ಸುಂಟಿಕೊಪ್ಪ,ಆ.೬: ಕೊಡಗಿನಲ್ಲಿ ಕೋವಿಡ್ ೧೯ ಪ್ರಕರಣ ಅಧಿಕಗೊಂಡ ಸಂದರ್ಭದಲ್ಲಿ ಜಿಲ್ಲಾಡಳಿತ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕಿಯರನ್ನು ಕೋವಿಡ್ ಕೇಂದ್ರಗಳಲ್ಲಿ ನಿಯೋಜಿಸಿದರು. ಇದೀಗ ಕೋವಿಡ್ ೧೯ ಕಡಿಮೆಯಾದಾಗ ಅವರುಗಳನ್ನು ಕೆಲಸದಿಂದ ಬಿಡುಗಡೆ ಮಾಡಿರುವ ಕ್ರಮ ಸರಿಯಲ್ಲ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎಂ.ಲತೀಫ್ ತಿಳಿಸಿದ್ದಾರೆ.

ಕೊಡಗಿನಲ್ಲಿ ಕೋವಿಡ್ ೧೯ ಪ್ರಕರಣಗಳು ತೀವ್ರಗೊಂಡಾಗ ಜಿಲ್ಲಾಡಳಿತ ೬ ತಿಂಗಳ ಅವಧಿಗೆ ಶುಶ್ರೂಷಕಿಯರನ್ನು ಗುತ್ತಿಗೆ ಆಧಾರದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ತುರ್ತು ಸೇವೆಗೆ ಸೇರಿಸಿಕೊಂಡಿದ್ದರು. ದೂರದ ನಗರ ಪ್ರದೇಶಗಳಲ್ಲಿ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ಗಳು ತವರು ಜಿಲ್ಲೆಯಲ್ಲಿ ಕೆಲಸ ದೊರಕಿದರೆ ಒಳಿತು ಎಂದು ನಗರ ಪ್ರದೇಶದ ಸೇವೆಯನ್ನು ಬಿಟ್ಟು ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಸೇರಿಕೊಂಡಿದ್ದರು. ಇದೀಗ ಕೊರೊನಾ ಸೋಂಕು ವಿರಳಗೊಂಡಿದ್ದರಿAದ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದರಿಂದ ಅವರ ಬದುಕು ಅತಂತ್ರವಾಗಿದೆ. ಬೇರೆಡೆ ಕೆಲಸಕ್ಕೆ ಸೇರುವಂತಿಲ್ಲ. ಇಲ್ಲಿನ ಕೆಲಸವು ಇಲ್ಲವಾಗಿದೆ. ಜಿಲ್ಲೆಯ ತಾಲೂಕು ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಶ್ರೂಷಕಿಯರ ಕೊರತೆಯಿದ್ದು, ಅವರುಗಳನ್ನು ಅಲ್ಲಿನ ಕೇಂದ್ರಕ್ಕೆ ನಿಯುಕ್ತಿಗೊಳಿಸಬೇಕಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ.ಲತೀಫ್ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.