ಕುಶಾಲನಗರ, ಆ. ೬: ಕೆಲವೇ ದಿನಗಳಲ್ಲಿ ವಾಲ್ಮಿಕಿ ಸಮುದಾಯ ಸೇರಿದಂತೆ ರಾಜ್ಯದ ೫೪ ಹಿಂದುಳಿದ ಪಂಗಡಗಳ ಪ್ರತ್ಯೇಕ ಸಚಿವಾಲಯ ಕಾರ್ಯಾರಂಭ ಮಾಡುವ ಬಗ್ಗೆ ಸರ್ಕಾರ ಭರವಸೆ ವ್ಯಕ್ತ ಪಡಿಸಿದೆ ಎಂದು ದಾವಣೆಗೆರೆಯ ರಾಜನಹಳ್ಳಿ ಹರಿಹರ ವಾಲ್ಮೀಕಿ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದ್ದಾರೆ. ಅವರು ಕುಶಾಲನಗರಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಗ್ಗೆ ಈಗಾಗಲೇ ಸರ್ಕಾರ ಕ್ರಿಯಾಯೋಜನೆ ರೂಪಿಸಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಬಗ್ಗೆ ಪೂರ್ವಭಾವಿ ಸಿದ್ಧತೆಗಾಗಿ ಪ್ರತೀ ಜಿಲ್ಲೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಈ ಸಂಬAಧ ಪ್ರವಾಸ ಕೈಗೊಳ್ಳಲಾಗಿದೆ ಎಂದು ಮಾಹಿತಿ ಒದಗಿಸಿದರು.

ಜಾತ್ರಾ ಸಮಿತಿ ಸದಸ್ಯರಾದ ಕುಶಾಲನಗರ ವಾಲ್ಮಿಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಎನ್. ಅಶೋಕ್ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಸುಮಾರು ೧೭ ಸಾವಿರ ಮಂದಿ ವಾಲ್ಮಿಕಿ ಜನಾಂಗದವರಿದ್ದು, ಅವರ ಕ್ಷೇಮಾಭಿವೃದ್ಧಿಗೆ ಸಂಘ ನಿರಂತರ ಕಾರ್ಯ ನಿರ್ವಹಿಸುತ್ತಿದೆ ಎಂದರಲ್ಲದೇ, ಜನಾಂಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಶ್ರೀಗಳು ಕೊಡಗಿನ ವಾಲ್ಮಿಕಿ ಜಾತ್ರಾ ಸಮಿತಿ ಸೇರಿದಂತೆ ಸಮುದಾಯದ ಐವರಿಗೆ ಗೌರವ ಸಮರ್ಪಣೆ ಮಾಡಿದರು. ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯೆ ಕೆ.ಆರ್ ಮಂಜುಳಾ, ವೀರಾಜಪೇಟೆ ವಾಲ್ಮಿಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಬಿ.ಟಿ ಸುರೇಶ್, ಸೋಮವಾರಪೇಟೆಯ ಸಂಘದ ಅಧ್ಯಕ್ಷ ಶಿವಾನಂದಪ್ಪ, ಕೃಷ್ಣ ಸೇರಿದಂತೆ ಐವರನ್ನು ಗೌರವಿಸಲಾಯಿತು.