ಸೋಮವಾರಪೇಟೆ, ಆ. ೭: ಲೋಕೋಪಯೋಗಿ ಇಲಾಖೆ ಮೂಲಕ ನಿರ್ಮಾಣಗೊಂಡಿರುವ ಕನ್ನಳ್ಳಿಕಟ್ಟೆ-ಕುಮಾರಳ್ಳಿ-ಪುಷ್ಪಗಿರಿ ರಸ್ತೆಯಲ್ಲಿ ಬಿರುಕು ಮೂಡಿದ್ದು, ರಸ್ತೆ ಕುಸಿದು ಸಂಚಾರಕ್ಕೆ ತಡೆಯಾಗುವ ಆತಂಕ ಎದುರಾಗಿದೆ.
ಲೋಕೋಪಯೋಗಿ ಇಲಾಖೆ ಮೂಲಕ ೮ ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಯೋಜನೆಯ ಪ್ರಕಾರ ಇನ್ನೂ ಅರ್ಧದಷ್ಟು ರಸ್ತೆ ನಿರ್ಮಾಣವಾಗಬೇಕಿದೆ.
ನಿರ್ಮಾಣಗೊಂಡ ಕೆಲವೇ ತಿಂಗಳುಗಳಲ್ಲಿ ಕನ್ನಳ್ಳಿಕಟ್ಟೆ-ಕುಮಾರಳ್ಳಿ-ಪುಷ್ಪಗಿರಿ ರಸ್ತೆಯಲ್ಲಿ ಬಿರುಕು ಮೂಡಿದ್ದು, ರಸ್ತೆಯ ಒಂದು ಬದಿ ಕುಸಿಯುವ ಭೀತಿ ಎದುರಾಗಿದೆ. ಇಲ್ಲಿ ಕುಸಿತಗೊಂಡರೆ ಪುಷ್ಪಗಿರಿ ಸಂಪರ್ಕಕ್ಕೆ ತಡೆಬೀಳಲಿದ್ದು, ಆ ವ್ಯಾಪ್ತಿಯ ಮಂದಿ ಸಂಪರ್ಕ ಕಳೆದುಕೊಳ್ಳುವ ಆತಂಕ ಮೂಡಿದೆ.
ಕುಮಾರಳ್ಳಿ ಗ್ರಾಮದ ಬಳಿಯಲ್ಲಿ ರಸ್ತೆ ಬಿರುಕು ಬಿಟ್ಟಿರುವುದರಿಂದ ತಕ್ಷಣ ಪರಿಹಾರೋಪಾಯ ಕಾರ್ಯ ಕೈಗೊಳ್ಳಬೇಕೆಂದು ಶಾಂತಳ್ಳಿ ಗ್ರಾ.ಪಂ. ಮಾಜೀ ಅಧ್ಯಕ್ಷ ಬಗ್ಗನ ಅನಿಲ್ಕುಮಾರ್ ಸೇರಿದಂತೆ ಕುಮಾರಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.