಹೆಚ್ಚು. ಅದರ ಪ್ರವಾಹದ ಗಾತ್ರವನ್ನು ಧರಿಸುವಷ್ಟು ವಿಸ್ತಾರವಾದ ಪಾತ್ರವಿಲ್ಲದ್ದರಿಂದ ನದಿ ಅತ್ಯಂತ ರಭಸವಾಗಿ ಹರಿಯುತ್ತದೆ. ಗಟ್ಟಿಬಂಡೆಗಳು ಜೇಡಿಮಣ್ಣಿನ ಹೆಪ್ಪುಗಳಂತೆ ಸವೆದು ಚಿಪ್ಪಾಗಿವೆ. ಅಲ್ಲಿ ಸಂಭವಿಸಿರುವ ೧೨-೭೫ ಮೀ. ಆಳದ ಹಲವಾರು ಗುಂಡಿಗಳು ನದಿಯ ಪ್ರತಾಪಕ್ಕೆ ನಿದರ್ಶನ. ಒಂದೆಡೆ ಯಲ್ಲಂತೂ ನದಿಯ ಪಾತ್ರ ಬಲು ಕಿರಿದು. ಹಿಂದೆ ಇದನ್ನು ಮೇಕೆ ದಾಟಬಹುದಾಗಿತ್ತಂತೆ. ಈಗ ಅದರ ಅಗಲ ಅಷ್ಟೊಂದು ಕಿರಿದಾಗಿಲ್ಲ. ಮೇಕೆದಾಟು ಎಂಬ ಹೆಸರಿನಿಂದಲೇ ಆ ಸ್ಥಳ ಪ್ರಸಿದ್ಧವಾಗಿದೆ. ಎತ್ತರ ನೆಲದಿಂದ ತಗ್ಗಿಗೆ ಜಾರುವ ಕಾವೇರಿ ಈ ಎಡೆಯಲ್ಲಿ ಅನೇಕ ಸಣ್ಣ-ಪುಟ್ಟ ಹೊಳೆ-ತೊರೆಗಳನ್ನು ಕೂಡಿಸಿಕೊಳ್ಳುತ್ತದೆ. ಇವುಗಳ ಪೈಕಿ ಕಣ್ವ ಮತ್ತು ಅರ್ಕಾವತಿಗಳು ದೊಡ್ಡವು. ಇವು ಬೆಂಗಳೂರು ಜಿಲ್ಲೆಯ ಮೂಲಕ ಹರಿದು ಬರುತ್ತವೆ. ಇತರ ಹೊಳೆಗಳ ಪಾತ್ರಗಳನ್ನು ಏರಿಸಿಕೊಂಡು, ಇಕ್ಕಟ್ಟನ್ನು ಆದಷ್ಟು ನಿವಾರಿಸಿಕೊಂಡು ಸಾಗುವ ನದಿಯ ಈ ಪಾತ್ರ ಇತ್ತೀಚಿನದು, ಆದ್ದರಿಂದ ಕ್ರಮಪ್ರಾಪ್ತವಾದ ಹಾದಿ ಏರ್ಪಡಿಸಿಕೊಳ್ಳಲು ನದಿಗೆ ಇನ್ನೂ ಸಾಧ್ಯವಾಗಿಲ್ಲ.

ಕಾವೇರಿಯಿಂದ ಮೈಸೂರಿಗೆ ಆಗಿರುವ ಉಪಕಾರ ಅಷ್ಟಿಷ್ಟಲ್ಲ. ಅದರ ಹರಿವಿನ ಉದ್ದಕ್ಕೂ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ನದಿಯ ಎರಡೂ ದಂಡೆಗಳಲ್ಲಿ ಮೆಟ್ಟಿಲು ಮೆಟ್ಟಿಲಾಗಿ ನೀರಾವರಿಯ ಸೌಲಭ್ಯ ಒದಗಿಸಿರುವ ಕಾಲುವೆಗಳ ಒಟ್ಟು ಉದ್ದ ೧,೯೦೦ ಕಿ. ಮೀ. ಇಲ್ಲಿಯ ಅಣೆಕಟ್ಟುಗಳಲ್ಲಿ ಕೆಲವು ಅತ್ಯಂತ ಹಳೆಯವು, ಇವುಗಳಲ್ಲಿ ಕೆಲವು ೧೦೦೦ ವರ್ಷಗಳ ಹಿಂದೆ ಕಟ್ಟಿದವು. ಕನ್ನಂಬಾಡಿಯ ಬಳಿ ಕಟ್ಟಿರುವ ಕೃಷ್ಣರಾಜಸಾಗರ ಕಟ್ಟೆ ಈಚಿನದು. ನದಿಯ ಪಾತ್ರದಿಂದ ೩೮ ಮೀ. ಎತ್ತರವಿರುವ ಕಟ್ಟೆಯ ಉದ್ದ ೧,೯೯೬ ಮೀ. ಜಲಾಶಯದಲ್ಲಿ ಶೇಖರಿಸಬಹುದಾದ ನೀರಿನ ಪರಿಮಾಣ ೧,೧೭,೫೦,೦೦,೦೦೦ ಘನ ಮೀಟರುಗಳು, ಶಿವಸಮುದ್ರದ ಬಳಿಯ ವಿದ್ಯುದುತ್ಪಾದನಾ ಕೇಂದ್ರಕ್ಕೆ ವರ್ಷವಿಡೀ ನೀರು ಒದಗಿಸುವುದೂ ಮೈಸೂರು ಮಂಡ್ಯಗಳಲ್ಲಿ ಹೆಚ್ಚಿನ ನೀರಾವರಿ ಸೌಲಭ್ಯ ಕಲ್ಪಿಸುವುದೂ ಕೃಷ್ಣರಾಜಸಾಗರ ಕಟ್ಟೆಯ ನಿರ್ಮಾಣದ ಉದ್ದೇಶ.

ಶಿವಸಮುದ್ರದ ಬಳಿಯಲ್ಲಿ ನಿರ್ಮಿಸಲಾಗಿರುವ ವಿದ್ಯುದುತ್ಪಾದನಾ ಕೇಂದ್ರ (೧೯೦೨) ಇಡೀ ಏಷ್ಯದಲ್ಲೇ ಅತ್ಯಂತ ಹಳೆಯ ದೊಡ್ಡ ವಿದ್ಯುತ್‌ಕೇಂದ್ರ,

ಮಹಾ ನೀರಾವರಿಗೆ ಮೂಲ

ಮೈಸೂರಿನ ಆಗ್ನೇಯದ ಅಂಚಿನ ಉದ್ದಕ್ಕೂ ಹರಿದು, ಹೊಗೇನಕಲ್ಲಿನ ಬಳಿ ಮತ್ತೆ ಧುಮುಕಿ, ಕೊನೆಗೆ ಮೈಸೂರನ್ನು ಬೀಳ್ಕೊಂಡು ತಮಿಳುನಾಡಿಗೆ ತಿರುಗುವ ವೇಳೆಗೆ ನದಿಯ ದಿಕ್ಕು ಎರಡು ಬಾರಿ ಬದಲಾಗುತ್ತದೆ. ಹೊಗೇನಕಲ್ಲಿನ ಬಳಿ ದಕ್ಷಿಣಾಭಿಮುಖ ಮತ್ತು ಬೋಡಮಲೈ ಬೆಟ್ಟದ ಬಳಿ ಪೂರ್ವಾಭಿಮುಖ, ಸ್ವಲ್ಪ ದೂರ ಹೀಗೆ ಸಾಗುವಲ್ಲಿ ಪುನಃ ಅದು ದಕ್ಷಿಣಕ್ಕೆ ಬಾಗುತ್ತದೆ. ಪಾಲಾರಿನ ನೀರನ್ನೂ ಒಳಗೊಂಡು ಮುಂದುವರಿ ಯುವ ಕಾವೇರಿಗೆ ಮೆಟ್ಟೂರಿನ ಬಳಿಯಲ್ಲಿ ಒಂದು ಎತ್ತರ ಕಟ್ಟೆ ಕಟ್ಟಲಾಗಿದೆ. ೫,೩೦೦ ಉದ್ದ ೧೭೬ ಎತ್ತರದ ಕಟ್ಟೆಯಿದು, ವಿದ್ಯುದುತ್ಪಾದನೆಯೂ ನೀರಾವರಿ ಸೌಲಭ್ಯ ಕಲ್ಪನೆಯೂ ಇದರ ಉದ್ದೇಶ. ಮೆಟ್ಟೂರು ಜಲಾಶಯದಿಂದಾಗಿ ತಂಜಾವೂರಿನ ಕಾವೇರಿ ಬಯಲಿಗೆ ನೀರು ಸರಬರಾಜಾಗುವ ಭರವಸೆ ಏರ್ಪಟ್ಟಿದೆ.

ಮೆಟ್ಟೂರಿನಿಂದ ಮುಂದೆ ಭವಾನಿಯವರೆಗೆ ದಕ್ಷಿಣ ದಿಕ್ಕಿನಲ್ಲಿ ಹರಿಯುವ ಕಾವೇರಿಗೆ ಆ ಎಡೆಯಲ್ಲಿ ಪಶ್ಚಿಮದಿಂದ ಹರಿದು ಬರುವ ಭವಾನಿ ನದಿ ಸಂಗಮಿಸುತ್ತದೆ. ಮತ್ತೆ ಪೂರ್ವಾಭಿಮುಖವಾಗಿ ಹರಿಯುವ ಕಾವೇರಿಯ ಚರ್ಯೆಯೇ ಮುಂದೆ ಬದಲಾಗುತ್ತದೆ. ಸಮುದ್ರ ಹತ್ತಿರ ವಾದಂತೆಲ್ಲ ಅದರದು ಗಂಭೀರ ಗಮನ, ಪಾತ್ರವೂ ವಿಸ್ತಾರ, ಅದರ ದಡದುದ್ದಕ್ಕೂ ಹಲವಾರು ಪಟ್ಟಣಗಳು ಮಾಲೆಯಾಗಿ ಹಬ್ಬಿವೆ.

(ಮುಂದುವರಿಯುವುದು)

(ಸಂಗ್ರಹ) ಜಿ. ಚಿದ್ವಿಲಾಸ್

ಮಡಿಕೇರಿ.