ಮಡಿಕೇರಿ, ಆ. ೫: ಕೊಡಗು ಜಿಲ್ಲೆ ಸತತ ವರ್ಷಗಳಿಂದ ಭೀಕರ ಮಳೆಗಾಲವನ್ನು ಎದುರಿಸುತ್ತಿದ್ದು, ಜಿಲ್ಲೆಯ ಜನತೆಯ ಬದುಕು ಶೋಚನೀಯವಾಗುತ್ತಿದೆ. ಮಲೆನಾಡು ಜಿಲ್ಲೆಯಾಗಿರುವ ಕೊಡಗು ಕೃಷಿ ಪ್ರಧಾನವಾಗಿದ್ದು, ಇಲ್ಲಿನ ರೈತರು - ಬೆಳೆಗಾರರು ನಿರಂತರವಾಗಿ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ.

೨೦೧೮ರಲ್ಲಿ ಕೊಡಗು ಈ ಹಿಂದೆAದೂ ಕಂಡು - ಕೇಳರಿಯದಂತಹ ಪರಿಸ್ಥಿತಿಯನ್ನು ಪ್ರಥಮ ಬಾರಿಗೆ ಎದುರಿಸಿತ್ತು. ಭಾರೀ ಮಳೆ - ಗಾಳಿಯಿಂದಾಗಿ ಸಾಕಷ್ಟು ದುರಂತಗಳು ಘಟಿಸಿದ್ದವು. ಜಲಪ್ರಳಯ, ಭೂಕುಸಿತ, ಬೆಟ್ಟಜರಿತ, ರಸ್ತೆ ಸಂಪರ್ಕ ಕಡಿತದಂತಹ ಪ್ರಕರಣಗಳೊಂದಿಗೆ ಸಾವು - ನೋವುಗಳು ಸೇರಿ ಭಯದ ವಾತಾವರಣವೇ ಆ ವರ್ಷ ಕಂಡು ಬಂದಿತ್ತು. ಜಿಲ್ಲೆಯಲ್ಲಿ ೨೦೧೮ರಲ್ಲಿ ಸರಾಸರಿ ೧೬೫ ಇಂಚು (೪೧೧೪.೮ ಮಿ.ಮೀ.) ಮಳೆಯಾದರೆ, ವಿವಿಧ ಕಡೆಗಳಲ್ಲಿ ೨೦೦ ರಿಂದ ೨೫೦ ಇಂಚಿನಷ್ಟು ಭಾರೀ ಮಳೆ ಆ ವರ್ಷ ಸುರಿದಿತ್ತು. ವಿವಿಧ ರೀತಿಯ ದುರಂತಗಳು, ಕೃಷಿ ಫಸಲುಗಳೆಲ್ಲವೂ ನೆಲಕಚ್ಚಿದ್ದು, ವ್ಯಾಪಾರೋದ್ಯಮ ತೀರಾ ಕುಸಿದಿತ್ತು. ಅಲ್ಲಿಂದ ಶುರುವಾದ ಪ್ರಾಕೃತಿಕ ವಿಕೋಪ ಕೊಡಗನ್ನು ಸತತ ನಾಲ್ಕು ವರ್ಷಗಳಿಂದಲೂ ತತ್ತರಿಸುವಂತೆ ಮಾಡಿದೆ.

೨೦೧೮ರಲ್ಲಿ ಜಿಲ್ಲಾ ಸರಾಸರಿ ಮಳೆ ೧೬೫ ಇಂಚು ಹಾಗೂ ವಿವಿಧೆಡೆಗಳಲ್ಲಿ ೨೦೦ ಕ್ಕಿಂತಲೂ ಹೆಚ್ಚಾಗಿದ್ದರೆ, ೨೦೧೯ರಲ್ಲಿಯೂ ಮತ್ತೆ ದುರಂತ ಎದುರಾಯಿತು. ೨೦೧೮ರಲ್ಲಿ ಮುಕ್ಕೋಡ್ಲು, ಸೂರ್ಲಬ್ಬಿ, ಕಾಲೂರು, ಹಟ್ಟಿಹೊಳೆ, ಇಗ್ಗೋಡ್ಲು, ಮೂವತ್ತೊಕ್ಲು, ಮಕ್ಕಂದೂರು ಸೇರಿದಂತೆ ಮಡಿಕೇರಿ ತಾಲೂಕಿನ ಹಲವೆಡೆ ಭಾರೀ ದುರಂತ ನಡೆದಿದ್ದರೆ, ೨೦೧೯ರಲ್ಲಿ ಭಾಗಮಂಡಲ - ತೋರ ವಿಭಾಗಗಳಲ್ಲಿ ಭಾರೀ ಹಾನಿಯಾಗಿತ್ತು. ಈ ವರ್ಷದಲ್ಲೂ ಜಿಲ್ಲಾ ಸರಾಸರಿ ೧೩೦ ಇಂಚು (ವಿವಿಧ ಪ್ರದೇಶಗಳಲ್ಲಿ ೨೦೦ ಇಂಚುಗಳು) ಮಳೆ ಸುರಿದಿತ್ತು. ಈ ಬಾರಿಯೂ ಸಾಕಷ್ಟು ಹಾನಿಯೊಂದಿಗೆ ಪ್ರಾಣಹಾನಿಗಳೂ ನಡೆದಿವೆ.

೨೦೨೦ರಲ್ಲಿ ಜಿಲ್ಲೆ ಮತ್ತೆ ಆಘಾತ ಎದುರಿಸಿದೆ. ತಲಕಾವೇರಿ ಕ್ಷೇತ್ರದಲ್ಲಿ ಗಜಗಿರಿಬೆಟ್ಟ ಕುಸಿತದೊಂದಿಗೆ ಕಾವೇರಿಯ ಮುಖ್ಯ ಅರ್ಚಕರು ಸೇರಿ ಹಲವರು ಭೂ ಸಮಾಧಿಯಾಗಿ ಹೋಗಿದ್ದರು. ಈ ಮೂರು ವರ್ಷಗಳ ದುರಂತ ಜಿಲ್ಲೆಯ ಪಾಲಿಗೆ ಅತ್ಯಂತ ಕಹಿ ಘಟನೆಯಾಗಿದ್ದು, ಮರೆಯಲಾಗದಂತಾಗಿದೆ. ಈ ಪರಿಸ್ಥಿತಿಗಳಿಂದ ಜಿಲ್ಲೆಯ ಜನರು ತತ್ತರಿಸಲಾರಂಭಿಸಿದ್ದು, ಇನ್ನೂ ಇದರಿಂದ ಚೇತರಿಸಿಕೊಳ್ಳಲಾಗಿಲ್ಲ. ಇದೀಗ ೨೦೨೧ರಲ್ಲೂ ಜನವರಿಯಿಂದಲೇ ಜಿಲ್ಲೆ ಮಳೆಗಾಲವನ್ನು ಎದುರಿಸುತ್ತಿದೆ. ಈ ತನಕ ಬಹುತೇಕ ಎಲ್ಲಾ ತಿಂಗಳಲ್ಲೂ ಮಳೆ ಸುರಿದಿದ್ದು, ಈಗಾಗಲೇ ಜಿಲ್ಲೆಯಲ್ಲಿ ಸರಾಸರಿ ೬೦ ಇಂಚಿಗೂ ಅಧಿಕ ಮಳೆಯಾಗಿದೆ. ಮಡಿಕೇರಿ ನಗರವೂ ಸೇರಿದಂತೆ ಇನ್ನಿತರ ಹಲವು ಭಾಗದಲ್ಲೂ ಮಳೆಯ ಪ್ರಮಾಣ ೧೦೦ ಇಂಚು ದಾಟಿದೆ.

ನಿರಂತರ ಮಳೆಯ ಸನ್ನಿವೇಶದಿಂದಾಗಿ ಜಿಲ್ಲೆಯ ಆರ್ಥಿಕತೆಯ ಬೆನ್ನೆಲುವಾಗಿರುವ ಕಾಫಿ ಫಸಲಿಗೆ ಭಾರೀ ಧಕ್ಕೆಯಾಗುತ್ತಿದೆ. ಅಪಾರ ಪ್ರಮಾಣದಲ್ಲಿ ಕಾಫಿ ಉದುರುವಿಕೆ ಕಂಡು ಬರುತ್ತಿದೆ. ಇದರೊಂದಿಗೆ ಕೊಳೆ ರೋಗ ಭಾದೆಯೂ ಬೆಳೆಗಾರರ ನೆಮ್ಮದಿ ಕೆಡಿಸುತ್ತಿದೆ. ಪ್ರಸ್ತುತ ಆಶ್ಲೇಷ ಮಳೆ ತುಸು ಹೆಚ್ಚಾಗತೊಡಗುತ್ತಿದೆ ನಿರಂತರವಾಗಿ ಮೂರು ವರ್ಷ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಅನಾಹುತಗಳು ಹೆಚ್ಚು ಸಂಭವಿಸಿರುವ ಹಿನ್ನೆಲೆ ಜನತೆ ಒಂದಷ್ಟು ಆತಂಕದಿAದಲೇ ದಿನ ಕಳೆಯುವಂತಾಗಿದೆ. ಮಳೆ ಹೆಚ್ಚಾದಲ್ಲಿ ಕಾಫಿ ಬೆಳೆಗಾರರು ಇನ್ನಷ್ಟು ಸಮಸ್ಯೆ ಎದುರಿಸುವಂತಾಗಲಿದೆ.