ಕಣಿವೆ, ಆ. ೭: ಬೀದಿ ನಾಯಿಗಳೆಂದರೆ ಛೀ,,, ಥೂ,,, ಎಂದು ಹೆದರಿಸಿ ಗದರಿಸಿ ಅವುಗಳ ಮೇಲೆ ಕಲ್ಲೆಸೆಯುವವರಿಗೇನು ಕೊರತೆಯಿಲ್ಲ. ಈ ಭೂಮಿ ಮೇಲೆ ಬುದ್ಧಿಜೀವಿಗಳೆನಿಸಿದ ನರಮಾನವನಿಗೆ ಇರುವಷ್ಟೇ ಬದುಕುವ ಹಕ್ಕು ಪ್ರತೀ ಜೀವಿಗಳಿಗೂ ಇದೆ. ಹಾಗೆಯೇ ಶ್ವಾನಗಳಿಗೂ ಉಂಟು.

ಆದರೆ ಬೀದಿನಾಯಿಗಳ ಊಟೋಪಚಾರಕ್ಕೆ ಗಮನ ಹರಿಸುವವರು ವಿರಳವಾಗಿರುವ ಈ ಕಾಲದಲ್ಲಿ ಕುಶಾಲನಗರದ ಚರ್ಮ ವೈದ್ಯರೊಬ್ಬರು ತಮ್ಮ ಮನೆಯಂಗಳದಲ್ಲಿ ಈ ಬೀದಿ ನಾಯಿಗಳನ್ನು ಸಾಕುವ ಮೂಲಕ ಅವುಗಳ ಉಪಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಅಷ್ಟಕ್ಕೂ ಆ ವೈದ್ಯರ ಹೆಸರು ಡಾ. ಸಿದ್ದುಪ್ರಕಾಶ್. ಕುಶಾಲನಗರದ ರಥಬೀದಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಖಾಸಗಿಯಾಗಿ ಚರ್ಮರೋಗಕ್ಕೆ ಸಂಬAಧಿಸಿದ ಕ್ಲಿನಿಕ್ ನಡೆಸುತ್ತಿದ್ದಾರೆ. ಇವರ ಈ ಪ್ರಾಣಿ ಪ್ರೀತಿಗೆ ಇವರ ಪತ್ನಿ ಡಾ.ಅಂಜಲಿ ಹಾಗೂ ಪುತ್ರಿ ಡಾ. ಇಕ್ಷುದ ಅವರೂ ಕೂಡ ನೆರವಾಗುತ್ತಿದ್ದಾರೆ.

ಕಳೆದ ಒಂದೂವರೆ ವರುಷಗಳ ಹಿಂದೆ ಬಾಧಿಸಿದ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಇಡೀ ಊರು - ಕೇರಿ, ಬಡಾವಣೆಗಳು ಲಾಕ್ ಡೌನ್ ಆದಾಗ ಅಂಗಡಿ - ಮುಂಗಟ್ಟು, ಹೊಟೇಲ್‌ಗಳು ಕೂಡ ಮುಚ್ಚಿದಾಗ ಆಹಾರ ಸಿಗದೇ ಹಾಹಾಕಾರ ಪಡುತ್ತಿದ್ದ ಕೆಲವು ಬೀದಿನಾಯಿಗಳನ್ನು ಕಂಡ ಇವರು ಕಾವೇರಿ ನದಿ ದಂಡೆಯ ಆದಿಶಂಕರಾಚಾರ್ಯ ಬಡಾವಣೆಯ ತಮ್ಮ ಮನೆಯಂಗಳದಲ್ಲಿ ಈ ಶ್ವಾನಗಳಿಗೆ ಆಶ್ರಯ ನೀಡಿ ಉಪಚಾರಕ್ಕೆ ಮುಂದಾದರು.

ಇವುಗಳಿಗೆ ಬೆಳಗ್ಗೆ ಬಿಸ್ಕತ್, ಹಾಲು, ಮಧ್ಯಾಹ್ನ ಹಾಲು ಅನ್ನ , ಮತ್ತೆ ಸಂಜೆ ಮೊಟ್ಟೆ, ಪೆಡಿಗ್ರಿನ್, ಬಿಸ್ಕತ್, ಹಾಲು ಹಾಗೂ ವಾರದಲ್ಲಿ ಎರಡು ಬಾರಿ ಹೊಟೇಲ್‌ಗಳಿಂದ ಖರೀದಿಸಿ ತಂದ ಮಾಂಸವನ್ನು ಉಣ ಬಡಿಸುತ್ತಿದ್ದಾರೆ. ತಮ್ಮದೇ ಆದ ಮೆನು ಸಿದ್ದಪಡಿಸಿದ ಈ ವೈದ್ಯ ಕುಟುಂಬ ಈ ಶ್ವಾನಗಳನ್ನು ಬಹಳ ಪ್ರೀತಿ, ಅಭಿಮಾನದಿಂದ ಆರೈಕೆ ಮಾಡತೊಡಗಿದೆ. ಇವುಗಳಿಗೆ ಮಳೆಗಾಲದ ಸಂದರ್ಭ ತಮ್ಮ ಮನೆಯಂಗಳದಲ್ಲಿ ಬೆಚ್ಚಗೆ ಮಲಗಲು ಗೋಣಿ ಚೀಲಗಳನ್ನು ತಂದು ಹಾಸಿಗೆ ಮಾಡಿ ಹಾಸಿಕೊಡಲಾಗುತ್ತಿದೆ. ಅಷ್ಟೇ ಅಲ್ಲ, ಈ ಶ್ವಾನಗಳ ಪೈಕಿ ಕೆಲವು ಮನೆಯಂಗಳದಲ್ಲಿ ಮಲ ಮೂತ್ರ ವಿಸರ್ಜಿಸಿದರೂ ಕೂಡ ಬೇಸರಿಸದೇ ಈ ಕುಟುಂಬ ಸದಸ್ಯರು ಉಪಚರಿಸುತ್ತಿದ್ದಾರೆ.

ಕೆಲವೊಂದು ಶ್ವಾನಗಳು ಅನಾರೋಗ್ಯಕ್ಕೆ ತುತ್ತಾದ ಸಂದರ್ಭ ಅವುಗಳನ್ನು ಪ್ರಾಣಿಗಳ ಆರೈಕೆ ಮಾಡುವ ಖಾಸಗಿ ಕ್ಲಿನಿಕ್‌ಗಳಿಗೆ ಕೊಂಡೊಯ್ದು ಹಣ ವ್ಯಯಿಸಿ ಅವುಗಳಿಗೆ ಶಸ್ತ್ರಚಿಕಿತ್ಸೆಗಳನ್ನು ಕೂಡ ಮಾಡಿಸಿ ಆರೈಕೆ ಮಾಡಲಾಗುತ್ತಿದೆ. ಕುಶಾಲನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ ಎಂಬ ಆರೋಪದಿಂದಾಗಿ ಬೀದಿ ನಾಯಿಗಳನ್ನು ಹಿಡಿಯಲು ಮುಂದಾದ ಪಂಚಾಯಿತಿ ಸಿಬ್ಬಂದಿಯೋರ್ವರು ಈ ವೈದ್ಯರ ಪ್ರೀತಿಗೆ ಪಾತ್ರವಾಗಿದ್ದ ಶ್ವಾನವೊಂದನ್ನು ಕೊಂಡೊಯ್ದ ಸಂದರ್ಭ ವೈದ್ಯ ಸಿದ್ದುಪ್ರಕಾಶ್ ಭಾವುಕರಾಗಿದ್ದ ಕುರಿತು ಸ್ವತಃ ಸಿದ್ದುಪ್ರಕಾಶ್ ಪತ್ನಿ ದಂತ ವೈದ್ಯೆ ಡಾ. ಅಂಜಲಿ ಸಿದ್ದೇಶ್ ‘ಶಕ್ತಿ’ ತಿಳಿಸಿದರು.

ಪಂಚಾಯಿತಿಯವರು ಶ್ವಾನಗಳನ್ನು ಹಿಡಿಯುವ ಕಾರ್ಯಾಚರಣೆ ಮಾಡಿದರೂ ಕೂಡ ಅವುಗಳ ಜೀವಕ್ಕೆ ಹಾನಿಯಾಗದಂತೆ ಹಾಗೂ ಅವುಗಳಿಗೆ ಯಾವುದೇ ಘಾಸಿಯಾಗದಂತೆ ಜೋಪಾನವಾಗಿ ಹಿಡಿದು ಶ್ವಾನಗಳ ಆರೈಕೆ ಕೇಂದ್ರದಲ್ಲಿಟ್ಟು ಸಂರಕ್ಷಿಸಬೇಕೆAದು ಹೇಳುವ ಶ್ವಾನ ರಕ್ಷಕ ಡಾ. ಸಿದ್ದುಪ್ರಕಾಶ್, ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ. ರಂಗಸ್ವಾಮಿ ಸೇರಿದಂತೆ ಬಡಾವಣೆಯ ನೆರೆಮನೆ ನಿವಾಸಿಗಳು ಕೂಡ ನಮ್ಮ ಶ್ವಾನಗಳ ಆರೈಕೆಯಲ್ಲಿ ಸಹಕಾರಿಯಾಗುತ್ತಿದ್ದಾರೆ ಎಂದು ಡಾ. ಸಿದ್ದುಪ್ರಕಾಶ್ ಸ್ಮರಿಸಿದರು.

ಮನುಷ್ಯನಿಗೆ ಸಮನಾದ ಬುದ್ಧಿವಂತಿಕೆ ಹಾಗೂ ಗುಣಗಳಲ್ಲಿ ಮಿಗಿಲಾಗಿರುವ ಶ್ವಾನಗಳು ತನ್ನ ಪಾಲಕನಿಗೆ ಸದಾ ವಿಧೇಯತೆ ತೋರುವ ಕಾರಣ ಎಲ್ಲರೂ ಅವುಗಳನ್ನು ಸಂರಕ್ಷಿಸುವ, ಉಪಚರಿಸುವ ಕಾರ್ಯಕ್ಕೆ ಮುಂದಾಗಬೇಕಿದೆ. ಒಂದು ವೇಳೆ ಇವುಗಳ ಹಿತ ಬಯಸದಿದ್ದರೂ ಅವುಗಳನ್ನು ಕೊಲ್ಲುವ ಕೆಲಸಕ್ಕೆ ಮುಂದಾಗಬೇಡಿ ಎಂದು ಸುಮಾರು ೧೦ ಬೀದಿ ನಾಯಿಗಳನ್ನು ಆರೈಕೆ ಮಾಡುತ್ತಿರುವ ಡಾ. ಸಿದ್ದುಪ್ರಕಾಶ್ ಮನವಿ ಮಾಡುತ್ತಾರೆ.

-ಕೆ.ಎಸ್. ಮೂರ್ತಿ