ಸೋಮವಾರಪೇಟೆ, ಆ. ೭: ತಾಲೂಕಿನ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಯಲಕನೂರು-ಹೊಸಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ.
ಗ್ರಾಮಕ್ಕೆ ಸಮೀಪವಿರುವ ನೇರಳೆ ಅರಣ್ಯದಿಂದ ಬರುತ್ತಿರುವ ೪ ಕಾಡಾನೆಗಳ ಹಿಂಡು ಪ್ರತಿದಿನ ಹಾನಿ ಮಾಡುತ್ತಿದ್ದು, ಕೃಷಿಕರು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಕಾಫಿ, ಸುವರ್ಣ ಗೆಡ್ಡೆ, ಶುಂಠಿ, ಮರಗೆಣಸು, ಸಿಹಿಗೆಣಸು, ಜೋಳ, ತರಕಾರಿ ಬೆಳೆಗಳನ್ನು ಕಾಡಾನೆಗಳು ನಾಶಪಡಿಸುತ್ತಿವೆ.
ಆನೆ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ಕರೆ ಮಾಡಿದರೆ ಕೆಲ ಸಿಬ್ಬಂದಿಗಳು, ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಪರಿಹಾರಕ್ಕೆ ಅರ್ಜಿ ಕೊಡಿ ಎಂದು ಸಲಹೆ ನೀಡುತ್ತಿದ್ದಾರೆ. ನಮಗೆ ಸರ್ಕಾರ ನೀಡುವ ಬಿಡಿಗಾಸು ಪರಿಹಾರ ಬೇಡ; ಶಾಶ್ವತ ಪರಿಹಾರ ಬೇಕು. ಕಾಡಾನೆಗಳು ಕೃಷಿ ಹಾಗೂ ಜನವಸತಿ ಪ್ರದೇಶಕ್ಕೆ ಆಗಮಿಸದಂತೆ ಆನೆ ಕಂದಕ, ಸೋಲಾರ್ ಬೇಲಿ ನಿರ್ಮಿಸಬೇಕೆಂದು ಹೊಸಳ್ಳಿ ಗ್ರಾಮದ ಪ್ರಮೋದ್ ಆಗ್ರಹಿಸಿದ್ದಾರೆ.
ನಿನ್ನೆ ರಾತ್ರಿ ಅರಣ್ಯದಿಂದ ಬಂದಿರುವ ಕಾಡಾನೆಗಳು, ಹೊಸಳ್ಳಿ ಗ್ರಾಮದ ಪೊನ್ನಪ್ಪ ಅವರಿಗೆ ಸೇರಿದ ಕಾಫಿ, ಕ್ಯಾನೆ ಗೆಣಸು, ಮಾದಪ್ಪ ಅವರಿಗೆ ಸೇರಿದ ಮರಗೆಣಸು, ಶುಂಠಿ, ನಯನ, ಕುಶಾಲಪ್ಪ, ಸಚಿನ್ ಅವರುಗಳಿಗೆ ಸೇರಿದ ಕೃಷಿ ಪ್ರದೇಶದಲ್ಲಿ ದಾಂಧಲೆ ನಡೆಸಿವೆ. ಒಮ್ಮೆ ಕಾಫಿ ತೋಟಕ್ಕೆ ಕಾಡಾನೆಗಳು ಲಗ್ಗೆಯಿಟ್ಟರೆ ಕನಿಷ್ಟ ೫೦ ರಿಂದ ೬೦ ಕಾಫಿ ಗಿಡಗಳು ನಷ್ಟಗೊಳ್ಳುತ್ತಿವೆ. ಅನೇಕ ವರ್ಷಗಳಿಂದ ಬೆಳೆಸಿದ ಗಿಡಗಳು ಕಾಡಾನೆ ಧಾಳಿಗೆ ಸಿಲುಕಿ ನಾಶಗೊಳ್ಳುತ್ತಿದ್ದು, ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಈ ಭಾಗದ ಕೃಷಿಕರು ಒತ್ತಾಯಿಸಿದ್ದಾರೆ.