ಬಿಕ್ಕಟ್ಟು ಅಂತ್ಯಕ್ಕೆ ಪ್ರಧಾನಿ ಮಧ್ಯಪ್ರವೇಶಿಸಲಿ: ಆರ್‌ಜೆಡಿ ಸಂಸದ ಆಗ್ರಹ

ನವದೆಹಲಿ, ಆ. ೮: ಪೆಗಾಸಸ್ ವಿಷಯವಾಗಿ ಸಂಸತ್ ಕಲಾಪ ವ್ಯರ್ಥವಾಗುತ್ತಿದ್ದು, ಬಿಕ್ಕಟ್ಟು ನಿವಾರಿಸಲು ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕೆಂದು ಮನೋಜ್‌ಕುಮಾರ್ ಝಾ ಆಗ್ರಹಿಸಿದ್ದಾರೆ. ವ್ಯರ್ಥ, ಪೋಲಾಗಿರುವ ಸಮಯಕ್ಕೆ ಪರಿಹಾರವಾಗಿ ಸಂಸತ್ ಅಧಿವೇಶನವನ್ನು ವಿಸ್ತರಿಸಬೇಕೆಂದು ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಒತ್ತಾಯಿಸಿದ್ದಾರೆ. ವಿಪಕ್ಷಗಳ ನಾಯಕರ ಪೈಕಿ ರಾಜ್ಯಸಭೆಯಲ್ಲಿ ಸರ್ಕಾರದ ವಿರುದ್ಧ ಧ್ವನಿ ಎತ್ತಿರುವ ಮನೋಜ್ ಕುಮಾರ್ ಝಾ, "ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತ್ನಿಸಲಾಗುತ್ತಿದೆ" ಎಂಬ ಸರ್ಕಾರದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ವಿಶ್ವಾಸಕ್ಕೆ ತೆಗೆದುಕೊಳ್ಳುವ ಸೋಗಿನಲ್ಲಿ ಸರ್ಕಾರ ಮಾತುಕತೆಯ ಬಾಗಿಲನ್ನು ಬಂದ್ ಮಾಡುತ್ತಿದೆ" ಎಂದು ಮನೋಜ್ ಕುಮಾರ್ ಝಾ ಆರೋಪಿಸಿದ್ದಾರೆ. "ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ತಲುಪುವ ಕಲ್ಪನೆಯನ್ನು ಜನರಲ್ಲಿ ಮೂಡಿಸುತ್ತಿರುವವರಿಗೆ ವಿಪಕ್ಷಗಳಿಗೆ ಸ್ಪಷ್ಟವಾಗಿ ತಿಳಿಸುವುದಕ್ಕೆ ಆದೇಶ ಸಿಗದೇ ಇರಬಹುದು" ಎಂದು ಮೋದಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಪುಟ ಸ್ಥಾನಮಾನ ತಿರಸ್ಕರಿಸಿದ ಯಡಿಯೂರಪ್ಪ

ಬೆಂಗಳೂರು, ಆ. ೮: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ತಮಗೆ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನವನ್ನು ಹಿಂದಕ್ಕೆ ಪಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವನ್ನು ಆಗ್ರಹಪಡಿಸಿದ್ದಾರೆ. ತಮಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ರೀತಿ ಗುರುಕಾಣಿಕೆಯಾಗಿ ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವಂತೆ ಆದೇಶ ಮಾಡಿದ್ದರು. ಏಕೋ ಏನೋ ೨೪ ಗಂಟೆಯೊಳಗೆ ಸರಕಾರಿ ಆದೇಶವನ್ನು ಯಡಿಯೂರಪ್ಪ ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಕುರಿತು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ನಿಕಟಪೂರ್ವ ಮುಖ್ಯಮಂತ್ರಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳು ಮಾತ್ರ ನನಗೆ ಸಾಕು. ಸಂಪುಟ ದರ್ಜೆಯ ಸ್ಥಾನ ನೀಡಿ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕೋರಿದ್ದಾರೆ.