ಮಡಿಕೇರಿ, ಆ. ೬: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿರುವ ಹಿನ್ನೆಲೆ ಕೊಡಗು-ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸ ಬೇಕೆಂದು ಅಧಿಕಾರಿಗಳಿಗೆ ನೆರೆ ಹಾಗೂ ಕೋವಿಡ್ ನಿರ್ವಹಣಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್-೧೯ ನಿರ್ವಹಣೆ ಹಾಗೂ ನೆರೆಹಾವಳಿ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಪ್ರಮಾಣ ಏರಿಕೆ ಯಾಗದಂತೆ ಕೆಲಸ ಮಾಡಬೇಕಾಗಿ ರುವುದು ಅಧಿಕಾರಿಗಳ ಕರ್ತವ್ಯವಾಗಿದೆೆ. ಇಚ್ಛಾಶಕ್ತಿಯೊಂದಿಗೆ ಅಧಿಕಾರಿಗಳು ಕೆಲಸ ಮಾಡಬೇಕು. ಜನಪ್ರತಿನಿಧಿಗಳ ಸಲಹೆ ಸ್ವೀಕರಿಸಬೇಕು.

(ಮೊದಲ ಪುಟದಿಂದ) ಏನಾದರೂ, ಕೊರೊನಾ ಪಾಸಿಟಿವಿಟಿ ರೇಟ್ ಶೇ ೫ ಕ್ಕಿಂತ ಹೆಚ್ಚಾದರೆ ಲಾಕ್‌ಡೌನ್ ಅನಿವಾರ್ಯವಾಗುತ್ತದೆ. ಆದ್ದರಿಂದ ಸಮಸ್ಯೆ ತಲೆದೋರದಂತೆ ಎಚ್ಚರಿಕೆವಹಿಸಬೇಕು. ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಬರುವವರು ಕಡ್ಡಾಯವಾಗಿ ನೆಗೆಟಿವ್ ವರದಿ ಸಲ್ಲಿಸಬೇಕು. ಆಗಿದ್ದಲ್ಲಿ ಮಾತ್ರ ಪ್ರವೇಶ ನೀಡಬೇಕು ಎಂದರು.

ಗಡಿಯಲ್ಲಿ ಮುಂಜಾಗ್ರತೆ ಇಲ್ಲ

ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸ್ವಾö್ಯಬ್ ಪರೀಕ್ಷೆ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷö್ಯತನ ಎದ್ದು ಕಾಣುತ್ತಿದೆ. ಕೇರಳ ಗಡಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸುತ್ತಿಲ್ಲ. ಕೇರಳದಿಂದ ಯಾವುದೇ ಅಡ್ಡಿ ಇಲ್ಲದೆ ಕೊಡಗಿಗೆ ಬಂದಿರುವ ಘಟನೆ ನಡೆದಿದೆ. ಈ ಹಿನ್ನೆಲೆ ಗಡಿಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕು. ಜಿಲ್ಲಾಡಳಿತ ಕಚೇರಿ ಮೂಲಕ ಗಡಿಯ ಪರಿಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ಮಾಡಬಹುದು. ಹಲವು ಬಾರಿ ಕ್ಯಾಮರಾ ಅಳವಡಿಕೆಗೆ ಹೇಳಿದ್ದರೂ, ಜಿಲ್ಲಾಡಳಿತ ಈ ಬಗ್ಗೆ ಕ್ರಮಕೈಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೆಗೆಟಿವ್ ವರದಿ ಇದ್ದರೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಿ. ಹಣ ಪಡೆದು ವಾಹನಗಳನ್ನು ಬಿಟ್ಟರೆ ಅಂತಹ ಸಿಬ್ಬಂದಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಿ. ಜೊತೆಗೆ ಗಡಿಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಚೆಕ್‌ಪೋಸ್ಟ್ನಲ್ಲಿ ಸಮಸ್ಯೆ

ಚೆಕ್‌ಪೋಸ್ಟ್ನಲ್ಲಿ ಮೂಲಭೂತ ವ್ಯವಸ್ಥೆಗಳಾದ ಶೌಚಾಲಯ, ಶೆಡ್, ವಿಶ್ರಾಂತಿ ಕೊಠಡಿ ಇಲ್ಲದ ಬಗ್ಗೆ ಶಾಸಕ ಕೆ.ಜಿ.ಬೋಪಯ್ಯ ಸಚಿವರ ಗಮನ ಸೆಳೆದರು. ಇದರಿಂದ ಸಿಬ್ಬಂದಿಗಳಿಗೆ ಸಮಸ್ಯೆಗಳಾಗಿವೆ. ಅನುದಾನ ಲಭ್ಯತೆ ಇದ್ದರು ವ್ಯವಸ್ಥೆ ಕಲ್ಪಿಸಲು ತಡಮಾಡಲು ಕಾರಣವೇನೆಂದು ಪ್ರಶ್ನಿಸಿದರು. ಸಚಿವ ಶ್ರೀನಿವಾಸ್ ಪೂಜಾರಿ, ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ೧೫ ದಿನದೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗೆ ನಿರ್ದೇಶಿಸಿದರು.

ನಿರ್ಮಿತಿ ಕೇಂದ್ರದ ಅಧಿಕಾರಿ ಸಚಿನ್, ಅನುದಾನ ಲಭ್ಯವಾದಲ್ಲಿ ಒಂದು ತಿಂಗಳಿನೊಳಗೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.

ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಸಚಿವರು ಗರಂ ಆದರು. ತಾಲೂಕು ತಹಶೀಲ್ದಾರ್‌ಗಳು ಗಡಿಯಲ್ಲಿ ಮುನ್ನೆಚ್ಚರಿಕೆ ವಹಿಸದ ಬಗ್ಗೆ, ಸೂಕ್ತ ವ್ಯವಸ್ಥೆ ಇಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ವೀರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್, ಸರಕು ಸಾಗಾಣೆ ವಾಹನ ಚಾಲಕರಿಗೆ ಗಡಿಯಲ್ಲಿ ರ‍್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ನಡೆಸುವಂತೆ ಮನವಿ ಮಾಡಿದರು.

ಆ್ಯಂಬುಲೆನ್ಸ್ಗಳಿಗೆ ಹಣ ನೀಡಿಲ್ಲ

ಆ್ಯಂಬುಲೆನ್ಸ್ಗಳಾಗಿ ಪರಿವರ್ತಿಸಲಾಗಿರುವ ಖಾಸಗಿ ವಾಹನಗಳÀ ಮಾಲೀಕರಿಗೆ ಹಣ ಸಮರ್ಪಕವಾಗಿ ಸಂದಾಯವಾಗುತ್ತಿಲ್ಲ. ಕೋವಿಡ್ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಿದ ಚಾಲಕರು ಈ ಬಗ್ಗೆ ದೂರುತ್ತಿದ್ದಾರೆ ಎಂದು ಕೆ.ಜಿ.ಬೋಪಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಮಾತನಾಡಿ, ವಾಹನ ಚಾಲಕರು ಸಂಚರಿಸಿದ ಕಿಲೋ ಮೀಟರ್ ಮಾಹಿತಿ ಸಮರ್ಪಕವಾಗಿ ದಾಖಲಿಸುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ. ಹಲವರಿಗೆ ಹಣ ಸಂದಾಯವಾಗಿದೆ. ಮಾಹಿತಿ ದಾಖಲಿಸದ ಕೆಲವು ಚಾಲಕರಿಗೆ ಮಾತ್ರ ಹಣ ಸಂದಾಯವಾಗಿಲ್ಲ ಎಂದರು.

ಒಂದು ಅಂಬ್ಯುಲೆನ್ಸ್ನಲ್ಲಿ ೯ ಸೋಂಕಿತರನ್ನು ಕರೆದುಕೊಂಡು ಹೋಗಿದ್ದಾರೆ. ಇದಕ್ಕೆ ಕಾರಣವೇನೆಂದು ಅಧಿಕಾರಿಗಳನ್ನು ಬೋಪಯ್ಯ ಪ್ರಶ್ನಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್, ಇದು ತನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು. ಸಚಿವ ಶ್ರೀನಿವಾಸ್ ಪೂಜಾರಿ, ಈ ಬಗ್ಗೆ ತನಿಖೆ ನಡೆಸಿ, ಯಾಕಾಗಿ ಈ ರೀತಿ ಮಾಡಲಾಗಿದೆ ಎಂದು ತಿಳಿದುಕೊಳ್ಳುವಂತೆ ಹೇಳಿದರು.

ವೈದ್ಯಕೀಯ ಸಿಬ್ಬಂದಿಗಳಿಗೆ ಸರಿಯಾಗಿ ವೇತನವಾಗದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಇದಕ್ಕೆ ಜಿಲ್ಲಾಧಿಕಾರಿ ಉತ್ತರಿಸಿ ಕೆಲವೇ ದಿನದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ಮೆಡಿಕಲ್ ಕಾಲೇಜು ಡೀನ್ ಡಾ. ಕೆ. ಕಾರ್ಯಪ್ಪ ಮಾತನಾಡಿ, ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುವಂತೆ ಸರಕಾರ ಆದೇಶಿಸಿದೆ. ಈ ಹಿನ್ನೆಲೆ ಅವರನ್ನು ತೆಗೆದು ಹಾಕಲಾಗುತ್ತಿದೆ. ಅವರಿಗೆ ಸೇರಬೇಕಾದ ವೇತನವನ್ನು ಪಾವತಿಸಲಾಗುವುದು ಎಂದರು.

ಮಳೆಹಾನಿ ಪರಿಹಾರ ತಲುಪಿಸಿ

ಮಳೆಯಿಂದ ಮನೆ ಕಳೆದುಕೊಂಡ ಹಾಗೂ ಹಾನಿಯಾದವರಿಗೆ ತಲುಪಬೇಕಾದ ಪರಿಹಾರವನ್ನು ತ್ವರಿತವಾಗಿ ತಲುಪಿಸುವಂತೆ ಸಚಿವರು ಸೂಚನೆ ನೀಡಿದರು. ಮನೆ ಕಳೆದುಕೊಂಡವರಿಗೆ ಪ್ರಥಮ ಹಂತವಾಗಿ ರೂ. ೧ ಲಕ್ಷವನ್ನು ಪಾವತಿಸಬೇಕು. ಯಾವುದೇ ಕಾರಣಕ್ಕೂ ತಡವಾಗಬಾರದು. ಕಾನೂನಿನೊಂದಿಗೆ ಮಾನವೀಯತೆಯಲ್ಲಿಯೂ ಕೆಲಸ ಮಾಡಬೇಕು ಎಂದರು. ತಂತ್ರಾAಶ ಸಮಸ್ಯೆಯಿಂದ ಹಣ ಪಾವತಿ ತಡವಾಗುತ್ತಿದೆ ಎಂದಾದರೆ ಶಾಸಕರಿಗೆ ಮಾಹಿತಿ ನೀಡಿ, ಅದನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹರಿಸಲಾಗುತ್ತದೆ ಎಂದರು.

ಬೆಳೆಹಾನಿ ಬಗ್ಗೆ ತೋಟಗಾರಿಕೆ, ಕೃಷಿ ಇಲಾಖೆ ಹಾಗೂ ಕಾಫಿ ಮಂಡಳಿ ಜಂಟಿ ಸರ್ವೇ ಕೈಗೊಂಡು ನಷ್ಟದ ಬಗ್ಗೆ ವರದಿ ಸಲ್ಲಿಸಬೇಕು. ನಿಖರವಾದ ಮಾಹಿತಿಯನ್ನು ಸರಕಾರಕ್ಕೆ ಸಲ್ಲಿಸಬೇಕು. ಜಾನುವಾರು ಪ್ರಾಣಹಾನಿಯಾದ ಪ್ರಕರಣಗಳಿಗೆ ಪರಿಹಾರ ತಲುಪಿಸಿ ಎಂದು ನಿರ್ದೇಶಿಸಿದರು.

ಅಮಾನತ್ತಿನ ಎಚ್ಚರಿಕೆ

ಉಪವಿಭಾಗಧಿಕಾರಿ ಕಚೇರಿಯ ಕೆಲವು ಸಿಬ್ಬಂದಿ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತನೆ ಮಾಡುತ್ತಿಲ್ಲ. ಕೀಳುಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂಬ ದೂರಿದೆ. ಅದು ಮುಂದುವರಿದರೆ ಜನರೇ ಹೊಡೆಯುತ್ತಾರೆ. ಕೆಲಸ ಸಿಗುವ ತನಕ ಅಲೆದಾಟ ನಡೆಸುತ್ತಾರೆ. ಕೆಲಸ ಸಿಕ್ಕ ಮೇಲೆ ಸ್ಪಂದನ ಮಾಡುವುದಿಲ್ಲ. ನಿಮ್ಮ ಕಚೇರಿ ಸಿಬ್ಬಂದಿಗಳನ್ನು ಬಿಗಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಎಸಿಗೆ ಸಲಹೆ ನೀಡಿದರು.

ಅದಕ್ಕೆ ಸಚಿವರು ಪ್ರತಿಕ್ರಿಯಿಸಿ,ಅಂತಹ ಸಿಬ್ಬಂದಿಗೆ ಮೊದಲು ಎಚ್ಚರಿಕೆ ನೀಡಿ. ತಮ್ಮ ತಪ್ಪು ತಿದ್ದಿಕೊಳ್ಳದಿದ್ದರೆ ಅಮಾನತು ಮಾಡಿ ವರದಿ ನೀಡಿ ಎಂದು ಹೇಳಿದರು.

ಸಾರ್ವಜನಿಕರಿಗೆ ಸ್ಪಂದಿಸಲು ಸಾಧ್ಯವಾಗಲ್ಲ ಎನ್ನುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ಆಕ್ರೋಶದಿಂದ ನುಡಿದರು.

ಗ್ರಾಮ ಮಟ್ಟದ ಟಾಸ್ಕ್ಫೋರ್ಸ್ ಸಮಿತಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು, ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಸಮಿತಿ ಪದಾಧಿಕಾರಿಗಳು ನಿತ್ಯ ಚರ್ಚೆ ಮಾಡಿ ಆ ಗ್ರಾಮದ ವಸ್ತುಸ್ಥಿತಿ ಅರಿಯಬೇಕು. ಸೋಂಕಿನ ಪ್ರಮಾಣ ಇಳಿಕೆಗೆ ಕ್ರಮಕೈಗೊಳ್ಳಬೇಕು ಎಂದ ಅವರು, ಟಾಸ್ಕ್ಫೋರ್ಸ್ ಸಮಿತಿ ಮೂರು ದಿನಕ್ಕೊಮ್ಮೆ ಕೋವಿಡ್ ನಿಯಂತ್ರಣ ಸಂಬAಧ ಸಭೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ, ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಉಪವಿಭಾಗಧಿಕಾರಿ ಈಶ್ವರ್ ಕುಮಾರ್ ಖಾಂಡು ಹಾಜರಿದ್ದರು.