ವೀರಾಜಪೇಟೆ, ಆ. ೬: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯದ ಪಾತ್ರ ಅಗತ್ಯವಾಗಿದ್ದು, ಉದ್ಯಮ ಶೀಲತೆಯು ಒಂದು ಸವಾಲಾಗಿದೆ ಈ ಸವಾಲನ್ನು ಎದುರಿಸಲು ನೈಪುಣ್ಯತೆ, ಕೌಶಲ್ಯ ಅತ್ಯಗತ್ಯ ಎಂದು ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಅಭಿಪ್ರಾಯ ವ್ಯಕ್ತಪಡಿಸಿದರು.

ವೀರಾಜಪೇಟೆಯ ಸಂತ ಅನ್ನಮ್ಮ ಪದವಿ ಕಾಲೇಜಿನಲ್ಲಿ ನಡೆದ ಕೌಶಲ್ಯ ಮತ್ತು ಉದ್ಯಮಶೀಲತೆ ಘಟಕದ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮದಲೈಮುತ್ತು ಅವರು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯೆ ಯೊಂದಿಗೆ ವೃತಿಪರ ಮಾರ್ಗದರ್ಶ ನವನ್ನು ಹಾಗೂ ಜೀವನಕ್ಕೆ ಬೇಕಾಗುವ ಮೌಲ್ಯಯುತವಾದ ಸಲಹೆಗಳನ್ನು ಸಾಮಾನ್ಯ ಜ್ಞಾನ ಸೇರಿದಂತೆ ವೃತ್ತಿ ಕೌಶಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲೆಯ ಸಿಇಡಿಓಕೆಯ ಜಂಟಿ ನಿರ್ದೇಶಕ ಎಂ. ಮಂಜುನಾಥ ಸ್ವಾಮಿ ಹಾಗೂ ಉದ್ಯಮಶೀಲತೆಯ ಮೈಸೂರು ವಿಭಾಗದ ತರಬೇತುದಾರ ಎಂ. ವಿರೂಪಾಕ್ಷಪ್ಪ ವಿದ್ಯಾರ್ಥಿಗಳಿಗೆ ಕೌಶಲ್ಯ, ವೃತ್ತಿ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲ ರೆ. ಫಾ. ರೋನಿ ರವಿಕುಮಾರ್ ಮಾತನಾಡಿ ಉದ್ಯಮ ಶೀಲತೆಯು ಒಂದು ಗುಂಪನ್ನು ಒಗ್ಗೂಡಿಸುವ ವೇದಿಕೆಯಾಗಿದೆ. ವಿದ್ಯಾರ್ಥಿಗಳು ವ್ಯವಹಾರ ಜ್ಞಾನವನ್ನು ಬೆಳೆಸಿಕೊಂಡು ಉತ್ತಮ ಉದ್ಯಮಿಗಳಾಗಬೇಕು ಎಂದರು. ವೇದಿಕೆಯಲ್ಲಿ ಘಟಕದ ಸಂಚಾಲಕ ಅಜಯ್ ಮ್ಯಾಥ್ಯೂ ಹಾಗೂ ಐಕ್ಯೂಎಸಿ ಸಂಚಾಲಕಿ ತೃಪ್ತಿ ಹಾಜರಿದ್ದರು.

ವಿವಿಧ ಕಾಲೇಜುಗಳ ವಿದ್ಯಾರ್ಥಿ ಗಳು ಸಾಮಾಜಿಕ ಅಂತರ ಪಾಲನೆ ಯೊಂದಿಗೆ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.