ಸಿದ್ದಾಪುರ, ಆ. ೬: ಕೇರಳ ರಾಜ್ಯದಿಂದ ಬರುವವರನ್ನು ತಪಾಸಣೆ ಮಾಡಲು ಅಮ್ಮತ್ತಿಯಲ್ಲಿ ತಪಾಸಣಾ ಕೇಂದ್ರವನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಂಡು ಬಂದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದ್ದು, ತಪಾಸಣಾ ಕೇಂದ್ರ ಪ್ರಾರಂಭಿಸುವAತೆ ಸೂಚಿಸಿದ್ದರು. ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗಕ್ಕೆ ಕೇರಳದಿಂದ ಜನರು ಆಗಮಿಸುತ್ತಿದ್ದಾರೆ. ಇವರುಗಳನ್ನು ವೀರಾಜಪೇಟೆಯ ಮಾಕುಟ್ಟ ಚೆಕ್‌ಪೋಸ್ಟ್ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ಆದರೆ ಅಮ್ಮತ್ತಿ ಮಾರ್ಗವಾಗಿ ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಭಾಗಗಳಿಗೆ ಕೇರಳದಿಂದ ಬರುವವರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಮ್ಮತ್ತಿಯಲ್ಲಿ ತಪಾಸಣಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕಂದಾಯ ಇಲಾಖಾಧಿಕಾರಿಗಳು ಹಾಗೂ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನು ಕೇಂದ್ರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಶುಕ್ರವಾರದಂದು ಕೇರಳದಿಂದ ಬರುವ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿ ಮಾಹಿತಿ ಪಡೆದುಕೊಳ್ಳಲಾಯಿತು. ದಿನದ ೨೪ ಗಂಟೆಗಳೂ ಅಧಿಕಾರಿಗಳು ವಾಹನವನ್ನು ತಪಾಸಣೆ ಮಾಡಲಿದ್ದಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ತಪಾಸಣಾ ಕೇಂದ್ರವನ್ನು ಅಮ್ಮತ್ತಿಯಲ್ಲಿ ಪ್ರಾರಂಭಿಸಿ ಬ್ಯಾರಿಕೇಡ್ ಇಟ್ಟು ನಾಮಫಲಕ ಅಳವಡಿಸಲಾಗಿದೆ. ಸ್ಥಳದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಭಾನುಪ್ರಿಯ, ಗ್ರಾಮಲೆಕ್ಕಿಗರಾದ ಗೌಡಜ, ಶ್ರೀಕಾಂತ್, ಪೊಲೀಸ್ ಮುಖ್ಯಪೇದೆ ಸುಕುಮಾರ್, ಗ್ರಾಮ ಸಹಾಯಕರಾದ ಮಂಜು, ಹ್ಯಾಂಡ್ರೋ ಹಾಜರಿದ್ದರು.