ಮಡಿಕೇರಿ, ಆ. ೬: ಪ್ರಸ್ತುತ ಜಿಲ್ಲೆಯಲ್ಲಿ ಮಳೆಗಾಲದ ಚಿತ್ರಣ ಮುಂದುವರಿಯುತ್ತಿದ್ದರೂ ಸಾಧಾರಣ ರೀತಿಯಲ್ಲಿ ಮಳೆಯಾಗುತ್ತಿದೆ. ಜಿಲ್ಲೆಯ ಬಹುತೇಕ ಕಡೆ ಮಳೆಯ ತೀವ್ರತೆ ಕಡಿಮೆ ಇದೆ. ಆದರೆ ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ತಾ. ೫ ರಂದು ಹೆಚ್ಚಿನ ಮಳೆಯಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ನಗರಕ್ಕೆ ನಾಲ್ಕೂವರೆ ಇಂಚಿನಷ್ಟು ಮಳೆ ಸುರಿದಿದೆ. ತಾ. ೫ರ ರಾತ್ರಿಯಿಡೀ ಅಧಿಕ ಮಳೆಯಾಗಿದೆ. ಆದರೆ ತಾ. ೬ ರಂದು ಮಳೆ ಒಂದಷ್ಟು ಇಳಿಮುಖವಾದಂತೆ ಕಂಡು ಬಂದಿತು.
ಮಡಿಕೇರಿ ನಗರಕ್ಕೆ ಜನವರಿಯಿಂದ ಈ ತನಕ ೧೦೧.೯೦ ಇಂಚು ಮಳೆಯಾಗಿದೆ. ಕಳೆದ ಇಡೀ ವರ್ಷದಲ್ಲಿ ಮಡಿಕೇರಿ ನಗರಕ್ಕೆ ಒಟ್ಟು ೧೪೪.೯೦ ಇಂಚು ಮಳೆಯಾಗಿತ್ತು. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೩೮ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೦೭, ವೀರಾಜಪೇಟೆ ೦.೭೧ ಹಾಗೂ ಸೋಮವಾರಪೇಟೆಯಲ್ಲಿ ೧.೩೭ ಇಂಚು ಮಳೆಯಾಗಿದೆ.
ಶಾಂತಳ್ಳಿ ಹೋಬಳಿ ಹಾಗೂ ಮಡಿಕೇರಿ ಕಸಬಾದಲ್ಲಿ ೨೪ ಗಂಟೆ ಅವಧಿಯಲ್ಲಿ ಹೆಚ್ಚಿನ ಮಳೆ ಬಿದ್ದಿದೆ. ಮಡಿಕೇರಿ ಕಸಬಾದಲ್ಲಿ ೩.೬೧ ಹಾಗೂ ಶಾಂತಳ್ಳಿಯಲ್ಲಿ ೩.೧೬ ಇಂಚು ಮಳೆ ಸುರಿದಿದೆ. ಉಳಿದಂತೆ ಭಾಗಮಂಡಲ ೨.೬೧, ನಾಪೋಕ್ಲು ೧.೦೯, ಸಂಪಾಜೆಗೆ ೧ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕಸಬಾಕ್ಕೆ ೧.೮೦ ಶನಿವಾರಸಂತೆ ಹೋಬಳಿಯಲ್ಲಿ ೧ ಇಂಚು, ಸುಂಟಿಕೊಪ್ಪ ೧.೨೪, ವೀರಾಜಪೇಟೆ ಕಸಬಾದಲ್ಲಿ ೧.೧೭ ಇಂಚು ಮಳೆಯಾಗಿದೆ. ಇನ್ನಿತರ ಹೋಬಳಿಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಕಂಡು ಬಂದಿದೆ.