ಶನಿವಾರಸಂತೆ, ಆ. ೬: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದ ಕಾಫಿ ತೋಟಗಳಿಗೆ ಶುಕ್ರವಾರ ಬೆಳಿಗ್ಗೆ ನುಗ್ಗಿದ ಮರಿಯಾನೆ ಸೇರಿದಂತೆ ೭ ಕಾಡಾನೆಗಳು ದಾಂಧಲೆ ಎಬ್ಬಿಸಿ ಬೆಳೆ ಹಾನಿಪಡಿಸಿವೆ.

ಇದೇ ಮೊದಲ ಬಾರಿಗೆ ಕಾಡಾನೆಗಳು ಹಾರಳ್ಳಿ ಗ್ರಾಮದ ತೋಟಗಳಿಗೆ ದಾಳಿ ಇಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗುರುವಾರ ಪಕ್ಕದ ಅಜ್ಜಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಆನೆಗಳನ್ನು ಶನಿವಾರಸಂತೆ ವಲಯ ಅರಣ್ಯ ಇಲಾಖೆಯವರು ಪಟಾಕಿ ಸಿಡಿಸಿ ಮಾಲಂಬಿ ಬೆಟ್ಟದತ್ತ ಓಡಿಸಿದ್ದರೂ, ಅವು ರಾತ್ರಿ ಹಾರಳ್ಳಿ ಪ್ರವೇಶಿಸಿ ಲಕ್ಷಿö್ಮÃನಾರಾಯಣ ಅವರ ತೋಟದಲ್ಲಿ ಶುಕ್ರವಾರ ಬೆಳಿಗ್ಗೆ ೬ ಗಂಟೆಯವರೆಗೂ ಬೀಡುಬಿಟ್ಟಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಎರಡೂವರೆ ಎಕರೆ ಕಾಫಿ ತೋಟದಲ್ಲಿ ೧೦೦ ಕಾಫಿ ಗಿಡಗಳು, ಅನೇಕ ಬಾಳೆಗಿಡಗಳು, ಕಾಳುಮೆಣಸಿನ ಬಳ್ಳಿ, ಶುಂಠಿ ಇತ್ಯಾದಿ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸಿವೆ. ಸುಮಾರು ರೂ.೩ ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ. ಶನಿವಾರಸಂತೆ ವಲಯ ಅರಣ್ಯ ಇಲಾಖೆಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದೇವೆ ಎಂದು ಬೆಳೆಗಾರ ಲಕ್ಷಿö್ಮÃನಾರಾಯಣ ಅವರ ಪುತ್ರ ಎಚ್.ಎಲ್. ರಘು ತಿಳಿಸಿದರು.

ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಅವರು ಪ್ರತಿಕ್ರಿಯಿಸಿ, ಕಾಡಾನೆಗಳು ನುಗ್ಗಿ ಬೆಳೆ ಹಾನಿಪಡಿಸಿರುವ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಬೆಳೆ ಹಾನಿ ಪ್ರಮಾಣವನ್ನು ಆಧರಿಸಿ, ಸರ್ಕಾರದ ನಿಯಮಾನುಸಾರ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಳಾಗುವುದು ಎಂದು ಹೇಳಿದರು.